Advertisement

ಹೊರ ಜಿಲ್ಲೆಯ ಕಟಾವು ಯಂತ್ರಗಳ ಆಗಮನಕ್ಕೆ ಹಿನ್ನಡೆ

01:30 AM Oct 15, 2020 | mahesh |

ಕೋಟ: ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳು ಕಟಾವಿಗೆ ಸಿದ್ಧಗೊಂಡಿವೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಟಾವಿಗೆ ಹಿನ್ನಡೆಯಾಗಿದ್ದು ಬೆಳೆದು ನಿಂತ ಭತ್ತದ ಪೈರಿಗೆ ಹಾನಿಯಾಗುವ ಅಪಾಯ ಎದುರಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಭತ್ತದ ಕೃಷಿಯಲ್ಲಿ ಏರಿಕೆ ಕಂಡಿದ್ದು ಕಳೆದ ಬಾರಿ 34,730 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆದರೆ ಈ ಬಾರಿ 35,754 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ನಡೆದಿತ್ತು. ಮುಂದಿನ ಏಳೆಂಟು ದಿನಗಳಲ್ಲಿ ಕಟಾವಿನ ಪ್ರಮಾಣ ಇನ್ನೂ ಹೆಚ್ಚಿನ ಚುರುಕು ಪಡೆಯಲಿದೆ. ಆದರೆ ಮಳೆ ರೈತರಲ್ಲಿ ಆತಂಕ ತಂದಿದೆ.

Advertisement

ಯಂತ್ರಗಳನ್ನು ತರಲು ಹಿಂದೇಟು
ಪ್ರಸ್ತುತ ಯಂತ್ರಗಳ ಮೂಲಕವೇ ಬಹುತೇಕ ಕಟಾವು ಕಾರ್ಯ ನಡೆಯುತ್ತದೆ. ಪ್ರತಿ ವರ್ಷ ಅಕ್ಟೋಬರ್‌ ಮಧ್ಯ ಭಾಗದಲ್ಲಿ ದಾವಣಗೆರೆ, ರಾಯಚೂರು, ಶಿವಮೊಗ್ಗ, ತಮಿಳುನಾಡು, ಕೇರಳ, ಮುಂತಾದ ಕಡೆಗಳಿಂದ ನೂರಾರು ಯಂತ್ರಗಳು ಜಿಲ್ಲೆಗೆ ಆಗಮಿಸುತ್ತವೆ. ಕಟಾವು ಆರಂಭವಾಗುವ ಸಂದರ್ಭದಲ್ಲೇ ಮಳೆಯ ಪ್ರಮಾಣ ಏರಿಕೆಯಾದರೆ ಕೆಲಸ ಸಿಗದೆ ನಷ್ಟವಾಗುವ ಸಾಧ್ಯತೆ ಇರುವುದರಿಂದ ಯಂತ್ರಗಳನ್ನು ತರಲು ಮಾಲಕರು ಹಿಂದೇಟು ಹಾಕುತ್ತಾರೆ. ಅದೇ ರೀತಿ ಈ ಬಾರಿ ಕೂಡ ಮಳೆ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಯಂತ್ರಗಳು ಜಿಲ್ಲೆಗೆ ಆಗಮಿಸಿಲ್ಲ.

ಮಳೆ ಮುಂದುವರಿದರೆ ನಷ್ಟ ಹೆಚ್ಚಳ
ಒಂದು ವಾರದಲ್ಲಿ ಕಟಾವು ಪ್ರಮಾಣ ಹೆಚ್ಚಳವಾಗುವುದರಿಂದ ಮಳೆ ಇದೇ ರೀತಿ ವಾರಗಟ್ಟಲೆ ಮುಂದುವರಿದರೆ ಕಟಾವು ನಡೆಸಲಾಗದೆ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಹಾಗೂ ಯಂತ್ರಗಳು ನಿರೀಕ್ಷಿತ ಸಂಖ್ಯೆಯಲ್ಲಿ ಬಾರದಿದ್ದರೆ ಬಾಡಿಗೆ ಹೆಚ್ಚಳ ವಾಗುವ ಸಾಧ್ಯತೆಯೂ ಇದೆ.

ಒಂದು ವಾರ ಸಮಸ್ಯೆ ಇಲ್ಲ
ಜಿಲ್ಲೆಯಲ್ಲಿ ಈ ಬಾರಿ 35,754ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು ಆರಂಭದಲ್ಲೇ ನಾಟಿ ಮಾಡಿದ ಕೆಲವು ಗದ್ದೆಗಳು ಕಟಾವಿಗೆ ಬಂದಿವೆ. ಮತ್ತುಳಿದ ಬಹುತೇಕ ಕಡೆ ಮುಂದಿನ ಒಂದು ವಾರದ ಅನಂತರ ಕಟಾವಿಗೆ ಸಿದ್ಧವಾಗಲಿದೆ.
-ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ

ರಾಜೇಶ್‌ ಗಾಣಿಗ ಅಚ್ಲಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next