Advertisement

ಒಂದು ಲಕ್ಷದ ಗುರಿ ತಲುಪುವ ಇಲಾಖೆ ಪ್ರಯತ್ನಕ್ಕೆ ಹಿನ್ನಡೆ

09:13 PM Dec 24, 2019 | mahesh |

ಮಹಾನಗರ: ಪ್ರಧಾನಮಂತ್ರಿ ಮಾತೃವಂದನ ಯೋಜನೆಯಡಿ ಒಂದು ವಾರದೊಳಗೆ ಒಂದು ಲಕ್ಷ ಫಲಾನುಭವಿಗಳನ್ನು ತಲುಪುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗುರಿ ತಲುಪಲು ಸಾಧ್ಯವಾಗಿಲ್ಲ. ಏಕೆಂದರೆ, ಈ ನೋಂದಣಿ ಸಪ್ತಾಹದಲ್ಲಿ ಕೇವಲ 44,599 ಮಂದಿಯನ್ನಷ್ಟೇ ತಲುಪಲು ಸಾಧ್ಯವಾಗಿದೆ.

Advertisement

ಗರ್ಭಿಣಿಯರಿಗೆ ಪೌಷ್ಟಿಕಾಂಶ ಸಹಿತ ಅಗತ್ಯ ವಸ್ತುಗಳ ಸೇವನೆ ಮತ್ತಿತರ ಅಗತ್ಯಗಳಿಗಾಗಿ ಹಣಕಾಸಿನ ನೆರವು ನೀಡಲು 2017-18ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮಾತೃವಂದನ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಇಲಾಖೆಯು ಡಿ. 2ರಿಂದ 9ರ ವರೆಗೆ ವಿಶೇಷ ನೋಂದಣಿ ಸಪ್ತಾಹ ಆಯೋಜಿಸಿ, 1 ಲಕ್ಷ ಫಲಾನುಭವಿಗಳ ಗುರಿ ನಿಗದಿಪಡಿಸಿತ್ತು. ಆದರೆ, ಏಳು ದಿನಗಳ ಅವಧಿಯಲ್ಲಿ 44,599 ಜನರನ್ನಷ್ಟೇ ತಲುಪಲು ಈ ನೋಂದಣಿ ಸಪ್ತಾಹದಲ್ಲಿ ಸಾಧ್ಯವಾಗಿದೆ. ನೋಂದಣಿಯ ಮುನ್ನ ಮತ್ತು ನೋಂದಣಿಯ ಅನಂತರ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 6,94,796 ಮಂದಿ ಈ ಯೋಜನೆಯಡಿ ಫಲಾನುಭವಿಗಳಾಗಿದ್ದಾರೆ.

ದ.ಕ.: 28,965 ನೋಂದಣಿ
ಮೂರು ವರ್ಷಗಳ ಅವಧಿಯಲ್ಲಿ 28,965 ಮಂದಿ ಫಲಾನುಭವಿಗಳಾಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ಏಳನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 5,739, 2018-19ರಲ್ಲಿ 14,325, 2019-20ನೇ ಸಾಲಿನಲ್ಲಿ ಈವರೆಗೆ 8,901 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ವಿಶೇಷ ಸಪ್ತಾಹದಡಿ ನೋಂದಣಿಯಾದವರು 1681 ಮಂದಿ. ವಿಶೇಷ ನೋಂದಣಿ ಸಪ್ತಾಹದ ವೇಳೆ 976 ಮಂದಿ ಸಹಿತ ಒಟ್ಟು 16,029 ಮಂದಿ ಫಲಾನುಭವಿಗಳನ್ನು ಹೊಂದುವ ಮೂಲಕ ಉಡುಪಿ 21ನೇ ಸ್ಥಾನದಲ್ಲಿದೆ.

ಕೊಡಗಿಗೆ ಕೊನೆ ಸ್ಥಾನ
ಬೆಳಗಾವಿಯಲ್ಲಿ ಸಪ್ತಾಹದ ವೇಳೆ 5,361 ಮಂದಿ ಸೇರ್ಪಡೆಯಾಗುವ ಮೂಲಕ ಒಟ್ಟು 64,045 ಮಂದಿ ಫಲಾನುಭವಿಗಳನ್ನು ಹೊಂದುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಒಟ್ಟು 5,971 ಫಲಾನುಭವಿಗಳನ್ನಷ್ಟೆ ಗುರುತಿಸಲು ಶಕ್ತವಾದ ಕೊಡಗು ಕೊನೆ ಸ್ಥಾನದಲ್ಲಿದೆ. ನೋಂದಣಿ ಸಪ್ತಾಹದಲ್ಲಿ ಕೊಡಗಿನಲ್ಲಿ ಕೇವಲ 132 ನೋಂದಣಿಗಳಾಗಿವೆ.

ಏನಿದು ಮಾತೃವಂದನಾ ಯೋಜನೆ?
ಕೇಂದ್ರ ಮತ್ತು ರಾಜ್ಯ ಸರಕಾರದ 60:40 ಧನಸಹಾಯದಲ್ಲಿ ನಡೆಯುತ್ತಿರುವ ಮಾತೃವಂದನಾ ಯೋಜನೆಯು ಗರ್ಭಿಣಿ ಹಾಗೂ ಬಾಣಂತಿಯರಿಗೆ ಆರೋಗ್ಯ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಪ್ರೋತ್ಸಾಹಧನ ನೀಡುತ್ತಿದೆ. ಗರ್ಭಿಣಿಯಾದ 6 ತಿಂಗಳಲ್ಲಿ ಮೊದಲನೇ ಕಂತಿನ 1 ಸಾವಿರ ರೂ., 6 ತಿಂಗಳ ಅನಂತರ 2 ಸಾವಿರ ರೂ.ಗಳನ್ನು, ಮಗು ಮೊದಲನೇ ಹಂತದ ಚುಚ್ಚುಮದ್ದು ಪಡೆದ ಅನಂತರ 2 ಸಾವಿರ ರೂ. ಸಹಿತ ಒಟ್ಟು 5 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಗರ್ಭಿಣಿಯಾದ 3 ತಿಂಗಳ ಬಳಿಕ ಅಂಗನವಾಡಿ ಕಾರ್ಯಕರ್ತೆಯರಿಂದ ಅರ್ಜಿ ಸ್ವೀಕರಿಸಿ ಅದನ್ನು ತುಂಬಿ ನೀಡಬೇಕು. ಕೆಲವೆಡೆ ಅಂಗನವಾಡಿ ಕಾರ್ಯಕರ್ತೆಯರೇ ಮಾತೃವಂದನ ಯೋಜನೆಯಡಿ ಫಲಾ ನುಭವಿಗಳಾಗಲು ಪ್ರೋತ್ಸಾಹಿಸುತ್ತಾರೆ.

Advertisement

ಸಪ್ತಾಹದಲ್ಲಿ 1,681 ಮಂದಿ ನೋಂದಣಿ
ಮಾತೃವಂದನ ಯೋಜನೆಯ ವಿಶೇಷ ನೋಂದಣಿ ಸಪ್ತಾಹದಡಿ 1,681 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮಾತೃವಂದನಾ ಯೋಜನೆಗೆ ಉತ್ತಮ ಸ್ಪಂದನೆ ಇದೆ. ಇಲಾಖೆಯಿಂದ ಇದರ ಬಗ್ಗೆ ವಿವಿಧ ಮಾಹಿತಿ ಕಾರ್ಯಗಳೂ ನಡೆಯುತ್ತಿವೆ.
 - ಉಸ್ಮಾನ್‌, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ.

ಗರ್ಭಿಣಿಯರೆಲ್ಲ ಪ್ರಯೋಜನ ಪಡೆಯಲಿ
ಮಾತೃವಂದನ ಯೋಜನೆಯಡಿ ರಾಜ್ಯಾದ್ಯಂತ 1 ಲಕ್ಷ ಗುರಿ ಹೊಂದಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ಸಪ್ತಾಹದಲ್ಲಿ 44,599 ಮಂದಿ ಫಲಾನುಭವಿಗಳಾಗಿದ್ದಾರೆ. ಪ್ರತಿಯೊಬ್ಬ ಗರ್ಭಿಣಿಯೂ ಇದರ ಪ್ರಯೋಜನ ಪಡೆಯುವಂತಾಗಲು ಇಲಾಖೆ ಶ್ರಮಿಸಲಿದೆ.
 - ಕೆ.ಎ. ದಯಾನಂದ, ನಿರ್ದೇಶಕರು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next