ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಸಲು ಪರ್ಯಾಯ ಸ್ಥಳ ಹುಡುಕಾಟ ನಡೆದಿದೆ.
ವಿಧಾನಸಭೆ ಸಚಿವಾಲಯವು ಜಿಕೆವಿಕೆಯಲ್ಲಿ ಅಧಿವೇಶನ ನಡೆಸುವ ಕುರಿತು ಸ್ಥಳ ಪರಿಶೀಲನೆ ನಡೆಸಿದೆ. ಆದರೆ, ಪ್ರಾಯೋಗಿಕವಾಗಿ ವ್ಯವಸ್ಥೆ ಕಲ್ಪಿಸುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೆಪ್ಟಂಬರ್‌ನಲ್ಲಿ ಅಧಿವೇಶನ ನಡೆಸಲು ಶಾಸಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿಧಾನಸೌಧದಲ್ಲಿ ಅಧಿವೇಶನ ನಡೆಸುವ ಸಾಧ್ಯತೆ ಅಥವಾ ಪರ್ಯಾಯ ಸ್ಥಳದ ಕುರಿತು ಪರಿಶೀಲಿಸುವಂತೆ ಸಚಿವಾಲಯದ ಸಿಬಂದಿಗೆ ಸೂಚನೆ ನೀಡಿದ್ದರು.
ಅದರಂತೆ ವಿಧಾನಸಭಾ ಕಾರ್ಯ ದರ್ಶಿ ಎಂ.ಕೆ. ವಿಶಾಲಾಕ್ಷಿ ನೇತೃತ್ವ ದಲ್ಲಿ ನಗರದ ಜಿಕೆವಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು.
ಅದಕ್ಕೆ ಪರ್ಯಾಯವಾಗಿ ವಿಧಾನಸೌಧದಲ್ಲಿಯೇ ಇಬ್ಬರು ಶಾಸಕರ ನಡುವೆ ಫೈಬರ್ ಪಟ್ಟಿಗಳನ್ನು ಅಳವಡಿಸಿ ಅಂತರ ಕಾಯ್ದುಕೊಳ್ಳುವ ಬಗ್ಗೆ ರೂಪುರೇಷೆ ಸಿದ್ದಪಡಿಸಿಕೊಂಡಿದ್ದಾರೆ ಎನ್ನಲಾಗಿದೆ ಎಂದು ತಿಳಿದು ಬಂದಿದೆ.