ಚಿತ್ರದುರ್ಗ: ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಮಹಮ್ಮದ್ ಅಹಮ್ಮದ್ ಪಾಷಾ ಕರೆ ನೀಡಿದರು.
ವೇದಿಕೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ತ್ಯಾಗ-ಬಲಿದಾನದ ಇತಿಹಾಸವಿದೆ. ಪಕ್ಷದಲ್ಲಿ ಎಲ್ಲರಿಗೂ ಅಧಿಕಾರ ಸಿಗುವುದು ಕಷ್ಟ. ಅಧಿಕಾರಕ್ಕಾಗಿ ಆಸೆ ಪಡುವ ಬದಲು ಪಕ್ಷ ಸಂಘಟನೆಗೆ ದುಡಿಯಬೇಕು. ಆಗ ಸ್ಥಾನಮಾನ ತಾನಾಗಿಯೇ ಅರಸಿಕೊಂಡು ಬರುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿದೆ. ಪ್ರತಿ ಚುನಾವಣೆ ಸಮಯದಲ್ಲಿ ಬಾಬ್ರಿ ಮಸೀದಿ, ರಾಮಂದಿರವನ್ನು ಚರ್ಚೆಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಕೋಮುವಾದಿ ಬಿಜೆಪಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು. ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು. ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಹಮ್ಮದ್ ಹನೀಫ್ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಿಂದ ಸಲೀಂ ಅಹಮ್ಮದ್, ಬೆಂಗಳೂರು ಕೇಂದ್ರದಲ್ಲಿ ಯುವ ನಾಯಕ ರಿಜ್ವಾನ್ ಅರ್ಷದ್ ಸೇರಿದಂತೆ ಐದು ಕಡೆ ಅಲ್ಪಸಂಖ್ಯಾತರಿಗೆ ಕಡ್ಡಾಯವಾಗಿ ಟಿಕೆಟ್ ನೀಡಬೇಕು. ಮುಸ್ಲಿಂ ಸಮುದಾಯವನ್ನುಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.
ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಿರುವ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ರಾಹುಲ್ ಗಾಂಧಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕಾಗಿರುವ ದೊಡ್ಡ ಸವಾಲು ಮತದಾರರ ಮುಂದಿದೆ. ಪ್ರಧಾನಮಂತ್ರಿಯಾಗಿ ನಾಲ್ಕೂವರೆ ವರ್ಷಗಳನ್ನು ಕಳೆದಿರುವ ನರೇಂದ್ರ ಮೋದಿ, ವಿದೇಶಗಳನ್ನು ಸುತ್ತುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅದಕ್ಕಾಗಿ ಅಲ್ಪಸಂಖ್ಯಾತರೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಮುಸ್ಲಿಂ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಗುಡ್‌ಲಕ್ ಇಮ್ತಿಯಾಜ್, ಹುಸೇನ್‌ಪೀರ್, ಅಸ್ನತ್‌ವುಲ್ಲಾ, ಎಂ.ಡಿ. ಷರೀಫ್, ಪೈಲ್ವಾನ್ ಷಾಷವಲಿ, ಅಲ್ಲಾವುದ್ದೀನ್, ಫಾರೂಖ್, ಟೈಲರ್ ರಫೀ, ಆದಿಲ್, ರಹಮತ್‌ವುಲ್ಲಾ, ಇರ್ಫಾನುಲ್ಲಾ, ಎಚ್. ಶಬ್ಬೀರ್ ಭಾಷಾ ಮತ್ತಿತರರು ಇದ್ದರು.