Advertisement
ಅದು 1969 ರಲ್ಲಿ ನಡೆದ ಬಯಲು ನಾಟ ಕೋತ್ಸವ. ಕಾರಂತ, ಲಂಕೇಶ್, ಗಿರೀಶ್ ಕಾರ್ನಾಡ್ ಮತ್ತು ಕಂಬಾರರು. ಇವರೆಲ್ಲರ ಒತ್ತಾಸೆ ಯಿಂದ ಪ್ರಾರಂಭ ವಾದದ್ದು. “ಜೋಕುಮಾರ ಸ್ವಾಮಿ’, “ಈಡಿಪಸ್’ ಮತ್ತು ಲಂಕೇಶರ “ಸಂಕ್ರಾಂತಿ’ ಈ ಮೂರು ನಾಟಕಗಳ ಪ್ರದರ್ಶನವಾಗಿತ್ತು. ಒಂದೊಂದು ನಾಟಕಕ್ಕೂ ಒಬ್ಬೊಬ್ಬ ಸ್ಟೇಜ್ ಮ್ಯಾನೇಜರ್ ಇರುತ್ತಿದ್ದರು. ಅದರಲ್ಲಿ ನಾನೂ ಒಂದು ನಾಟಕಕ್ಕೆ ಸ್ಟೇಜ್ ಮ್ಯಾನೇಜರ್ ಆಗಿದ್ದೆ. ಅವತ್ತಿನ ದಿನಗಳಲ್ಲಿ ಮೂರು ಮೂರು ನಾಟಕಗಳ ರಿಹರ್ಸಲ್ ನಡೆಯುತ್ತಿತ್ತು. ಒಂದರ್ಥದಲ್ಲಿ ನಾನು ಅವರ ಜೊತೆಗೆ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುತ್ತಿದ್ದೆ. ಹಗಲು- ರಾತ್ರಿ, ಕಲಾಕ್ಷೇತ್ರದ ಮೆಟ್ಟಿಲ ಮೇಲಿರುತ್ತಿದ್ದೆವು.
Related Articles
Advertisement
ಕಾರಣಾಂತರದಿಂದ ನಿರ್ಮಾಪಕರಿಗೆ ಹಣದ ಸಮಸ್ಯೆ ತಲೆದೋರಿತ್ತು. ಚಿತ್ರ ತಡವಾದ ಸಂದರ್ಭದಲ್ಲಿ ಕಾರ್ನಾಡರೂ “ನಿಗೂಢ ಮನುಷ್ಯರು’ ಸ್ಕ್ರಿಪ್ಟ್ ಬರೆಯುತ್ತಿದ್ದರು. ಅದನ್ನು ಕಾಪಿ ಮಾಡು ಅಂತ ಹೇಳುತ್ತಿದ್ದರು. ಈಗಲೂ ಆ ಸ್ಕ್ರಿಪ್ಟ್ ನನ್ನ ಬಳಿ ಇದೆ. ಆಗ ಅವರ ಅಮ್ಮನನ್ನು ಅವರು ಕರೆದಂತೆ ನಾನೂ “ಆಯಿ’ ಅನ್ನುತ್ತಿದ್ದೆ. ಕಾರ್ನಾಡ್ ಅವರಿಗೆ ಕೊಟ್ಟ ಸಹಕಾರ, ಪ್ರೋತ್ಸಾಹ ನನಗೂ ಕೊಡುತ್ತಿದ್ದರು. ಹಾಗಾಗಿ ನಾನು ಕೆಲ ತಿಂಗಳು ಧಾರವಾಡದಲ್ಲೇ ಇರುವಂತಾಯ್ತು. ಆ ಸಂದರ್ಭದಲ್ಲಿ ಧಾರವಾಡ ಭಾಷೆ ಕಲಿತೆ. ಅಲ್ಲೇ ಎಲ್ಲಾ ಹಿರಿಯ ಸಾಹಿತಿಗಳ ಪರಿಚಯವಾಯ್ತು. ಅದೆಲ್ಲವೂ ಕಾರ್ನಾಡ್ ಅವರಿಂದ ಆಗಿದ್ದು, ನನ್ನನ್ನೂ ಸಾಹಿತ್ಯದ ಹತ್ತಿರಕ್ಕೆ ಕರೆದೊಯ್ದ ಕೀರ್ತಿ ಅವರದ್ದು.
ಸಿನಿಮಾ ಸೂಕ್ಷ್ಮತೆ ಹೇಳಿಕೊಟ್ಟ ಗುರು: ಎಂದಿಗೂ ಅವರು ನನ್ನನ್ನು ಅಸಿಸ್ಟಂಟ್ ಅಂತ ನೋಡಿದ್ದೇ ಇಲ್ಲ. ಸ್ನೇಹಿತನ ರೀತಿ ಕಂಡು ಎಲ್ಲವನ್ನೂ ಕಲಿಸಿದರು. ಅವರೊಬ್ಬ ಗೈಡ್, ಸ್ನೇಹಜೀವಿ. ಮರೆಯಲಾಗದ ಕಲಿಕೆಗಳನ್ನು ಸಿನಿಮಾ ಸೂಕ್ಷ್ಮ ಗ ಳನ್ನು ಹೇಳಿಕೊಟ್ಟವರು. “ನಾಗಮಂಡಲ’ ಮಾಡಿದ ಸಂದರ್ಭ ದಲ್ಲಿ ಅವರು, ಚಿತ್ರ ನೋಡಿ, “ನಾನೇನಾದರೂ ಈ ಚಿತ್ರ ಮಾಡಿ ದ್ದರೆ, ನಾಗಾಭರಣ ಮಾಡಿದ ರೀತಿ ಇರುತ್ತಿರಲಿಲ್ಲ. ತುಂಬಾ ಚೆನ್ನಾಗಿ ಮಾಡಿದ್ದಾನೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು. ಅವರಿಗೆ ಜಾನಪದದ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಯಾಕೆಂದರೆ ಅವರು ಅರ್ಬನ್‌ನಿಂದ ಬಂದವರು. “ಕಾಡು’ ಚಿತ್ರದ ಸೆಟಪ್ ಹಾಕು ವಾಗ, ಒಮ್ಮೊಮ್ಮೆ ನನ್ನ ಕಡೆ ನೋಡೋರು. ಕೆಲವು ಸಣ್ಣಪುಟ್ಟ ವಿಷಯ ಹೇಳಿದಾಗ, “ನಿನಗೆ ಇದೆಲ್ಲಾ ಹೇಗೋ ಗೊತ್ತು’ ಅನ್ನೋರು. ನನ್ನ ಮನೆಯಲ್ಲಿ ಇದೆಲ್ಲಾ ಬಳಕೆ ಮಾಡ್ತೀವಿ ಸರ್ ಅಂದಾಗ, ಹಾಗಾದರೆ, ಆಕೆಗೆ ಹಾಗೆ ಬಳಸೋಕೆ ಹೇಳು ಅನ್ನೋರು.
ಸೆಟ್‌ನಲ್ಲಿ ನಿರ್ದೇಶಕರು ಹೇಳಿದ್ದನ್ನೇ ಮಾಡೋರು: “ಸಂತಶಿಶುನಾಳ ಷರೀಫ’ ಚಿತ್ರದಲ್ಲಿ ಗೋವಿಂಧಭಟ್ಟ ಪಾತ್ರ ಮಾಡಿದ್ದರು. ಅದು ಎಷ್ಟರಮಟ್ಟಿಗೆ ಸರಿಹೊಂದಿತ್ತು ಅಂದರೆ, ಅವರನ್ನು ಬಿಟ್ಟು ಬೇರೆಯವರು ಆ ಪಾತ್ರದಲ್ಲಿ ಕಾಣಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಮಾಡಿದ್ದರು. ಆ ಸಂದರ್ಭದಲ್ಲಿ ಅವರು ಕೊಟ್ಟ ಸಹಕಾರ ಅನನ್ಯ. ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಇಡೀ ಸೀನ್ ಅನ್ನು ರೀವರ್ಕ್ ಮಾಡ್ತೀನಿ ಅಂದಾಗ, ಏನೂ ಹೇಳದೆ ಓಕೆ ಅಂದರು. ನಾನು ಏನನ್ನು ಹೇಳುತ್ತಿದ್ದೆನೋ ಅಷ್ಟನ್ನೇ ಮಾಡೋರು. ಏನಾದರೂ ಹೇಳಿ ಸರ್, ಅಂದರೆ, ನೀನಿಲ್ಲಿ ನಿರ್ದೇಶಕ, ನೀನು ಹೇಳಿದ್ದನ್ನು ಮಾತ್ರ ಮಾಡ್ತೀನಿ. ನಿರ್ದೇಶಕನ ಕಲ್ಪನೆಗೆ ನಟಿಸೋದು ಕಲಾವಿದನ ಕೆಲಸ ಅನ್ನೋರು. ಅವರ ಮಾತನ್ನು ಇಂದಿಗೂ ನಾನು ಪಾಲಿಸುತ್ತೇನೆ. ಬೇರೆ ನಿರ್ದೇಶಕರ ಚಿತ್ರದಲ್ಲಿ ನಟಿಸುವಾಗ, ಅವರು ಹೇಳಿದ್ದನ್ನು ಮಾತ್ರ ಮಾಡಿ ಬರುತ್ತೇನೆ.
ಬ್ಯಾರಿಕೇಡ್ ಒಳಗಿನ ಕಾರ್ನಾಡರು: ಕಳೆದ ಹತ್ತು ವರ್ಷಗಳಲ್ಲಿ ನಾನು ಅವರನ್ನು ಹೆಚ್ಚು ಭೇಟಿ ಮಾಡಲು ಆಗಲಿಲ್ಲ. ಅವರು ರಂಗಭೂಮಿ, ಸಾಮಾಜಿಕ ಸಿದ್ಧಾಂತಗಳತ್ತ ಹೆಚ್ಚು ಗಮನಹರಿಸಿದರು. ನನಗೆ ಅವರ ಕೆಲವು ಸಿದ್ಧಾಂತಗಳ ಮೂಲಕ ಗುರುತಿಸಿಕೊಳ್ಳಲು ಆಗಲಿಲ್ಲ. ಆದರೂ, ಸಿಕ್ಕಾಗ ಅವರು, “ಅದೇ ಬೇರೆ, ಇದೇ ಬೇರೆ, ಬಾ ಮನೆಗೆ’ ಅನ್ನೋರು. “ಯಾಕೆ ಸಿನಿಮಾ ಮಾಡಲ್ಲವೇ, ನನಗೆ ಪಾತ್ರ ಕೊಡಲ್ಲವೇ?’ ಅನ್ನುತ್ತಿದ್ದರು. ಅವರದು ಬಹುಮುಖೀ ವ್ಯಕ್ತಿತ್ವ. ನಟನೆ, ನಿರ್ದೇಶನ, ಬರಹ ಈ ಮೂರನ್ನು ಆಯಾ ಸಂದರ್ಭದಲ್ಲಿ ಪ್ರಬುದ್ಧವಾಗಿ ಬಳಸಿಕೊಂಡವರು. ಇಷ್ಟೆಲ್ಲಾ ಇದ್ದರೂ, ಅವರ ವೈಯಕ್ತಿಕ ಬದುಕಿಗೆ ಅವರು ಬ್ಯಾರಿಕೇಡ್ ಹಾಕಿಕೊಂಡಿದ್ದರು. ಅದರಿಂದ ಆಚೆ ಬರುತ್ತಿರಲಿಲ್ಲ. ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಇನ್ನು ಸೆಟ್‌ನಲ್ಲಿ ತುಂಬಾ ತಾಳ್ಮೆಯ ವ್ಯಕ್ತಿ. ಸೀನ್ ಲೇಟ್ ಆಗುತ್ತೆ ಅಂದಾಗ, ಸುಮ್ಮನೆ ತಮ್ಮ ಪಾಡಿಗೆ ಪುಸ್ತಕ ಹಿಡಿದು ಓದುತ್ತ ಕೂರುತ್ತಿದ್ದರು. ಸದಾ ಅವರೊಂದಿಗೆ ಐದಾರು ಪುಸ್ತಕಗಳು ಇರುತ್ತಿದ್ದವು. ಕೆಲಸ ಮುಗಿದ ಕೂಡಲೆ ಹೊರಟು ಹೋಗುತ್ತಿದ್ದರು. ಅವರು ಈಗ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ಅವರು ಇಂದಿಗೂ ಇದ್ದಾರೆ. ಅವರ ಕೃತಿಗಳು, ಸಿನಿಮಾಗಳು, ಸಿದ್ಧಾಂತಗಳು, ಹೋರಾಟ ಇವೆಲ್ಲವುಗಳ ಮೂಲಕ ಅವರು ಜೀವಂತವಾಗಿರುತ್ತಾರೆ.
ಶಿಸ್ತಿಗೆ ಮತ್ತೊಂದು ಹೆಸರು, ಕಾರ್ನಾಡ್!: ಬಹಳ ಮುಖ್ಯವಾಗಿ ಕಾರಂತರು ನನ್ನನ್ನು ರಂಗಭೂಮಿಯಲ್ಲಿ ತೊಡಗಿಸಿಕೊಂಡ ರೀತಿಯೇ ಸಿನಿಮಾದಲ್ಲೂ ಕಾರ್ನಾಡರು ನನ್ನಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡಿದ್ದರು. ಇದು ನನ್ನನ್ನು ಎಷ್ಟರಮಟ್ಟಿಗೆ ತಯಾರು ಮಾಡಿತು ಅಂದರೆ, ನನ್ನ 36 ಚಿತ್ರಗಳಲ್ಲಿ ಅವರಂತೆಯೇ ಆ ಶಿಸ್ತು, ಬದ್ಧತೆಯನ್ನು ಕಾಣಬಹುದು. ಇಂದಿಗೂ ನನ್ನ ಜೊತೆ ಕೆಲಸ ಮಾಡಿದವರೆಲ್ಲರಿಗೂ ಅದು ಮಾದರಿ. ಕಾರ್ನಾಡರ ಸಿನಿಮಾ ಮೇಕಿಂಗ್ ರೀತಿ, ಅವರೊಳಗಿದ್ದ ಬದ್ಧತೆ ಎಲ್ಲವೂ ಆರಂಭದಿಂದ ಅಂತ್ಯದವರೆಗೂ ಇರುತ್ತಿತ್ತು. ಅವರ ಜೊತೆ ಇದ್ದುದರಿಂದ ದೊಡ್ಡ ದೊಡ್ಡ ಛಾಯಾಗ್ರಹಾಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಶ್ಯಾಮ್ ಬೆನಗಲ್‌ರಂಥವರ ಜೊತೆ ವಾರದ ಮಟ್ಟಿಗೆ ಕೆಲಸ ಮಾಡುವ ಅವಕಾಶ ಕೂಡ ಪಡೆದಿದ್ದೆ. ಕಾರ್ನಾಡರು ನನ್ನನ್ನು ಅಲ್ಲಿಯವರೆಗೂ ಕರೆದುಕೊಂಡು ಹೋಗಿದ್ದರು.
* ಟಿ.ಎಸ್. ನಾಗಾಭರಣ, ರಂಗಕರ್ಮಿ- ನಿರ್ದೇಶಕ