Advertisement

ಅನುಭವ ಮಂಟಪದಲ್ಲಿ ಅಧಿವೇಶನ: ಬಿಎಸ್‌ವೈ

11:52 AM Dec 05, 2017 | Team Udayavani |

ಬಸವಕಲ್ಯಾಣ: ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಬಸವಕಲ್ಯಾಣ ಅನುಭವ ಮಂಟಪದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಜತೆಗೆ ಒಂದು ದಿನದ ಅಧಿವೇಶನ ನಡೆಸಿ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದರು.

Advertisement

ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ “ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ ನಿಮಿತ್ತ ಸೋಮವಾರ ಬಿಜೆಪಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಮುಕುಟವಾಗಿರುವ ಶರಣ ಭೂಮಿ ಬಸವಕಲ್ಯಾಣ ಸಮಗ್ರ ಅಭಿವೃದ್ಧಿಗೊಳಿಸಿ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಸಂಕಲ್ಪ ಹೊಂದಲಾಗಿದೆ ಎಂದರು.

ಸಮಾನತೆ, ಭಾತೃತ್ವ, ಮಹಿಳಾ ಸ್ವಾತಂತ್ರ್ಯಕ್ಕೆ ವೇದಿಕೆಯಾಗಿದ್ದ ಅನುಭವ ಮಂಟಪದಲ್ಲಿ ಕ್ಯಾಬಿನೇಟ್‌ ಸಭೆ ನಡೆಸಬೇಕು ಎಂಬುದು ನನ್ನ ಆಶಯವಾಗಿದೆ. ಈ ಮೂಲಕ ಬಸವಣ್ಣನವರ ತತ್ವಾದರ್ಶಗಳನ್ನು ಅನುಷ್ಠಾನಕ್ಕೆ ತರಲು
ಯತ್ನಿಸಲಾಗುವುದು ಎಂದರು.

ತಮ್ಮ ಸರ್ಕಾರದ ಅಧಿಕಾರವಧಿಯಲ್ಲಿ ಶರಣರ ಸ್ಮಾರಕಗಳ ಅಭಿವೃದ್ಧಿಗಾಗಿ ಬಿಕೆಡಿಬಿಗೆ 35 ಕೋಟಿ, ಬಸವ ಉತ್ಸವಕ್ಕೆ 1 ಕೋಟಿ ರೂ. ನೀಡಲಾಗಿತ್ತು. ಈಗಲೂ ಸಹ ಅಧಿಕಾರಕ್ಕೇರಿದ ತಕ್ಷಣ ಇಲ್ಲಿಯ ಅಭಿವೃದ್ಧಿಗಾಗಿ 50ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 42 ಗ್ರಾಮಗಳನ್ನು ಸುವರ್ಣ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಯತ್ನಿಸಲಾಗಿತ್ತು. ಗ್ರಾಮ್‌ ಸಡಕ್‌ ಯೋಜನೆ ಮೂಲಕ ರಸ್ತೆಗಳ ಅಭಿವೃದ್ಧಿಪಡಿಸಲಾಗಿತ್ತು.

24ಗಂಟೆ ನಿರಂತರ ನೀರು, ನಿರಂತರ ವಿದ್ಯುತ್‌ ಹೀಗೆ ಬಸವಕಲ್ಯಾಣ ಕ್ಷೇತ್ರದ ಸಮಗ್ರ ಅಭಿವೃದ್ಧಿಪಡಿಸಲಾಗಿತ್ತು. ಈ ಕ್ಷೇತ್ರದ ಅಭಿವೃದ್ಧಿಗಾಗಿ 5 ವರ್ಷಗಳ ಅವಧಿಯಲ್ಲಿ ಸುಮಾರು 600 ರಿಂದ 700 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ, ಈಗಿನ ಹಾಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಮುಖ್ಯಮಂತ್ರಿ ಅವರ ಕೊಡುಗೆ ಈ ಕ್ಷೇತ್ರಕ್ಕೆ ಏನಿದೆ ಎಂದು ಪ್ರಶ್ನಿಸಿದರು. 

Advertisement

ವಿಧಾನ ಸಭೆ ಚುನಾವಣೆ ಟಿಕೆಟ್‌ ಹಂಚಿಕೆ ವೇಳೆ ಎಲ್ಲಾ ವರ್ಗದವರಿಗೆ ಅವಕಾಶ ನೀಡಬೇಕಿದೆ. ಇಲ್ಲಿ ಪಕ್ಷದ ಅಭ್ಯರ್ಥಿ ಯಾರೇ ಆಗಿರಲಿ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು. ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಅಭ್ಯರ್ಥಿಗಳು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್‌ ವಂಚಿತರಿಗೆ ಸರ್ಕಾರದಲ್ಲಿ ಅವಕಾಶ ನೀಡಲಾಗುವುದು. ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

ತಮ್ಮ ಭಾಷಣದ ಆರಂಭದಲ್ಲಿ ಕಲ್ಯಾಣದ ಜನರಲ್ಲಿ ಕ್ಷಮೆ ಕೋರುವುದಾಗಿ ಹೇಳಿದ ಬಿಎಸ್‌ ವೈ, ಅಕ್ಟೊಬರ್‌ 23ರಂದು ನಡೆದ ಮಾಜಿ ಶಾಸಕ ಮುಳೆ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಅಂದು ನಡೆದ ಕಾರ್ಯಕ್ರಮದಲ್ಲಿ ಇವತ್ತಿಗಿಂತಲೂ ಎರಡು ಪಟ್ಟು ಹೆಚ್ಚು ಜನ ಸೇರಿದ್ದಿರಿ ಎಂದು ನಾನು ಕೇಳಿದ್ದೇನೆ ಎಂದರು.

ಖೂಬಾ ಆರೋಪಿ ನಂ1: ಶಾಸಕ ಖೂಬಾ ವಿರುದ್ಧ ಸಿಬಿಐ ಪ್ರಕರಣ ಇದೆ. ಮತಕ್ಕಾಗಿ ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಖೂಬಾ ಮೊದಲು ತಮ್ಮ ವಿರುದ್ಧದ ಆರೋಪಗಳಿಂದ ಹೊರಬರಲಿ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಆಟ ಇನ್ನುಮುಂದೆ ನಡೆಯಲ್ಲ ಎಂದರು.

ಬಿಎಸ್‌ವೈ ಮಾತನಾಡುವ ವೇಳೆ ವೇದಿಕೆಯಲಿದ್ದ ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ ಅವರ ಪುತ್ರ ಲಿಂಗರಾಜ ಪಾಟೀಲ ಅವರು, ಬಿಎಸ್‌ ವೈಗೆ ಚೀಟಿ ನೀಡಿ ಮತಕ್ಕಾಗಿ ಲಂಚ ಪ್ರಕರಣ ಕುರಿತು ಖೂಬಾ ವಿರುದ್ಧ ಸಿಬಿಐ ಪ್ರಕರಣ ಇರುವುದನ್ನು ನೆನಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next