Advertisement

ಸ್ಮಶಾನ ಭೂಮಿ ಸ್ಥಳದ ಸಮಸ್ಯೆ ಇತ್ಯರ್ಥಪಡಿಸಿ

09:50 AM Jul 17, 2021 | Team Udayavani |

ದಾವಣಗೆರೆ: ಕೃಷಿ ಉತ್ಪನ್ನ ಮಾರುಕಟ್ಟೆ ಹಿಂಭಾಗದಲ್ಲಿರುವ ಹಳೇ ಚಿಕ್ಕನಹಳ್ಳಿ ಸ್ಮಶಾನ ಭೂಮಿ ಜಾಗದ ಸಮಸ್ಯೆಯನ್ನು ಜಿಲ್ಲಾಡಳಿತ ಒಂದು ವಾರದಲ್ಲಿ ಇತ್ಯರ್ಥಪಡಿಸದಿದ್ದಲ್ಲಿ ಜಿಲ್ಲಾಧಿಕಾರಿ, ಎಪಿಎಂಸಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಹೆಗ್ಗೆರೆ ರಂಗಪ್ಪ ಎಚ್ಚರಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ 33ನೇ ವಾರ್ಡ್‌ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೆಸರಲ್ಲಿ ಹಳೇ ಚಿಕ್ಕನಹಳ್ಳಿ ಸ್ಮಶಾನದಲ್ಲಿದ್ದ ಅನೇಕ ಸಮಾಧಿಗಳನ್ನ ಏಕಾಏಕಿ ಒಡೆದು ಹಾಕುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ. ಅಭಿವೃದ್ಧಿ ಹೆಸರಲ್ಲಿ ಸ್ಮಶಾನ ಭೂಮಿ ಕಬಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.

ಹಳೇಚಿಕ್ಕನಹಳ್ಳಿ, ಅಣ್ಣಾನಗರ, ಶೇಖರಪ್ಪ ನಗರ, ಎಚ್‌ ಕೆಆರ್‌ ನಗರ, ಕಬ್ಬೂರು ಬಸಪ್ಪ ನಗರ ಒಳಗೊಂಡಂತೆ ವಿವಿಧ ಬಡಾವಣೆಯ ಜನರು ಹಲವಾರು ವರ್ಷಗಳಿಂದಹಳೇ ಚಿಕ್ಕನಹಳ್ಳಿಯ 4-5 ಎಕರೆಯಲ್ಲಿರುವ ಸ್ಮಶಾನದಲ್ಲಿ ಶವಸಂಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದಾರೆ. ಈಗ ಅಕ್ಕಿಮಳಿಗೆ ನಿರ್ಮಾಣ ಇತರೆ ಅಭಿವೃದ್ಧಿ ಹೆಸರಲ್ಲಿ ಅನೇಕ ಸಮಾಧಿಗಳನ್ನು ಒಡೆದು ಹಾಕಲಾಗಿದೆ. ಕೆಲವೇ ಕೆಲವು ಸಮಾಧಿಗಳು ಇದ್ದವು ಎಂಬುದನ್ನ ತೋರಿಸುವುದಕ್ಕಾಗಿ ಕೆಲ ಸಮಾಧಿಗಳನ್ನು ಹಾಗೆಯೇ ಬಿಡಲಾಗಿದೆ ಎಂದು ತಿಳಿಸಿದರು.

ಅನೇಕ ಕುಟುಂಬಗಳ ಹಿರಿಯರ, ಪೂರ್ವಜರ ಸಮಾಧಿ ಒಡೆದು ಹಾಕುವ ಮೂಲಕ ಭಾವನೆಗೆ ಘಾಸಿ ಮಾಡಲಾಗಿದೆ. ಅನೇಕರು ವರ್ಷಕ್ಕೊಮ್ಮೆ ಸಮಾಧಿಗೆ ಪೂಜೆ, ಆರಾಧನೆ ಸಲ್ಲಿಸುತ್ತಿದ್ದರು. ಈಗ ಸಮಾಧಿಗಳನ್ನೇ ಇಲ್ಲದಂತೆ ಮಾಡಲಾಗಿದೆ. ಸಮಾಧಿ ತೆರವುಗೊಳಿಸುವುದು ಮತ್ತು ಕಾಮಗಾರಿ ನಡೆಸುವುದನ್ನ ನಿಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಸ್ಮಶಾನ ಭೂಮಿ ಸಮಸ್ಯೆ ಇತ್ಯರ್ಥ ಆಗುವವರೆಗೆ ಕಾಮಗಾರಿ ನಡೆಸದಂತೆ ಸೂಚಿಸಿದ್ದರೂ ಅಧಿಕಾರಿಗಳು ಕಾಮಗಾರಿ ಮುಂದುವರಿಸಿದ್ದಾರೆ ಎಂದು ದೂರಿದರು. ಕಡುಬಡವರು, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹಳೇ ಚಿಕ್ಕನಹಳ್ಳಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದಾರೆ. ಈಗಅಂತ್ಯಸಂಸ್ಕಾರಕ್ಕೆ ಅವಕಾಶ ಇಲ್ಲದೇ ಕಾರಣಕ್ಕೆ ಬಹಳ ದೂರ ಹೋಗಬೇಕಾಗುತ್ತದೆ. ಬಡವರಿಗೆ ಅದು ಬಹು ದುಬಾರಿ ವೆಚ್ಚದಾಯಕ. ಹಾಗಾಗಿ ಹಳೇಚಿಕ್ಕನಹಳ್ಳಿ ಸ್ಮಶಾನಭೂಮಿಯನ್ನೇ ಉಳಿಸಿಕೊಡಬೇಕು. ಸಮಾಧಿ ತೆರವು ಮಾಡುವುದನ್ನ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಸ್ಮಶಾನಗಳಿಗೆ ಜಾಗ ಹುಡುಕುತ್ತದೆ. ಸ್ಮಶಾನ ಅಭಿವೃದ್ಧಿಪಡಿಸುತ್ತಿದೆ. ಹಳೇ ಚಿಕ್ಕನಹಳ್ಳಿ ಸ್ಮಶಾನಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದ ನೋಡಿದರೆ ಸರ್ಕಾರಕ್ಕೆ ಬಡವರ ಪರ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಜಿಲ್ಲಾಡಳಿತ ಒಂದು ವಾರದಲ್ಲಿ ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಮತ್ತು ಎಪಿಎಂಸಿ ಕಚೇರಿ ಶವವಿಟ್ಟು ಪ್ರತಿಭಟನೆ ನಡೆಸಲಾಗುವುದು. ನ್ಯಾಯ ದೊರೆಯುವತನಕ ಹೋರಾಟಮುಂದುವರಿಸಲಾಗುವುದು ಎಂದು ತಿಳಿಸಿದರು.

Advertisement

ಜಿಲ್ಲಾ ಉಪಾಧ್ಯಕ್ಷ ಬಿ. ಹನುಮಂತಪ್ಪ ಹಳೇಚಿಕ್ಕನಹಳ್ಳಿ, ಸಂತೋಷ್‌ ಎಂ. ನೋಟದವರ, ಅಲ್ಸೆಗ್ಯಾಂಡರ್‌ ಜಾನ್‌, ರಘು, ಮರಿಯಪ್ಪ, ಮಲ್ಲೇಶ್‌, ಸತ್ಯರಾಜ್‌, ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next