Advertisement

Session; ಅಧಿವೇಶನ ಕಲಾಪಗಳಲ್ಲಿರಲಿ ಜನಪರ ಕಾಳಜಿಗೆ ಆದ್ಯತೆ

11:51 PM Dec 04, 2023 | Team Udayavani |

ಸಂಸತ್‌ ಮತ್ತು ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನಗಳು ಸೋಮವಾರ ಅಧಿಕೃತವಾಗಿ ಆರಂಭಗೊಂಡಿವೆ. ಪಂಚರಾಜ್ಯ ಚುನಾವಣೆಯ ಫ‌ಲಿತಾಂಶ ಪ್ರಕಟವಾದ ಮಾರನೆಯ ದಿನವೇ ಅಧಿವೇಶನ ಆರಂಭಗೊಂಡಿರುವುದರಿಂದ ಮೊದಲ ದಿನದಂದು ಸಂಸತ್‌ನಲ್ಲಾಗಲೀ, ವಿಧಾನಮಂಡಲದಲ್ಲಾಗಲೀ ಅಷ್ಟೇನೂ ಗದ್ದಲ, ಗೊಂದಲಗಳಿಲ್ಲದೆ ಕಲಾಪಗಳು ನಡೆದಿವೆ. ಅಧಿವೇಶನದ ಉಳಿದ ಅವಧಿಯಲ್ಲೂ ಇದೇ ತೆರನಾಗಿ ಸಂಸತ್‌ ಮತ್ತು ವಿಧಾನ ಮಂಡಲದ ಉಭಯ ಸದನಗಳ ಕಲಾಪಗಳು ಸುಲಲಿತವಾಗಿ ನಡೆದು, ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು, ಅವರ ಬೇಡಿಕೆಗಳ ಕುರಿತಂತೆ ಸವಿಸ್ತಾರವಾಗಿ ಚರ್ಚೆಗಳು ನಡೆಯಲಿ ಎಂಬ ಆಶಯ ಜನತೆಯದ್ದಾಗಿದೆ.

Advertisement

ದೇಶದ ಬಹುತೇಕ ಭಾಗಗಳಲ್ಲಿ ಬರದ ಛಾಯೆ ಆವರಿಸಿದ್ದು, ಕೇಂದ್ರ ಸರ್ಕಾರದಿಂದ ನೆರವು ಸಿಗಬೇಕಿದೆ. ವಿಪಕ್ಷ ಆಡಳಿತ­ವಿರುವ ರಾಜ್ಯಗಳಲ್ಲಿನ ರಾಜ್ಯಪಾಲರುಗಳ ಕಾರ್ಯ­ವೈಖರಿ ಕುರಿತಂತೆ ಸುಪ್ರೀಂ ಕೋರ್ಟ್‌, ರಾಜ್ಯಪಾಲರುಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಬಗ್ಗೆ ವಿಪಕ್ಷಗಳು ಅಧಿವೇಶನ ದಲ್ಲಿ ಪ್ರಸ್ತಾವಿಸಬಹುದು. ಎಲ್ಲದಕ್ಕಿಂತ ಪ್ರಮುಖವಾಗಿ, ಈಗಷ್ಟೇ ಬಹಿರಂಗವಾಗಿರುವ ಪಂಚರಾಜ್ಯಗಳ ಚುನಾವಣ ಫ‌ಲಿ ತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೇ ರಚನಾತ್ಮಕ ಚರ್ಚೆ ಯಲ್ಲಿ ಭಾಗಿಯಾಗಬೇಕು ಎಂದು ಪ್ರಧಾನಿ ಮೋದಿ ಯ ವರು ಹೇಳಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸುವುದು ಸೂಕ್ತ.

ಇನ್ನು ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿ, ಗ್ಯಾರಂಟಿ ಯೋಜನೆಗಳ ಅಸಮರ್ಪಕ ಜಾರಿ, ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸ್ಥಗಿತ, ವರ್ಗಾವಣೆಯಲ್ಲಿ ದಂಧೆ, ಭ್ರಷ್ಟಾಚಾರ ಆರೋಪ, ಹೆಣ್ಣು ಭ್ರೂಣ ಹತ್ಯೆ, ಶಿಶುಗಳ ಮಾರಾಟ, ರಾಜ್ಯದಲ್ಲಿನ ಕಾನೂನು-ಸುವ್ಯವಸ್ಥೆ ಮತ್ತಿತರ ವಿಷಯಗಳ ಕುರಿತಂತೆ ವಿಧಾನಮಂಡಲದ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿದೆ.

ಆಡಳಿತಾರೂಢರು ಬಹುಮತವನ್ನು ಮುಂದಿಟ್ಟು ದೇಶ ಎದುರಿಸುತ್ತಿರುವ ಸಮಸ್ಯೆಗಳು, ವಿಪಕ್ಷಗಳು ಪ್ರಸ್ತಾವಿಸುವ ಗಂಭೀರ ವಿಷಯಗಳ ಕುರಿತಂತೆ ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳದೆ ಒಂದಿಷ್ಟು ದಿಟ್ಟತನವನ್ನು ಪ್ರದರ್ಶಿಸಬೇಕು. ಅಷ್ಟು ಮಾತ್ರವಲ್ಲದೆ ಸರಕಾರಗಳು ಮಂಡಿಸಲುದ್ದೇಶಿಸಿ­ರುವ ಹಲವು ಮಹತ್ತರ ಮಸೂದೆಗಳ ಕುರಿತಂತೆ ಸಮಗ್ರ ಚರ್ಚೆ ನಡೆದು ಅವುಗಳಿಗೆ ಸದನದ ಅಂಗೀಕಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಆಡಳಿತ ಪಕ್ಷಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಸಂಸತ್‌ ಇರಲಿ, ವಿಧಾನಮಂಡಲವಿರಲಿ ಸದನದ ಕಲಾಪಗಳು ಕೇವಲ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗದೆ ಕಲಾಪಗಳು ಸುಗಮವಾಗಿ ನಡೆಯಲು ಮತ್ತು ಫ‌ಲಪ್ರದವಾಗಲು ಆಡಳಿತ ಮತ್ತು ವಿಪಕ್ಷಗಳು ಅವಕಾಶ ಮಾಡಿಕೊಡಬೇಕು. ವರ್ಷಕ್ಕೆ ನಿರ್ದಿಷ್ಟ ದಿನಗಳ ಕಾಲ ಕಲಾಪ ನಡೆಯಬೇಕೆಂಬ ನಿಯಮವಿರುವುದರಿಂದ ಅದನ್ನು ಪೂರೈಸಲೆಂದು ಕಾಟಾಚಾರಕ್ಕಾಗಿ ಅಧಿವೇಶನದ ಕಲಾಪಗಳನ್ನು ನಡೆಸದೆ ಅಧಿವೇಶನಗಳು ಜನತೆಯ ಆಶಯ, ನಿರೀಕ್ಷೆಗೆ ತಕ್ಕಂತೆ ಸುಸೂತ್ರವಾಗಿ ನಡೆಯಬೇಕು. ರಾಜಕೀಯ ಏನಿದ್ದರೂ ಚುನಾವಣ ಅಖಾಡಕ್ಕೆ ಸೀಮಿತವಾಗಬೇಕೇ ವಿನಾ ಸದನದೊಳಗೆ ಜನಪರ ಕಾಳಜಿಗೆ ಮೊದಲ ಆದ್ಯತೆ ಲಭಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next