Advertisement

ಅತೃಪ್ತರ ಮೇಲೆ ವಿಪ್‌ ಅಸ್ತ್ರ

02:24 AM Jul 12, 2019 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದ ಹೈಡ್ರಾಮಾ ಮತ್ತೂಂದು ಹಂತ ತಲುಪಿದ್ದು, ಹತ್ತು ಅತೃಪ್ತ ಶಾಸಕರು ಹೊಸದಾಗಿ ರಾಜೀನಾಮೆ ಸಲ್ಲಿಸಿದರೂ ಸ್ಪೀಕರ್‌ ಅಂಗೀಕಾರ ಮಾಡಿಲ್ಲ. ಮತ್ತೂಂದೆಡೆ ಶುಕ್ರವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದ್ದು ಕಾಂಗ್ರೆಸ್‌-ಜೆಡಿಎಸ್‌ ಶಾಸಕರಿಗೆ ವಿಪ್‌ “ಅಸ್ತ್ರ’ ಜಾರಿ ಮಾಡಿ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ.

Advertisement

ಮರಳಿ ಮುಂಬೈಗೆ ತೆರಳಿರುವ ಅತೃಪ್ತರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.ಇದರ ನಡುವೆಯೇ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಧ್ಯ ಇರುವ ಎಲ್ಲ ಪ್ರಯತ್ನವನ್ನೂ ದೋಸ್ತಿ ಪಕ್ಷಗಳು ಮಾಡುತ್ತಿವೆ. ಸಂಪುಟ ಸಭೆಯಲ್ಲೂ ರಾಜಕೀಯ ಬಿಕ್ಕಟ್ಟು ಪ್ರಸ್ತಾಪಗೊಂಡು ಸವಾಲು ಎದುರಿಸಿ ಸರ್ಕಾರ ಉಳಿಸಿಕೊಳ್ಳಲು ಸಂಕಲ್ಪ ಮಾಡಲಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು, ನಾನೇಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿ ಸರ್ಕಾರ ಸ್ಥಿರವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ಬೆಳಗ್ಗೆ ಶಾಸಕರ ರಾಜೀನಾಮೆ ಅಂಗೀಕಾರ ಸಂಬಂಧದ ವಿಚಾರಣೆ ನಡೆಯಲಿದ್ದು ಅಲ್ಲಿನ ತೀರ್ಪು ನೋಡಿ ಮುಂದಿನ ಕಾರ್ಯತಂತ್ರ ರೂಪಿಸಲು ಬಿಜೆಪಿ ನಿರ್ಧರಿಸಿದೆ.

ಅಂಗೀಕಾರವಿಲ್ಲ: ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಹತ್ತು ಶಾಸಕರ ರಾಜೀನಾಮೆ ಪತ್ರ ನಿಯಮಾನುಸಾರ ಪಡೆದು ನಂತರ ಪತ್ರಿಕಾಗೋಷ್ಠಿ ನಡೆಸಿ, “ಎಲ್ಲರೂ
ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ನಾನು ತಕ್ಷಣವೇ ಅಂಗೀಕಾರ ಮಾಡಲು ಆಗುವುದಿಲ್ಲ. ನಿಯಮಾನುಸಾರ ವಿಚಾರಣೆ ನಡೆಸಲೇಬೇಕು. ಈ ಕುರಿತು ಸುಪ್ರೀಂ  ಕೋರ್ಟ್‌ಗೂ ಮಾಹಿತಿ ನೀಡಲಿದ್ದೇನೆ’ ಎಂದರು.

ಸ್ಪೀಕರ್‌ ತೀರ್ಪು ಬಗ್ಗೆ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ಕಾತುರದಿಂದ ಕಾಯುತ್ತಿದ್ದವು. ಸ್ಪೀಕರ್‌ ನಿಲುವು ಪ್ರಕಟಿಸಿದ ನಂತರ ಬಿಜೆಪಿಯಲ್ಲಿ ಮೌನ ಆವರಿಸಿತು. ಈ ಮಧ್ಯೆ, ರಾಜೀನಾಮೆ ಅಂಗೀಕಾರ ಸಂಬಂಧ ಶುಕ್ರವಾರ ಆಧಿವೇಶನದ ದಿನ ಆನಂದ್‌ಸಿಂಗ್‌, ಬಿ.ಸಿ.ಪಾಟೀಲ್‌, ಪ್ರತಾಪ್‌ಗೌಡ ಪಾಟೀಲ್‌ ಅವರ ವಿಚಾರಣೆಯೂ ಇದೆ.

Advertisement

ಪ್ರಮುಖ ನಿರ್ಣಯ ಬೇಡ
ಹದಿನಾರು ಶಾಸಕರು ರಾಜೀನಾಮೆ ನೀಡಿರುವುದರಿಂದ, ರಾಜ್ಯ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ಗೆ ರಾಜ್ಯಪಾಲವಜುಭಾಯಿ ವಾಲಾ ಸೂಚನೆ ನೀಡಿದ್ದಾರೆ.

ವಿಜಯನಗರ ಶಾಸಕ ಆನಂದ್‌ ಸಿಂಗ್‌ ಜುಲೈ 10 ರಂದು ಜಿಂದಾಲ್‌ಗೆ ಜಮೀನು ಮಾರಾಟ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ನಿರ್ಣಯ ಕೈಗೊಳ್ಳದಂತೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಅವರ ಪತ್ರದ ಆಧಾರದ ಮೇಲೆ ರಾಜ್ಯಪಾಲರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದು, ಯಾವುದೇ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳದಂತೆ ಸೂಚಿಸಿದ್ದಾರೆ. ಆದರೆ, ದಿನನಿತ್ಯದ ಚಟುವಟಿಕೆಗಳು ಹಾಗೂ ಸಣ್ಣಪುಟ್ಟ ನಿರ್ಣಯ ಗಳನ್ನು ತೆಗೆದುಕೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಂದೇನು ಆಗಬಹುದು?
– ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಬಹುದು
– ರಾಜ್ಯಪಾಲರು ವಿಶ್ವಾಸ ಮತಕ್ಕೆ ಸೂಚಿಸಬಹುದು
– ಮುಖ್ಯಮಂತ್ರಿಯೇ ವಿಶ್ವಾಸ ಮತ ಸಾಬೀತಿಗೆ ಮುಂದಾಗಬಹುದು
– ಹಣಕಾಸು ವಿಧೇಯಕ ಮಂಡನೆಯಾಗಬಹುದು
– ಹಣಕಾಸು ವಿಧೆಯಕಕ್ಕೆ ಒಪ್ಪಿಗೆ ಸೂಚಿಸಿ, ಇತರೆಕಲಾಪಕ್ಕೆ ಬಿಜೆಪಿ ಅಡ್ಡಿಪಡಿಸಬಹುದು
– ಅತೃಪ್ತರು ಸದನಕ್ಕೆ ಹಾಜರಾಗದಿದ್ದರೆ ಮುಖ್ಯಮಂತ್ರಿಯವರು ವಿದಾಯ ಭಾಷಣ ಮಾಡಿ ರಾಜೀನಾಮೆ ನೀಡಬಹುದು

ರಾಜೀನಾಮೆ ಸಲ್ಲಿಸಿದವರು
ಬೈರತಿ ಬಸವರಾಜು, ರಮೇಶ್‌ ಜಾರಕಿಹೊಳಿ,ಬಿ.ಸಿ.ಪಾಟೀಲ್‌, ಶಿವರಾಮ ಹೆಬ್ಟಾರ್‌,
ಎಸ್‌.ಟಿ. ಸೋಮಶೇಖರ್‌, ನಾರಾಯಣಗೌಡ,ಕೆ.ಗೋಪಾಲಯ್ಯ, ಎಚ್‌.ವಿಶ್ವನಾಥ್‌, ಪ್ರತಾಪಗೌಡ ಪಾಟೀಲ್‌, ಮಹೇಶ್‌ ಕುಮಟಳ್ಳಿ, (ಮುನಿರತ್ನ ಸುಪ್ರೀಂ ಕೋರ್ಟ್‌ ಮೊರೆ ಹೋಗದಿದ್ದರೂ ಶಾಸಕರೊಂದಿಗೆ ಸ್ಪೀಕರ್‌ ಕಚೇರಿಗೆ ಹೋಗಿದ್ದರು)

ಸುಪ್ರೀಂ ತೀರ್ಪಿನ ನಂತರ ಬಿಜೆಪಿ ಹೆಜ್ಜೆ
ಅತೃಪ್ತರ ಅರ್ಜಿ ವಿಚಾರಣೆ ಶುಕ್ರವಾರ ಸುಪ್ರೀಂನಲ್ಲಿ ನಡೆಯಲಿದ್ದು,ಕೋರ್ಟ್‌ ಸೂಚನೆ ಆಧರಿಸಿ ಮುಂದಿನ ಹೆಜ್ಜೆ ಇರಿಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ ವಿಧಾನಮಂಡಲ ಅಧಿವೇಶನ ಆರಂಭವಾಗಲಿರುವ ಮೊದಲ ದಿನ ಸಂತಾಪ ಸೂಚನೆ ಕಲಾಪದಲ್ಲಿ ಪಾಲ್ಗೊಳ್ಳಲು ಹಾಗೂ ನಂತರ ಯಾವುದೇ ಕಲಾಪ ನಡೆಸಲು ಸರ್ಕಾರ ಮುಂದಾದರೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆ ಅಥವಾ ಅಡ್ಡಿಪಡಿಸಬೇಕೆ ಎಂಬ ಬಗ್ಗೆ ಶುಕ್ರವಾರದ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಿದೆ.

          
Advertisement

Udayavani is now on Telegram. Click here to join our channel and stay updated with the latest news.

Next