Advertisement

ಯೋಗ ಸಾಧನೆಗೆ ಸಮಯ ಮೀಸಲಿಡಿ

03:29 PM Jun 21, 2022 | Team Udayavani |

ಬೆಳಗಾವಿ: ಧರ್ಮಭೂಮಿ ಎನಿಸಿದ ಭಾರತದಲ್ಲಿ ಯೋಗ ಸಾಧನೆಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಶಿವಯೋಗಾಚರಣೆಯಲ್ಲಿಯೇ ಯೋಗದ ಹಿರಿಮೆಯನ್ನು ಬೋಧಿಸಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.

Advertisement

ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಹಮ್ಮಿಕೊಂಡಿರುವ ಉಚಿತ ಯೋಗ ಶಿಬಿರದ ನಾಲ್ಕನೇ ದಿನದಂದು ಸೋಮವಾರ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಭಾರತದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಇವುಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಋಷಿಗಳು, ಮುನಿಗಳು, ಆಚಾರ್ಯರು, ಸಂತರು ಬಾಳಿ ಬದುಕಿದ ಈ ನಾಡಿನಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಸುಖೀ ಜೀವನ ನಡೆಸಬೇಕು ಎನ್ನುವ ದೃಷ್ಟಿಯಿಂದ ಅಧ್ಯಾತ್ಮದಲ್ಲಿ ಯೋಗದ ಬೋಧನೆ ಮಾಡಲಾಗಿದೆ. ಆರೋಗ್ಯ ಭಾಗ್ಯ ಎಲ್ಲ ಭಾಗ್ಯಗಳಿಗಿಂತ ಮಿಗಿಲು. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಹೀಗಾಗಿ ನಮ್ಮ ಪೂರ್ವಜರು ನಿತ್ಯದ ಬದುಕಿನಲ್ಲಿ ಯೋಗ ಆಚರಿಸಿಕೊಂಡು ಬಂದಿದ್ದನ್ನು ಕಾಣುತ್ತೇವೆ ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆಯಂತೆ ಇಷ್ಟಲಿಂಗ ಪೂಜೆಯಲ್ಲಿಯೇ ಯೋಗವಿದೆ. ಅಷ್ಟಾಂಗ ಯೋಗ ಸಾಧನೆಯಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿ ಸಾಧ್ಯ. ಒತ್ತಡದ ಬದುಕಿನಲ್ಲಿ ಸಿಲುಕಿದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ದಿನನಿತ್ಯ ಅರ್ಧಗಂಟೆ ಯೋಗಭ್ಯಾಸ ಮಾಡಿದರೆ ಮಾನಸಿಕ ಶಾಂತಿ- ಸಮೃದ್ಧ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿರುವುದು ಹೆಮ್ಮೆಯ ಸಂಗತಿ. ಮೋದಿ ರಾಜಕಾರಣಿ ಮಾತ್ರ ಅಲ್ಲ. ಅವರೊಬ್ಬ ಅಧ್ಯಾತ್ಮ ಸಾಧಕ ಮತ್ತು ಸಂತ ಶ್ರೇಷ್ಠ. ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕಾಗಿ, ಕುಟುಂಬದ ಸುಖೀ ಜೀವನಕ್ಕಾಗಿ ತಮ್ಮ ದೈನಂದಿನ ಬದುಕಿನಲ್ಲಿ ಯೋಗ ಸಾಧನೆಗಾಗಿ ಸಮಯ ಮೀಸಲಿಡಬೇಕು. ಯೋಗ ಸಾಧನೆಗೆ ಜಾತಿ, ಮತ, ಪಂಥಗಳ ಸೋಂಕಿಲ್ಲ ಎಂದು ಜಗದ್ಗುರುಗಳು ತಿಳಿಸಿದರು.

Advertisement

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳ ಆದೇಶದಂತೆ ಐದು ದಿನಗಳ ಕಾಲ ಉಚಿತ ಯೋಗ ತರಬೇತಿ ಶಿಬಿರ ಹಮ್ಮಿಕೊಂಡಿದ್ದೇವೆ. ಸ್ವತ: ಶ್ರೀ ರಂಭಾಪುರಿ ಜಗದ್ಗುರುಗಳು ಯೋಗ ಶಿಬಿರದಲ್ಲಿ ಪಾಲ್ಗೊಂಡು ಯೋಗದ ಬಗೆಗೆ ಮನವರಿಕೆ ಮಾಡಿಕೊಟ್ಟಿರುವುದು ಈ ಭಾಗದ ಭಕ್ತರ ಸೌಭಾಗ್ಯ ಎಂದರು.

ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಚಂದರಗಿ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ರೇಣುಕ ಗಡದೇಶ್ವರ ದೇವರು, ಬೈಲಹೊಂಗಲ ಶಕ್ತಿ ದೇವಾಲಯದ ಮಹಾಂತೇಶ ಶಾಸ್ತ್ರಿಗಳು, ಚಂದ್ರಶೇಖರ ಶಾಸ್ತ್ರಿಗಳು, ಡಾ. ಪದ್ಮನಾಭ ದರಬಾರೆ, ಯೋಗಗುರು ಅಮೋಘ ಜೈನ್‌ ಸೇರಿದಂತೆ ಯೋಗ ಶಿಬಿರಾರ್ಥಿಗಳು ಇದ್ದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ರಂಭಾಪುರಿ ಪೀಠಕ್ಕೆ 12 ಸಾವಿರ ಶಾಖಾ ಮಠ ಇವೆ. ಎಲ್ಲ ಮಠಗಳಲ್ಲಿಯೂ ಯೋಗ ದಿನ ಆಚರಿಸಲಾಗುತ್ತಿದೆ. ಎಲ್ಲ ಧರ್ಮ ಪೀಠಗಳಲ್ಲಿ ಮತ್ತು ಮಠಗಳಲ್ಲಿ ಯೋಗ ಕೇಂದ್ರ ಪ್ರಾರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದರೆ ಮುಂದಿನ ದಿನಮಾನದಲ್ಲಿ ಜನ ಸಮುದಾಯದ ಮೇಲೆ ಉತ್ತಮ ಪ್ರಭಾವ ಉಂಟಾಗಲಿದೆ. –ಜಗದ್ಗುರು ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದರು, ರಂಭಾಪುರಿ ಪೀಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next