ನವದೆಹಲಿ: ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿರುವ ಡಾ.ಹರಕ್ ಸಿಂಗ್ ರಾವತ್ ಕಾಂಗ್ರೆಸ್ ಮುಖಂಡರ ಜತೆ ಸಂಪರ್ಕದಲ್ಲಿದ್ದು, ಅವರು ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:“ಮೊದಲು ಈ ನಿಯಮವನ್ನು ಕಸದಬುಟ್ಟಿಗೆ ಹಾಕಿ”: ಬಿಸಿಸಿಐಗೆ ಮದನ್ ಲಾಲ್ ಮನವಿ
ಶುಕ್ರವಾರ ನಡೆದ ಸಂಪುಟ ಸಭೆಯಿಂದ ರಾವತ್ ಅವರು ದಿಢೀರನೆ ಹೊರ ನಡೆದಿದ್ದರು. ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡದೆ ಇದ್ದ ಕಾರಣ ಅವರು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಹಿನ್ನಡೆಯಾದಂತಾಗಿದೆ ಎಂದು ಮೂಲಗಳು ಹೇಳಿವೆ.
ತಮ್ಮ ಸ್ವಕ್ಷೇತ್ರವಾದ ಕೋಟದ್ವಾರದಲ್ಲಿ ಕಾಲೇಜು ಸ್ಥಾಪನೆಗೆ ಕಳೆದ ಐದು ವರ್ಷಗಳಿಂದ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ರಾವತ್ ಅವರು ಹಿಂದೆ ಶಾಸಕರಾಗಿ ಉತ್ತರಾಖಂಡ್ ಮತ್ತು ಉತ್ತರಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದರು. ರಾವತ್ ಕಾಂಗ್ರೆಸ್ ಮತ್ತು ಬಹುಜನ್ ಸಮಾಜ್ ಪಕ್ಷದಲ್ಲಿದ್ದರು.
2017ರಲ್ಲಿ ರಾವತ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಉತ್ತರಾಖಂಡ್ ನ ಕೋಟ್ ದ್ವಾರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು. 2014ರಲ್ಲಿ ರಾವತ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಾರ್ವಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
2022ರಲ್ಲಿ ಉತ್ತರಾಖಂಡ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಅಲ್ಲದೇ ಚುನಾವಣೆಗೂ ಮುನ್ನವೇ ರಾವತ್ ರಾಜೀನಾಮೆ ನೀಡಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.