Advertisement

ಸೇವಾ ಶಿರೋಮಣಿ ಸಿಸ್ಟರ್‌ ನಿವೇದಿತಾ

04:59 PM Oct 29, 2017 | |

They alone live, who live for others rest are more dead than alive ಎಂಬುದು ಸ್ವಾಮಿವಿವೇಕಾನಂದರ ವಿವೋಕಪೂರ್ಣ ನುಡಿಮುತ್ತು. ಬದುಕೆಂಬ ಕದಳಿಯಲ್ಲಿ ಕರ್ಪೂರವಾಗಿ ಉರಿದು, ಸೇವೆಯ ಸೌಗಂಧ ಹರಡಿ ಭೌತಿಕವಾಗಿ ಅಲ್ಲ ಕರ್ತವ್ಯದ ಮೂಲಕವೇ ಅಸ್ತಿತ್ವ ಉಳಿಸಿಕೊಂಡವರು ದಿವ್ಯಾತ್ಮರು.

Advertisement

ತನಗಾಗಿ ಅಲ್ಲ, ಅನ್ಯರಿಗಾಗಿ ಬದುಕುವವರೇ ಮಹಾತ್ಮರು ಎಂಬ ಸ್ವಾಮಿ ವಿವೇಕಾನಂದರ ಈ ತತ್ವ ಸಿದ್ಧಾಂತವನ್ನೇ ಜೀವನದ ಉಸಿರಾಗಿಸಿಕೊಂಡು ಕೋಟಿ ಕೋಟಿ ದೀನ, ಆರ್ತ, ಸಂತ್ರಸ್ತ ಭಾರತೀಯರಿಗಾಗಿ ದುಡಿದು, ಉದಾತ್ತ ಹೃದಯಿಯಾಗಿ ಮಿಡಿದು ಮಡಿದ ಸೇವಾ ಶಿರೋಮಣಿ, ತ್ಯಾಗ ಮೂರ್ತಿ ಸಿಸ್ಟರ್‌ ನಿವೇದಿತಾ ಅವರ 150ನೇ ಜಯಂತಿ ವರ್ಷವಿದು.

ಮಿಸ್‌ ಮಾರ್ಗರೇಟ್‌ ನೋಬೆಲ್‌ ವಿದೇಶ ಸಂಜಾತೆ ಯಾದರೂ ಭಾರತೀಯ ಸಂಸ್ಕೃತಿಯ ಸದುವಿನಯದ ಸಂದೇಶಕ್ಕೆ, ವಿರಾಟ ದರ್ಶನಾದರ್ಶನಕ್ಕೆ ಮಾರು ಹೋದ ಪುಣ್ಯ ಮಹಿಳೆ. ಸ್ವಾಮಿ ವಿವೇಕಾನಂದರ ವಿವೇಕ ಚಿಂತನ ಚಿಂತಾಮಣಿಯ ಅನುಯಾಯಿಯಾಗಿ, ಅವರ ಆಧ್ಯಾತ್ಮಿಕ ಪುತ್ರಿಯಾಗಿ, ಸಾತ್ವಿಕ ಶಿಷ್ಯೆಯಾಗಿ ಸೇವಾದೀಕ್ಷೆ ಹೊತ್ತು ಭಾರತಕ್ಕೆ ಬಂದು ನೆಲೆಸಿ, ಇಲ್ಲಿನ ಮಣ್ಣಲ್ಲಿ
ಮಣ್ಣಾಗಿ ಹೋದರೂ ತಮ್ಮ ನಿಸ್ವಾರ್ಥ ಸೇವೆಯ ಅಸ್ತಿತ್ವದ ಮೂಲಕವೇ ಭಾರತೀಯ ಇತಿಹಾಸದಲ್ಲಿ ಸಿಸ್ಟರ್‌ ನಿವೇದಿತಾ ಎಂಬ ಹೆಸರಿನಿಂದ ಚಿರವಾಗಿ ಉಳಿದ ಅಮರ ಜೀವಿ ನಿವೇದಿತಾ. ಇದು ಸ್ವಾಮಿ ವಿವೇಕಾನಂದರೇ ಪ್ರೀತಿ ವಾತ್ಸಲ್ಯದಿಂದ ಈ ವಿನಯಪೂರ್ಣ ವನಿತೆಗೆ ಇಟ್ಟ ನಾಮದೀಕ್ಷೆ. ಸೋದರಿ ಎಂಬ ಅರ್ಥಪೂರ್ಣ ವಿಶಾಲ ಭಾವಾಮೃತ ತುಂಬಿದ ಈ ಹೆಸರಿನಲ್ಲಿ ಸಾರ್ಥಕ,
ಅನ್ವರ್ಥಕ ಅರ್ಥ ವೈಶಾಲ್ಯ ಸೇರಿಕೊಂಡಿದೆ.

ಮಾರ್ಗರೇಟ್‌ ನೋಬೆಲ್‌ ಹುಟ್ಟಿದ್ದು 28.10.1867 ರಂದು ಐರ್ಲೆಂಡಿನಲ್ಲಿ. ತಂದೆ ಸಾಮ್ಯೂಅಲ್‌ ಹಾಗೂ ತಾಯಿ ಮೇರಿ ಕೂಡಾ ಉದಾತ್ತ ಜೀವಿಗಳೆ. ಸೇವಾ ದೀಕ್ಷೆಗೆ ಒಳಗಾದವರೇ. ಇವರ ಪುರಾತನರು ಪಾದ್ರಿಯಾಗಿದ್ದ  ವರು. ಅಂತೆಯೇ ಸೇವೆ, ತ್ಯಾಗ, ಕರುಣೆಗಳೆಲ್ಲ ಈ ಮನೆತನಕ್ಕೆ ಹೊಸತಾಗಿರಲಿಲ್ಲ. ಹುಟ್ಟಿನಿಂದಲೇ ಮಾರ್ಗರೇಟ್‌ ನೋಬೆಲ್‌ಳಿಗೆ ಸೇವಾ ದೀಕ್ಷೆಯ ಸಂಸ್ಕಾರ
ವಾಗಿತ್ತು. ಭಾರತದಲ್ಲಿ ನೆಲೆಸಿ ಹೋದ ಪಾದ್ರಿಯೊಬ್ಬರು ಮಾರ್ಗರೇಟ್‌ ಚಿಕ್ಕವಳಿದ್ದಾಗಲೇ ಈಕೆ ಭಾರತದ ಸೇವೆಗಾಗಿಯೇ ಹುಟ್ಟಿದ ಪುಣ್ಯಜೀವಿಯೆಂದು ಭವಿಷ್ಯ ನುಡಿದಿದ್ದರಂತೆ, ಈ ಮಾತು ಸತ್ಯವಾಗಲು ವಿವೇಕಾನಂದರೆಂಬ ರಾಮನು ಈ ಅಹಲೆÂಗೆ ವಿಮೋಚನೆ
ನೀಡಲು ಬರಬೇಕಾಯಿತು. ಹುಟ್ಟಿದ ನೆಲದಲ್ಲಿ ಕೂಡ ಮಾರ್ಗ ರೇಟ್‌ ನೋಬೆಲ್‌ ಸರಳ-ನಿರಾಡಂಬರ ಬದುಕು ಸಾಗಿಸಿದರು. ಶಿಕ್ಷಕಿಯಾಗಿ, ಅನಾಥ ರಕ್ಷಕಿಯಾಗಿ ಬಾಳಿದರು.

19ನೇ ಶತಮಾನದ ಆರಂಭದ ವರ್ಷಗಳು ಭಾರತದ ಪಾಲಿಗೆ ಬಹಳ ಕಷ್ಟದ ದಿನಗಳಾಗಿದ್ದವು. ಬಡತನ, ದಾರಿದ್ರ್ಯ, ಗುಲಾಮಗಿರಿ, ಹಸಿವು, ನಿರಕ್ಷರತೆ, ರೋಗ-ರುಜಿನಗಳಿಂದ ಜನರು ತತ್ತರಿಸಿ ಹೋಗಿದ್ದ ದಿನಗಳವು. ಇಂಥ ಸಂದಿಗ್ಧ ಸಮಯದಲ್ಲಿ ಅಂದರೆ
28.1.1898 ರಂದು ಮಾರ್ಗರೇಟ್‌ ನೋಬೆಲ್‌ ಭಾರತಕ್ಕೆ ಬಂದಿಳಿದರು. ಈ ಪುಣ್ಯ ನೆಲದ ಸ್ಪರ್ಶದಿಂದ ದಿವ್ಯಾನುಭವ ಅನುಭವಿಸಿದರು. ಆಧ್ಯಾತ್ಮಿಕ ವಿನೀತ ತ್ಯಾಗ ಮೂರ್ತಿಯಾಗಿ ಹೊರಹೊಮ್ಮಿದರು.

Advertisement

ಬದುಕಿನ ಶಿಲ್ಪಿ, ಗುರುವರ್ಯ ವಿವೇಕಾನಂದರ ಕೃಪಾಕಟಾಕ್ಷದಿಂದ ಜನಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಭಾರತದಂತೆ ತಮ್ಮ ತಾಯ್ನಾಡು ಕೂಡ ಆಗ ಇಂಗ್ಲೆಂಡಿನ ದಾಸ್ಯದಲ್ಲಿತ್ತು. ಅದು ಕೂಡ ಇಂಗ್ಲೆಂಡಿನೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿತ್ತು.

44 ವರ್ಷಗಳ ತುಂಬು ಜೀವನ ನಡೆಸಿದ ಈ ವೀರಸನ್ಯಾಸಿನಿ ತಮ್ಮ ತಾರುಣ್ಯದ ದಿನಗಳನ್ನೆಲ್ಲ ಸೇವೆಗಾಗಿಯೇ ಮುಡಿಪಿಟ್ಟು ಸಕಲರ ಸ್ಫೂರ್ತಿ ಮಾತೆ ಯಾಗಿ, ಕೈಂಕರ್ಯದ ಕಾಮಧೇನುವಾಗಿ, ಭಾರತಾಂಬೆಯ ಹೆಮ್ಮೆಯ ಪುತ್ರಿಯಾಗಿ ಬಾಳಿಬೆಳಗಿದರು. ಯೌವ್ವನವನ್ನು ಧಾರೆಯೆರೆದು ಭರತ ಭೂಮಿಯ ಸೇವೆಗೆ ಸಮರ್ಪಿತಗೊಳ್ಳಬಲ್ಲ ಯುವ ಪಡೆ ವಿವೇಕಾನಂದರಿಗೆ ಬೇಕಾಗಿತ್ತು. ಅಂಥ
ಗುಣ ಸಂಪನ್ನತೆ ಸಿಸ್ಟರ್‌ ನಿವೇದಿತಾರಲ್ಲಿ ಅವರು ಗುರುತಿಸಿ ಈ ದಿವ್ಯ ಚೇತನವನ್ನು ಶಿಷ್ಯೆಯಾಗಿ ಸ್ವೀಕರಿಸಿ ಭಾರತಕ್ಕೆ ಕರೆತಂದರು. ಆದರೆ ವಿಷಾದದ ಸಂಗತಿಯೆಂದರೆ ಇಂಥ ತ್ಯಾಗಮೂರ್ತಿಯ ಪರಿಚಯ ಇಂದಿನ ಪೀಳಿಗೆಯವರಿಗೆ ತಿಳಿದಿಲ್ಲ. ಅಷ್ಟೇ ಏಕೆ ಭಾರತೀಯರ ಸೇವೆಗೆ ತಮ್ಮ ಇಡೀ ಬದುಕನ್ನು ಮುಡುಪಾಗಿಟ್ಟ ಈ ಮಮತಾಮಯಿಯ 150ನೇ ಜಯಂತಿ ವರ್ಷವಿದು ಎನ್ನುವ ಬಗ್ಗೆ ನಮ್ಮನ್ನು ಆಳುವ ದೊರೆಗಳಿಗೂ ಗೊತ್ತಿದ್ದಂತೆ ಕಾಣುತ್ತಿಲ್ಲ. ಸಿಸ್ಟರ್‌ ನಿವೇದಿತಾ ಭಾರತವನ್ನು ತಮ್ಮ ಸೇವಾ ಕ್ಷೇತ್ರವಾಗಿ ಆಯ್ದುಕೊಂಡಾಗ ಅದು ಸುಖದ ಸುಪ್ಪತ್ತಿಗೆ  ಯಾಗಿರಲಿಲ್ಲ. ತನ್ನದಲ್ಲದ ಜನ, ತನ್ನದಲ್ಲದ ನೆಲ, ತನ್ನದಲ್ಲದ ಭಾಷೆ ಇವು ಪರಕೀಯ ಎನಿಸಲೇ ಇಲ್ಲ.

ಭಾರತವೇ ಹೂವಿನ ಹಾಸಿಗೆಯಾಗಿ ಭಾಸವಾಯಿತು. ಇದರ ಮೇಲೆ ಗುರು ವಿವೇಕಾನಂದರ ಆಶೀರ್ವಾದ, ಮಾರ್ಗದರ್ಶನ, ಕರುಣೆಯಿತ್ತು. ಅಂತೆಯೇ ದುರ್ಗಮ ಹಾದಿಯನ್ನು ಆತ್ಮಸ್ಥೆ çರ್ಯದಿಂದ ಕ್ರಮಿಸಿದರು ನಿವೇದಿತಾ. ಪರೋಪಕಾರವೇ ಜೀವನದ ಪರಮೋಚ್ಚಧ್ಯೇಯವೆಂಬ ಭಾರತೀಯ ಸಂಸ್ಕೃತಿಯ ಸಂದೇಶವನ್ನು ಅಕ್ಷರಶಃ ಪಾಲಿಸಿದರು.

ಕಲ್ಕತ್ತೆಯ ಬೇಲೂರಮಠ ಸಿಸ್ಟರ್‌ ನಿವೇದಿತಾ ಕಾರ್ಯಕ್ಷೇತ್ರದ ಕೇಂದ್ರಬಿಂದುವಾಯಿತು. ಕಲ್ಕತ್ತೆ ಕಾರ್ಯಕ್ಷೇತ್ರವಾದರೂ ಭಾರತದ ತುಂಬೆಲ್ಲ ಸಂಚರಿಸಿದರು. ಶಾಲೆ ತೆರೆದು ಶಿಕ್ಷಣ ನೀಡಿದರು. ಆಧ್ಯಾತ್ಮ ಬೋಧಿಸಿದರು. ವಿವೇಕಾನಂದರ ಸಂದೇಶವನ್ನು ಜನಮನದಲ್ಲಿ ಬಿತ್ತಿದರು. ಸೇವೆಗೆ ಜನರನ್ನು ಹುರಿದುಂಬಿಸಿದರು. ವಿದೇಶದಲ್ಲಿಯೂ ಭಾರತೀಯ ಸಂಸ್ಕೃತಿಯ ಆದರ್ಶವನ್ನು
ಪರಿಚಯಿಸಿದರು. ವಿವೇಕಾನಂದರು ಅಗಲಿದಾಗ ದಿಕ್ಕು ತೋಚದೆ ಅಧೀರಳಾದರೂ ಅವರ ಕೊನೆಯ ಕರೆಗೆ ಓಗೊಟ್ಟು ಮತ್ತೆ ಸೇವೆಗೆ ಧುಮುಕಿದರು ನಿವೇದಿತಾ.

ಇಡೀ ಭಾರತವನ್ನು ಸುತ್ತಿ ಅನೇಕ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ ಪಡೆದರು. ಕೆಲವು ದೇಗುಲಗಳಲ್ಲಿ ಸಿಸ್ಟರ್‌ ನಿವೇದಿತಾಗೆ ಪ್ರವೇಶ ನಿರಾಕರಿಸಲಾಯಿತು. ಆದರೂ ಅವರು ನೊಂದುಕೊಳ್ಳಲಿಲ್ಲ. ಪರಿಸ್ಥಿತಿಗೆ ಹೊಂದಿ ಕೊಂಡು ಕರ್ತವ್ಯದಲ್ಲಿ ಮುಂದುವರಿದರು. ಭಾರತಕ್ಕೆ
ಸಮಸ್ತವನ್ನು ಅರ್ಪಿಸಿದ ನಿವೇದಿತಾ ಭಾರತದ ನೆಲದಲ್ಲೇ ತನ್ನ ಪ್ರಾಣ ಅರ್ಪಿಸಿದರು(13-10-1911 ರಂದು ಡಾರ್ಜಿಲಿಂಗ್‌ನಲ್ಲಿ). ಈಗಲೂ ನಿವೇದಿತಾರ ಸ್ಮಾರಕವನ್ನು ಇಲ್ಲಿ ಕಾಣಬಹುದು. ಕಲ್ಕತ್ತೆಯಲ್ಲಿ ಪ್ರಾರಂಭಿಸಿದ ಶಾಲೆ ಈಗಲೂ ಇದೆ. ಅದಕ್ಕೆ ಸಿಸ್ಟರ್‌ ನಿವೇದಿತಾರ ಹೆಸರನ್ನೇ ಇಡಲಾಗಿದೆ. ಯಾಕೆಂದರೆ ಜನಸೇವೆ, ಪರೋಪಕಾರ, ದೇಶಭಕ್ತಿ, ತ್ಯಾಗಬುದ್ಧಿ ಮುಂತಾದವುಗಳು ತೋರಿಕೆ ಅಥವಾ ಪ್ರಚಾರದ ವಸ್ತುಗಳಲ್ಲ ಆಚರಣೆಯಲ್ಲಿ ತರುವ ಮೂಲಕ ಸಾಕ್ಷೀಕರಿಸಬೇಕಾದ ವೃತಾಚರಣೆಗಳೆಂದು ನಿವೇದಿತಾ
ನಂಬಿದ್ದರು. ಅದರಂತೆಯೇ ಅವರು ತಮ್ಮ ಬದುಕನ್ನು ರೂಪಿಸಿಕೊಂಡಿದ್ದರು. ಭಾರತಮಾತೆ ನಿವೇದಿತಾರ ದೃಷ್ಟಿಯಲ್ಲಿ ಸಾಕ್ಷಾತ್‌ ಕಾಳಿಮಾತೆಯೇ ಆಗಿದ್ದಳು. ಕಾಳಿಯನ್ನು ಕುರಿತು ನಿವೇದಿತಾ ರಚಿಸಿದ ವಿದ್ವತ್‌ಪೂರ್ಣ ಕೃತಿಯೇ ಇದಕ್ಕೆ ಸಾಕ್ಷಿ. ಅಲ್ಲದೇ ಈ ಸಂಸ್ಕೃತಿ ಪರಂಪರೆ, ದೇವರನ್ನು ಹಾಗೂ ಸ್ವಾಮಿ ವಿವೇಕಾನಂದರನ್ನು ಕುರಿತಾಗಿ ಅನೇಕ ಪುಸ್ತಕ ಬರೆದರು. ನಿವೇದಿತಾ ಎಂದರೆ ಸಮರ್ಪಿಸಿಕೊಂಡವರು ಎಂದರ್ಥ. ಇವರ ಸಮರ್ಪಿತ ಬದುಕು ಅನುಲಕ್ಷಿಸಿಯೇ ಸ್ವಾಮಿ ವಿವೇಕಾನಂದರು ಪ್ರೀತಿಯ ಶಿಷ್ಯೆಗೆ ಈ ಅನ್ವರ್ಥಕ ನಾಮದೀಕ್ಷೆ ನೀಡಿದ್ದರೆಂಬುದು ಗಮನಾರ್ಹ. ನಿವೇದಿತಾರ ಉಪನ್ಯಾಸ, ಸಂದೇಶಗಳು ಸಂಪೂರ್ಣ ವಿವೇಕಾನಂದರ
ಹಾಗೆಯೇ ಪರಿಣಾಮಕಾರಿಯಾಗಿದ್ದವು. ಇದು ಅವರು ಗುರು ವಿವೇಕಾನಂದರಿಂದ ಪಡೆದ ವಿಶೇಷ ಶಕ್ತಿಯಾಗಿತ್ತೆಂದರೆ ತಪ್ಪಾಗದು. ತ್ಯಾಗ, ಸೇವೆ, ಸಮರ್ಪಣಾಭಾವಗಳ ತ್ರಿವೇಣಿ ಸಂಗಮವಾಗಿದ್ದ ಸಿಸ್ಟರ್‌ ನಿವೇದಿತಾ ಆದರ್ಶಪೂರ್ಣ, ಆದರಣೀಯ ಬದುಕನ್ನು
ಕುರಿತು ಮಾತಾ ಯತೀಶ್ವರಿ ಎಂಬುವರು ಪಿಎಚ್‌.ಡಿ. ಬರೆದಿದ್ದಾರೆ. ಭಾರತ ಸ್ವತಂತ್ರವಾಗಿ ಅದರ ಧ್ವಜವನ್ನು ಎತ್ತಿಹಿಡಿದು ಜಯಕಾರ ಹಾಕುವ ಕನಸು ಇವರದಾಗಿತ್ತು. ಆದರೆ ಆ ಕನಸು ಈಡೇರುವ ಮುನ್ನವೇ ಅಗಲಿದರು.

ಭಾರತೀಯ ಸಂಪ್ರದಾಯದಂತೆಯೇ ಇವರ ಅಂತ್ಯ ಸಂಸ್ಕಾರ ನೆರವೇರಿತು. ಪ್ರಾಣ ಬಿಟ್ಟ ಸಂದರ್ಭದಲ್ಲಿ ಸಿಸ್ಟರ್‌ ನಿವೇದಿತಾ ಬಿಳಿ ಹಂಸದಂತೆ ನೆಲಕ್ಕೊರಗಿದ್ದರೆಂಬ ಉದ್ಗಾರದ ಮಾತುಗಳನ್ನು ಕೇಳಿದಾಗ ಸಹಜವಾಗಿ ಈ ಮಹಾನ್‌ ಚೇತನದ ಬಗ್ಗೆ ಗೌರವಾದರಗಳು
ಹುಟ್ಟುತ್ತವೆ. ಇದನ್ನೇ ಘನವ್ಯಕ್ತಿತ್ವದ ಪ್ರತೀಕ ಎನ್ನಬಹುದು. ಕೇವಲ ಪೊರಕೆ ಹಿಡಿದು ಸ್ವತ್ಛ ಭಾರತ ಚಳುವಳಿಯ ಹರಿಕಾರರೆಂದು ಪ್ರಚಾರ ಗಿಟ್ಟಿಸಿಕೊಳ್ಳಲು ಯತ್ನಿಸುವವರು ನಿವೇದಿತಾ ಆಚರಿಸಿ ತೋರಿದ ಆದರ್ಶಗಳಲ್ಲಿ ಕೆಲವನ್ನಾದರೂ ಅನುಸರಿಸಿದರೆ ಸಾಕು ಖಂಡಿತ ಭಾರತ ಸ್ವತ್ಛ ಭಾರತವಾಗುತ್ತದೆ. ಕೊಳೆಯೇ ತುಂಬಿದ ಇಂದಿನ ರಾಜಕಾರಣವನ್ನು ತೊಳೆಯಲು ಸೇವಾ ಕ್ಷೇತ್ರ ಸಂಸ್ಥಾಪಿತೆ
ನಿವೇದಿತಾರ ಆದರ್ಶಗಳು ಸಹಕಾರಿಯಾಗಬಲ್ಲವಾದರೂ ಇಂಥ ಗುಣ ಸಂಪನ್ನೆಯ 150ನೇ ಜಯಂತಿಯ ಬಗ್ಗೆ ತಾತ್ಸಾರಭಾವ ತಳೆದ ಜನರಿಗೆ ಅವರ ಆದರ್ಶಗಳು ನೆನಪಾಗಲು ಹೇಗೆ ಸಾಧ್ಯ ?

Advertisement

Udayavani is now on Telegram. Click here to join our channel and stay updated with the latest news.

Next