Advertisement

ಚರ್ಚೆಗೆ ನೀವೇ ಸ್ಥಳ, ದಿನ ಫಿಕ್ಸ್‌ ಮಾಡಿ

09:29 PM Aug 06, 2019 | Lakshmi GovindaRaj |

ಹುಣಸೂರು: ಸಾ.ರಾ.ಮಹೇಶ್‌ ಅವರೇ ಮೈಸೂರು ಅಥವಾ ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಚರ್ಚೆಗೆ ವೇಳೆ ನಿಗದಿ ಪಡಿಸಲಿ, ಯಾವುದೇ ಚರ್ಚೆಗೆ ಸಿದ್ಧನಿದ್ದೇನೆ ಎಂದು ಅನರ್ಹಗೊಂಡಿರುವ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು.

Advertisement

“ಪಕ್ಷಕ್ಕೆ ದ್ರೋಹ ಎಸಗಿಲ್ಲ, ಯಾವುದೇ ಆಮಿಷಕ್ಕೆ ನಾನು ಒಳಗಾಗಿಲ್ಲ ಎಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ’ ಎಂಬ ಸಾ.ರಾ. ಮಹೇಶ್‌ ಪಂಥಾಹ್ವಾನಕ್ಕೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಎಚ್‌. ವಿಶ್ವನಾಥ್‌, ನನಗೆ ಆಣೆ ಪ್ರಮಾಣದ ಮೇಲೆ ನಂಬಿಕೆ ಇಲ್ಲ, ಸಂವಿಧಾನದ ಬಗ್ಗೆ ಗೌರವವಿದ್ದು, ಎಲ್ಲಾದರೂ ಸರಿ, ಆತನೇ ಸಮಯ-ಜಾಗ ನಿಗದಿಪಡಿಸಲಿ, ಚರ್ಚೆಗೆ ಸಿದ್ಧನಿದ್ದೇನೆಂದು ಸ್ಪಷ್ಟಪಡಿಸಿದರು.

ಸಾ.ರಾ.ಮಹೇಶ್‌ ಕೊಚ್ಚೆ ಇದ್ದಂತೆ, ಆ ಕೊಚ್ಚೆ ಗುಂಡಿಗೆ ಕಲ್ಲು ಎಸೆದು ನನ್ನ ಬಿಳಿ ಶರ್ಟ್‌ ಕೊಚ್ಚೆ ಮಾಡಿಕೊಳ್ಳುವುದಿಲ್ಲ. ನನ್ನ ಚರಿತ್ರೆ ಬಗ್ಗೆ ಮಾತನಾಡುವ ಮೊದಲು ಆತನ ಹಿಂದಿನ ಚರಿತ್ರೆಯನ್ನು ತಿರುಗಿ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಅಭ್ಯರ್ಥಿ ಎಂಬ ಅಭಿನಯ: ಮಾಜಿ ಸಂಸದ ಸಿ.ಎಚ್‌. ವಿಜಯಶಂಕರ್‌ ಹುಣಸೂರಿನಲ್ಲಿ ಕಚೇರಿ ತೆರೆದಿದ್ದಾರೆ. ಅವರೂ ಅಭ್ಯರ್ಥಿಯಾಗಬಹುದೇ ಎಂಬುದನ್ನು ಪತ್ರಿಕೆಯಲ್ಲಿ ಬಂದಿರುವುದನ್ನು ಗಮನಿಸಿದೆ. ಅವರೇ ಅಭ್ಯರ್ಥಿ ಎಂದು ಅಭಿನಯ ಮಾಡಿ ಮತ್ತೂಬ್ಬರಿಗೆ ನೆರವಾಗುತ್ತರೋ, ಏನೇನು ಕದಿದೆಯೋ ನೋಡಬೇಕೆಂದರು.

370ನೇ ವಿಧಿ ರದ್ದತಿ ಸ್ವಾಗತ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿಯನ್ನು ಸ್ವಾಗತಿಸಿದ ಅವರು, ದೇಶವೆಂದರೆ ಎಲ್ಲವೂ ಒಂದೇ ಎಂಬಂತಾಗಿದ್ದು, ದೇಶದ ಸಂಪತ್ತು ಸಮಾನವಾಗಿ ಹಂಚುವ ಕಾನೂನು ಪುನರಾವರ್ತನೆಯಾಗಲಿದೆ ಎಂದರು.

Advertisement

ಟಿಪ್ಪು ಜಯಂತಿ ರದ್ದು ಸರಿಯಲ್ಲ: ಬಿಜೆಪಿ ಸರ್ಕಾರ‌ ಟಿಪ್ಪು ಜಯಂತಿಯನ್ನು ರದ್ದು ಪಡಿಸಿರುವುದು ಸರಿಯಲ್ಲ, ಆದರೆ ಈ ಹಿಂದೆ ನಡೆದ ಟಿಪ್ಪು ಜಯಂತಿ ವೇಳೆ ಕೊಡಗಿನಲ್ಲಿ ಸಂಭವಿಸಿದ ಇಬ್ಬರ ಸಾವಿನಂತಹ ಅಹಿತಕರ ಘಟನೆಯಿಂದ ರದ್ದು ಮಾಡಿರು ಸಾಧ್ಯತೆ ಇದೆ.

ಇದೇ ರೀತಿ ಇನ್ನು 36 ಜಯಂತಿಗಳು ನಡೆಯುತ್ತಿದ್ದು, ಇದರಿಂದ ಮಾನವ ಶಕ್ತಿ, ಸಂಪನ್ಮೂಲಗಳು ಹಾಳಾಗುತ್ತಿದ್ದು, ಈ ಬಗ್ಗೆ ಜಯಂತಿಗಳನ್ನೇ ರದ್ದು ಪಡಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್‌, ಮುಖಂಡರಾದ ಹರಿಹರ ಆನಂದಸ್ವಾಮಿ, ಕುನ್ನೇಗೌಡ, ಶಿವಶೇಖರ್‌ ಇತರರಿದ್ದರು.

ಮತ್ತಷ್ಟು ಶಾಸಕರು ಹೊರಬರಲಿದ್ದಾರೆ: ಮತ್ತಷ್ಟು ಮಂದಿ ಶಾಸಕರು ಕಾಂಗ್ರೆಸ್‌-ಜೆಡಿಎಸ್‌ ಪಕ್ಷದಿಂದ ಹೊರಬರುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್‌.ವಿಶ್ವನಾಥ್‌, ಹಿಂದಿನ ಸರ್ಕಾರದ ಅವಧಿ ಯಲ್ಲಿ ಕೊನೆಯ ಆರು ತಿಂಗಳು ಸರಕಾರವೇ ಇರಲಿಲ್ಲ, ಬಹಳಷ್ಟು ಮಂದಿಗೆ ಬೇಗುದಿ ಇದೆ. ಕಾವು ಹೆಚ್ಚಾಗಿ ಮತ್ತಷ್ಟು ಮಂದಿ ಹೊರಬರಬಹುದೆಂದು ತಿಳಿಸಿದರು.

ಮಾಜಿ ಸಚಿವ ಜಿ.ಟಿ.ದೇವೇಗೌಡರು ಹೇಳಿರುವುದರಲ್ಲಿ ಸತ್ಯವಿದೆ. ಅವರು ಕೆಳಸ್ತರದಿಂದ ರಾಜಕೀಯದ ನೋವು ನಲಿವು ಕಂಡವರು. ಗಾಡ್‌ಫಾದರ್‌ ಇರಲಿಲ್ಲ, ನಾಮಕಾವಸ್ತೆಗೆ ಜಿಟಿಡಿ ಜಿಲ್ಲಾ ಮಂತ್ರಿಯಾಗಿದ್ದರು. ಅವರು ಕೂಡ ಬೇಸತ್ತಿದ್ದರು. ಇದೀಗ ಸಾರ್ವಜನಿಕವಾಗಿ ವಸ್ತುಸ್ಥಿತಿ ಹೇಳಿಕೊಳ್ಳುತ್ತಿದ್ದಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಧಿಕಾರಿಗಳ ಸಭೆಗೆ ವಿಶ್ವನಾಥ್‌ ಸಮರ್ಥನೆ: ಸಂವಿಧಾನದ ಚೌಕಟ್ಟಿನಲ್ಲೇ ತಾವು ಅಧಿಕಾರಿಗಳ ಸಭೆ ನಡೆಸಿದ್ದು, ತಪ್ಪೆಂದು ಭಾವಿಸುವ ಅಗತ್ಯವಿಲ್ಲ. ತಾನೊಬ್ಬ ಮಾಜಿ ಮಂತ್ರಿ, ಸಂಸದ, ಶಾಸಕನಾಗಿದ್ದು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಪ್ರವಾಸಿ ಮಂದಿರದಲ್ಲಿ ಕರೆದು ಚರ್ಚಿಸಿದ್ದೇನೆ. ಇದೇನು ತಪ್ಪಲ್ಲ. ಮಾಜಿ ಶಾಸಕರೂ ಕೂಡ ಅಧಿಕಾರಿಗಳ ಸಭೆ ನಡೆಸಬಹುದೆಂದು ಎಚ್‌.ವಿಶ್ವನಾಥ್‌ ಸಮರ್ಥಿಸಿಕೊಂಡರು.

ತಾವು ಹಿರಿಯ, ಅನುಭವಿಯಾಗಿದ್ದು, ಯಾವುದೇ ಸರ್ಕಾರವಿದ್ದರೂ ಸಾಕಷ್ಟು ಕೆಲಸ ಮಾಡುವ ಶಕ್ತಿ ಇದೆ. ಈ ಹಿಂದೆ ಮಂಜೂರಾಗಿದ್ದ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ, ಸೆಸ್ಕ್ ಎಸ್‌ಇ ಕಚೇರಿಗಳ ಮಂಜೂರಾತಿ ರಾಜಕೀಯ ಕಾರಣಕ್ಕಾಗಿ ರದ್ದು ಪಡಿಸಿದ್ದು, ಮುಂದೆ ಮರು ಮಂಜೂರು ಮಾಡಿಸುತ್ತೇನೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next