Advertisement
1998ರಲ್ಲಿ ರಾಜಸ್ಥಾನದ ಜೋಧಪುರ ಬಳಿ ಕೃಷ್ಣ ಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿ, ಜೋಧ್‌ಪುರ ನ್ಯಾಯಾಲಯ, ಗುರುವಾರ ಖಾನ್ ಗೆ 5 ವರ್ಷಗಳ ಜೈಲು ಹಾಗೂ 10,000 ದಂಡ ವಿಧಿಸಿತ್ತು. ತೀರ್ಪಿನ ಬೆನ್ನಲ್ಲೇ ಅವರನ್ನು ಜೈಲಿಗೆ ರವಾನಿಸಲಾಗಿತ್ತು. ಶುಕ್ರವಾರದ ವಿಚಾರಣೆ ವೇಳೆ, ಸಲ್ಮಾನ್ ಪರ ವಕೀಲರು, 1998ರ ಪ್ರಕರಣದಲ್ಲಿಯೂ ಅವರು ಶಸ್ತ್ರಾಸ್ತ್ರ ಬಳಸಿದ್ದಕ್ಕೆ ಯಾವುದೇ ಪುರಾವೆಯಿಲ್ಲ. ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು ನಂಬುವಂತೆ ಇಲ್ಲ ಎಂದು ವಾದಿಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದ್ದಾರೆ.
ಸಲ್ಮಾನ್ ಖಾನ್ ಓರ್ವ ಮುಸ್ಲಿಂ ಆಗಿದ್ದಕ್ಕೆ ಆತನಿಗೆ ಶಿಕ್ಷೆ ವಿಧಿಸಲಾಗಿದೆ ಎಂಬ ಪಾಕಿಸ್ಥಾನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಹೇಳಿಕೆಯನ್ನು ಮಣಿಪುರದ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ಥಾನದ ಸಚಿವರಿಗೆ ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವ ಅಗತ್ಯತೆಯಿಲ್ಲ ಎಂದಿರುವ ಅವರು, ಭಾರತದಲ್ಲಿ ಜಾತಿ, ಮತಗಳ ಹೊರತಾಗಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಪದ್ಧತಿಯಿದೆ. ಇಲ್ಲಿ, ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಭೇದಭಾವ ಇಲ್ಲ. ಸಲ್ಮಾನ್ ಖಾನ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗುತ್ತದಷ್ಟೆ ಎಂದಿದ್ದಾರೆ.