Advertisement

Session Talk Fight: ವಿಧಾನಸಭಾ ಕಲಾಪ ಕಲಹ; ನಾಳೆಯೂ ಮುಂದುವರಿಕೆ?

12:36 AM Jul 21, 2024 | Team Udayavani |

ಬೆಂಗಳೂರು:  ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದ ಗದ್ದಲದ ನಡುವೆ 1 ವಾರದ ಅಧಿವೇಶನ ಮುಗಿದಿದೆ. ಶಿರೂರು ಮಳೆ ಅವಾಂತರ ಹೊರತುಪಡಿಸಿದರೆ ಯಾವುದೇ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶವೇ ಆಗಲಿಲ್ಲ. ಈಗ ಸೋಮವಾರದಿಂದ ಆರಂಭವಾಗುವ ಕಲಾಪವೂ ಇದೇ ಹಾದಿ ಹಿಡಿಯುವ ಸಾಧ್ಯತೆಗಳಿವೆ. ಅಂದರೆ ಮುಡಾ, ಎಸ್‌ಸಿಪಿ/ಟಿಎಸ್‌ಪಿ ಹಣ ಗ್ಯಾರಂಟಿಗಳಿಗೆ ಬಳಕೆ ಸೇರಿ ಇನ್ನಷ್ಟು ವಿಷಯಗಳ ಮೂಲಕ ಮುಗಿಬೀಳಲು ವಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ ಎನ್ನಲಾಗಿದೆ.

Advertisement

ಈ ವಾರದ ಅಧಿವೇಶನದಲ್ಲಿ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವುದು, ತಂಬಾಕು ಉತ್ಪನ್ನ, ಪಾನ್‌ ಮಸಾಲ ಉತ್ಪಾದನೆಯಲ್ಲಿ ಬಳಸುವ ಯಂತ್ರಗಳ ನೋಂದಣಿ ಮಾಡದಿದ್ದರೆ ದಂಡ ವಿಧಿಸುವುದು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನು ಅನರ್ಹತಾ ಪ್ರಕರಣದಿಂದ ಹೊರಗಿಡಲು ಮಸೂದೆಗಳನ್ನು ಮಂಡಿಸಲಾಗಿದೆ. ಆದರೆ ಯಾವುದೇ ಮಸೂದೆಗಳ ಬಗ್ಗೆ ಚರ್ಚೆ ಆಗಿಲ್ಲ.

2ನೇ ದಿನದಿಂದ ಗದ್ದಲ
ಜು. 15ರಂದು ಸೋಮವಾರ ‘ವಂದೇ ಮಾತರಂ’ನೊಂದಿಗೆ ಆರಂಭಗೊಂಡ ಕಲಾಪದಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಮೊದಲ ದಿನವಾದ್ದರಿಂದ ಯಾವುದೇ ಗಲಾಟೆ-ಗದ್ದಲವಿಲ್ಲದೆ ಕಲಾಪಗಳು ನಡೆದವು. ಮರುದಿನ ವಿಪಕ್ಷ ಬಿಜೆಪಿ ಸದಸ್ಯರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣವನ್ನು ಮುಂದಿಟ್ಟುಕೊಂಡು ಶಾಸಕರ ಭವನ ಬಳಿಯಿರುವ ವಾಲ್ಮೀಕಿ ಪ್ರತಿಮೆಗೆ ನಮನ ಸಲ್ಲಿಸಿ, ವಿಧಾನಸೌಧದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಸದನದ ಒಳಗೆ ನಿಲುವಳಿ ಸೂಚನೆ ಮಂಡಿಸಿದ್ದ ವಿಪಕ್ಷಗಳ ಪ್ರಸ್ತಾವನೆಯನ್ನು ಪರಿವರ್ತಿಸಿ ಚರ್ಚೆಗೆ ಅವಕಾಶ ಕೊಡಲಾಯಿತು. ಒಟ್ಟು 7 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಸಿಎಂ ಸಲಹೆಗಾರ ಎ.ಎಸ್‌. ಬೋಪಣ್ಣ ಸರಕಾರದ ಪರವಾಗಿ ಮಾತನಾಡಿದರು.
ಚರ್ಚೆ ವೇಳೆ ವಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸುವಾಗ ಭಾರೀ ವಾಗ್ವಾದ ನಡೆಯಿತು.

ನಿಗಮದ ಲೆಕ್ಕ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ ಹಾಗೂ ಮರಣಪತ್ರದಲ್ಲಿನ ಅಂಶಗಳನ್ನು ಓದುವಾಗ ಸಿಎಂ ಕೆಲವು ಅಂಶಗಳನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿ, ಬಿಜೆಪಿ-ಜೆಡಿಎಸ್‌ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಗುರುವಾರ ಸಿಎಂ ಉತ್ತರ ಮೊಟಕಾಗಿತ್ತು. ಶುಕ್ರವಾರ ವಿಪಕ್ಷಗಳ ಪ್ರತಿಭಟನೆ ನಡುವೆಯೇ ಸಿಎಂ ಉತ್ತರ ಪೂರ್ಣಗೊಳಿಸಿದರು.

Advertisement

ಬಿಜೆಪಿ ಅವಧಿ ಪ್ರಸ್ತಾವ
ಈ ವೇಳೆ ನಿಗಮದ ಹಣ ವರ್ಗಾವಣೆಯಲ್ಲಿ ಸರಕಾರದ ತಪ್ಪಿಲ್ಲ, ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಎಸ್‌ಐಟಿ ರಚಿಸಿದ್ದೇವೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ, ಸರಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದರಲ್ಲದೆ, ಇ.ಡಿ. ದಾಳಿಗೆ ಹೆದರುವುದಿಲ್ಲ ಎನ್ನುತ್ತಾ ಬಿಜೆಪಿ ಅವಧಿಯ ಹಗರಣಗಳನ್ನು ಪ್ರಸ್ತಾವಿಸಿ, ಯಾರನ್ನೂ ಬಿಡುವುದಿಲ್ಲ.

ಎಲ್ಲರನ್ನೂ ಬಲಿ ಹಾಕುತ್ತೇನೆ ಎಂದಿದ್ದರು. ಇದರಿಂದ ಅಸಮಾಧಾನಗೊಂಡಿರುವ ವಿಪಕ್ಷಗಳು, ಸರಕಾರ ತಮಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದೆ. ಇದಕ್ಕೆಲ್ಲ ನಾವೂ ಹೆದರುವುದಿಲ್ಲ. ನಮ್ಮ ಹೋರಾಟವನ್ನು ಇಷ್ಟಕ್ಕೇ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದೆ. ಹೀಗಾಗಿ ಸೋಮವಾರದಿಂದ ಸಮಾವೇಶಗೊಳ್ಳಲಿರುವ ಕಲಾಪ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಗ್ರೇಟರ್‌ ಬೆಂಗಳೂರು ಮಸೂದೆ ಮಂಡನೆ?
ಇದರೊಂದಿಗೆ ಗ್ರೇಟರ್‌ ಬೆಂಗಳೂರು, ಹೊರಗುತ್ತಿಗೆಯಲ್ಲಿ ಮೀಸಲಾತಿ ಸೇರಿದಂತೆ ಇನ್ನಿತರ ಮಸೂದೆಗಳ ಮಂಡನೆಯಾಗಬೇಕಿದ್ದು, ನೀಟ್‌ ಪರೀಕ್ಷೆಯನ್ನು ವಿರೋಧಿಸಿ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆಗಳೂ ಇವೆ.

ವಿಧಾನಸೌಧ ಗುಮ್ಮಟದಲ್ಲಿ ಬಿರುಕು ಸಿಎಂ ಗಮನಕ್ಕೆ
ಬೆಂಗಳೂರು: ರಾಜ್ಯಾಡಳಿತ ಶಕ್ತಿಕೇಂದ್ರ ವಾದ ವಿಧಾನಸೌಧದ ಗುಮ್ಮಟದಲ್ಲಿ ಬಿರುಕು ಕಾಣಿಸಿ ಕೊಂಡಿದ್ದು, ಇದನ್ನು ಪರಿಶೀಲಿಸಿದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಶನಿವಾರ ಚೆಸ್‌ ಪಂದ್ಯಾವಳಿಗೆ ಚಾಲನೆ ವೇಳೆ ಈ ವಿಚಾರವನ್ನು ವಿಧಾನಸೌಧದ ಸಿಬಂದಿ ಸ್ಪೀಕರ್‌ ಗಮನಕ್ಕೆ ತಂದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧಕ್ಕೆ ಈಗ 78 ವರ್ಷವಾಗಿದೆ. ಕಟ್ಟಡ ಹಳೆಯದಾಗಿದ್ದರಿಂದ ಸಮಸ್ಯೆ ಆಗಿರಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next