Advertisement

ಅಧಿವೇಶನ ಮುಂದೂಡಿಕೆ: ಆಡಳಿತ-ಪ್ರತಿಪಕ್ಷ ನಡುವೆ ಹಗ್ಗ ಜಗ್ಗಾಟ

10:02 AM Mar 28, 2020 | Lakshmi GovindaRaj |

ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ ಹಾವಳಿಯಿಂದ ತಪ್ಪಿಸಿಕೊಳ್ಳಲು ಪ್ರಸ್ತುತ ನಡೆಯುತ್ತಿರುವ ಬಜೆಟ್‌ ಅಧಿವೇಶನವನ್ನು ಮುಂದೂಡುವ ಬಗ್ಗೆ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ಹಗ್ಗ ಜಗ್ಗಾಟ ಶುರುವಾಗಿದೆ. ಬಹಳ ವರ್ಷಗಳ ಬಳಿಕ ಬಜೆಟ್‌ ಅಧಿವೇಶನವನ್ನು ಸುದೀರ್ಘ‌ ಒಂದು ತಿಂಗಳ ಕಾಲ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಅದರಂತೆ ಸುಗಮ ಕಲಾಪ ನಡೆಯುತ್ತಿದೆ.

Advertisement

ಆದರೆ, ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವ ಲಕ್ಷಣ ಹೊಂದಿರುವುದರಿಂದ ಈ ರೋಗದಿಂದ ರಕ್ಷಿಸಿಕೊಳ್ಳಲು ಹಾಲಿ ನಡೆಯುತ್ತಿರುವ ಅಧಿವೇಶನ ಮುಂದಿಡುವುದೇ ಸೂಕ್ತ ಎನ್ನುವುದು ಕಾಂಗ್ರೆಸ್‌ ವಾದವಾಗಿದೆ.

ಜನರು ಒಂದೆಡೆ ಸೇರುವುದರಿಂದ ಈ ವೈರಸ್‌ ವೇಗವಾಗಿ ಹರಡುವ ಲಕ್ಷಣ ಹೊಂದಿರುವುದರಿಂದ ಮುನ್ನೂರು ಶಾಸಕರು, ಸರ್ಕಾರಿ ಅಧಿಕಾರಿಗಳು, ಪೊಲೀಸರು, ಪತ್ರಕರ್ತರು ಸೇರಿ ಸಾವಿರಾರು ಜನರು ಅಧಿವೇಶದಲ್ಲಿ ಸೇರುವುದರಿಂದ ಕೊರೊನಾ ವೈರಸ್‌ ತಗುಲಿದರೆ ನಿಯಂತ್ರಣಕ್ಕೆ ತರುವುದು ಕಷ್ಟಸಾಧ್ಯವಾಗಲಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ ಸದಸ್ಯರು ಅಧಿವೇಶನ ಮುಂದೂಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಕಾಂಗ್ರೆಸ್‌ ಹಿರಿಯ ಶಾಸಕ ಎಚ್‌.ಕೆ.ಪಾಟೀಲ್‌ ಎರಡನೇ ವಾರದಲ್ಲಿಯೇ ಈ ಬಗ್ಗೆ ಸದನದ ಒಳಗಡೆಯೇ ಅಧಿವೇಶನ ಮುಂದೂಡುವಂತೆ ಆಗ್ರಹಿಸಿದ್ದರು. ಆದರೆ, ರಾಜ್ಯ ಸರ್ಕಾರ ಈಗಾಗಲೇ ನಿಗದಿಯಾಗಿರುವಂತೆ ಮಾರ್ಚ್‌ 31 ರವರೆಗೆ ನಡೆಸಲು ನಿರ್ಧರಿಸಿದ್ದು ಯಾವುದೇ ಕಾರಣಕ್ಕೂ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಲೇ ಬರುತ್ತಿದೆ.

ಪ್ರಧಾನಿ ಸೂಚನೆ: ಈಗಾಗಲೇ ಸಂಸತ್‌ ಅಧಿವೇಶನ ನಡೆಯುತ್ತಿದೆ. ಕೊರೊನಾ ಭೀತಿಯಿಂದ ಸಂಸತ್‌ ಹಾಗೂ ವಿಧಾನಸಭೆಗಳ ಅಧಿವೇಶನ ಮುಂದೂಡಿದರೆ ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಅಲ್ಲದೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಲು ಹೆಚ್ಚು ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಈಗ ನಡೆಯುತ್ತಿರುವ ಅಧಿವೇಶನಗಳನ್ನು ಮುಂದೂಡದಂತೆ ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.

Advertisement

ಅಲ್ಲದೆ, ಮಧ್ಯಪ್ರದೇಶ ಸರ್ಕಾರ ಕೊರೊನಾ ಹೆಸರಿನಲ್ಲಿ ಅಧಿವೇಶನ ಮುಂದೂಡಿದ್ದನ್ನು ಬಿಜೆಪಿ ವಿರೋಧಿಸಿತ್ತು. ಹೀಗಾಗಿ ತಮ್ಮ ಸರ್ಕಾರವೂ ಕೊರೊನಾ ಹೆಸರಲ್ಲಿ ಅಧಿವೇಶನ ಮುಂದೂಡಿದರೆ ಅನಗತ್ಯ ಗೊಂದಲ ಸೃಷ್ಟಿಸಿದಂತಾಗುತ್ತದೆ ಹಾಗೂ ಸಾರ್ವಜನಿಕರು ಕೊರೊನಾ ನಿಯಂತ್ರಿಸುವ ಕಾರ್ಯದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಸರ್ಕಾರ ಈಗಾಗಲೇ ನಿಗದಿ ಪಡಿಸಿರುವಂತೆ ಮಾ.31ರ ವರೆಗೂ ಅಧಿವೇಶನ ನಡೆಸಲು ನಿರ್ಧಸಿದೆ ಎಂದು ತಿಳಿದು ಬಂದಿದೆ.

ಆದರೂ ಪ್ರತಿಪಕ್ಷ ಕಾಂಗ್ರೆಸ್‌ ಮಾತ್ರ ಅಧಿವೇಶನ ಮುಂದೂಡುವಂತೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸದನ ಸಲಹಾ ಸಮಿತಿ ಸಭೆ ನಡೆಯುವ ಸಾಧ್ಯತೆ ಇದ್ದು, ಈ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ನಿಗದಿಯಾಗಿರುವಂತೆ ಮಾ.31 ರವರೆಗೆ ಅಧಿವೇಶನ ನಡೆಯಲಿದೆ. ಅಧಿವೇಶನ ಮೊಟಕುಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಹಾಗೇನಾದರೂ ಇದ್ದರೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ನಾವು ಎಷ್ಟೇ ನಿರ್ಬಂಧ ಹೇರಿದರೂ ಸಾರ್ವಜನಿಕರು ವಿಧಾನಸೌಧಕ್ಕೆ ಆಗಮಿಸುತ್ತಾರೆ. ಕೊರೊನಾ ಭೀತಿಯಿಂದ ರಾಜ್ಯ ಸರ್ಕಾರ 9 ಜಿಲ್ಲೆಗಳನ್ನು ಲಾಕ್‌ ಡೌನ್‌ ಮಾಡಿದೆ. ಅಧಿವೇಶನ ಮುಂದೂಡುವ ಬಗ್ಗೆ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ, ಸ್ಪೀಕರ್‌ ಹಾಗೂ ಸರ್ಕಾರಕ್ಕೆ ಮುಂದೂಡುವಂತೆ ಮನವಿ ಮಾಡಿಕೊಳ್ಳಲಾಗುವುದು.
-ಡಾ. ಅಜಯ್‌ ಸಿಂಗ್‌, ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ

Advertisement

Udayavani is now on Telegram. Click here to join our channel and stay updated with the latest news.

Next