ಛಾಪ್ರಾ: ಬಿಹಾರದಲ್ಲಿ ಕಳ್ಳಭಟ್ಟಿ ದುರಂತದ ಮತ್ತೊಂದು ಶಂಕಿತ ಪ್ರಕರಣದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಅಸ್ವಸ್ಥರಾಗಿದ್ದಾರೆ, ಅವರಲ್ಲಿ ಕೆಲವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸರನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ಮೀನಾ ಅವರ ಪ್ರಕಾರ, ಎಲ್ಲಾ ಪ್ರಕರಣಗಳು ಮೇಕರ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಿಂದ ವರದಿಯಾಗಿದ್ದು, ಪ್ರಾಥಮಿಕವಾಗಿ, ಗ್ರಾಮಸ್ಥರು ನಕಲಿ ಮದ್ಯ ಸೇವಿಸಿದ್ದಾರೆಂದು ತೋರುತ್ತಿದೆ. ಇಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎರಡು ಸಾವುಗಳು ಸಂಭವಿಸಿವೆ. ತೀವ್ರ ಅಸ್ವಸ್ಥರ ಪೈಕಿ 10ಕ್ಕೂ ಹೆಚ್ಚು ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸರನ್ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಶಂಕಿತ ಕಳ್ಳಭಟ್ಟಿ ಮಾಡುವವರನ್ನು ಹಿಡಿಯಲು ನಾವು ಮೇಕರ್, ಮರ್ಹೌರಾ ಮತ್ತು ಭೆಲ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸುತ್ತಿದ್ದೇವೆ. ಕಾರ್ಯಾಚರಣೆ ಮುಗಿದ ನಂತರ ಬಂಧಿಸಿದವರ ಸಂಖ್ಯೆಯನ್ನು ಹೇಳಲು ಸಾಧ್ಯವಾಗುತ್ತದೆ.ಈ ವಾರದ ಆರಂಭದಲ್ಲಿ ಬಂದ ನಾಗರ ಪಂಚಮಿ ಹಬ್ಬಕ್ಕೆ ಗಾಂಜಾದಂತಹ ಅಮಲು ಪದಾರ್ಥಗಳ ಸೇವನೆ ರೂಢಿಯಲ್ಲಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ, ಆದರೆ ಕೆಲವರು ಹೆಚ್ಚು ಮದ್ಯಪಾನ ಮಾಡಿದ್ಧರು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ ನಿಂದ ರಾಜ್ಯದಲ್ಲಿ 50 ಕ್ಕೂ ಹೆಚ್ಚು ಜನರು ಕಳ್ಳಭಟ್ಟಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.ಸರನ್ ಈ ವರ್ಷದ ಜನವರಿಯಲ್ಲಿ ಐದು ಕಳ್ಳಭಟ್ಟಿ ಸಾವುಗಳನ್ನು ವರದಿ ಮಾಡಿದ್ದು, ಕಳೆದ ತಿಂಗಳು ಪಾಟ್ನಾದಲ್ಲಿ ನಕಲಿ ಮದ್ಯ ಸೇವಿಸಿ ಇಬ್ಬರು ಸಾವನ್ನಪ್ಪಿದ್ದರು.
ಹಿಂದಿನ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದ ಮಹಿಳೆಯರಿಗೆ ನೀಡಿದ ಚುನಾವಣಾ ಭರವಸೆಯ ನಂತರ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.ಆದಾಗ್ಯೂ, ಕಟ್ಟುನಿಟ್ಟಾದ ನಿಷೇಧ ಕಾನೂನಿನ ಅನುಷ್ಠಾನವನ್ನು ವಿರೋಧ ಪಕ್ಷಗಳು, ನ್ಯಾಯಾಲಯಗಳು ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರಂತಹ ಆಡಳಿತ ಮೈತ್ರಿಕೂಟದ ಪಾಲುದಾರರಿಂದ ಆಗಾಗ್ಗೆ ಟೀಕಿಸಲಾಗುತ್ತಿದೆ.