Advertisement
ಮಕರಸಂಕ್ರಾಂತಿ ಸೌರಮಾನದ ಹಬ್ಬ. ಈ ಹಬ್ಬದಲ್ಲಿ ಸೂರ್ಯದೇವನಿಗೆ ಆದ್ಯತೆ. ಸೂರ್ಯ ನಮಗೆ ಶಾಖ, ಬೆಳಕು ಶಕ್ತಿ ಕೊಡುವುದರಿಂದ ಆತನಿಗೆ ಪೂಜೆಯ ಮೂಲಕ ಕೃತಜ್ಞತೆ ಸಲ್ಲಿಸುವ ಹಬ್ಬ. ಧಾರ್ಮಿಕವಾಗಿ ಕೂಡ ಮಹತ್ವಗಳಿಸಿರುವ ಉತ್ತರಾಯಣದ ಪ್ರಾರಂಭ. ಮಕರಸಂಕ್ರಾಂತಿ ಹಾಗೂ ಅನಂತರದ ದಿನಗಳಲ್ಲಿ ಮದುವೆ, ಮುಂಜಿ, ಗೃಹಪ್ರವೇಶ ಮುಂತಾದ ಮಂಗಲ ಕಾರ್ಯಗಳನ್ನು ಮಾಡಿದರೆ ಒಳ್ಳೆಯದಾಗುತ್ತದೆಂಬ ನಂಬಿಕೆ ಇದೆ. ಮಕರಸಂಕ್ರಾಂತಿಯ ದಿನದಿಂದ ಮುಂದಿನ ಆರು ತಿಂಗಳು ಸ್ವರ್ಗದ ಬಾಗಿಲು ತೆರೆದಿರುತ್ತದೆ. ಈ ಕಾಲದಲ್ಲಿ ದೇಹತ್ಯಾಗ ಮಾಡಿದರೆ ಮೋಕ್ಷಪ್ರಾಪ್ತಿಯಾಗುತ್ತದೆಂಬ ನಂಬಿಕೆಯೂ ಇದೆ. ಮಹಾಭಾರತದಲ್ಲಿ ಇಚ್ಛಾಮರಣಿ ಭೀಷ್ಮ ಶರಶಯೆÂಯಲ್ಲಿ ಮಲಗಿ ಪ್ರಾಣತ್ಯಾಗ ಮಾಡಲು ಉತ್ತರಾಯಣ ಪುಣ್ಯಕಾಲಕ್ಕೆ ಕಾದಿದ್ದನ್ನು ನೆನಪು ಮಾಡಿಕೊಳ್ಳಬಹುದು. ಮಕರಸಂಕ್ರಾಂತಿಯ ನಂತರ ಹಗಲಿನ ಅವಧಿ ಹೆಚ್ಚಾಗಿ ರಾತ್ರಿಯ ಅವಧಿ ಕಡಿಮೆಯಾಗುತ್ತದೆ.
ಸಂಕ್ರಾಂತಿ ಸುಗ್ಗಿಯ ಕಾಲ; ಸಮೃದ್ಧಿಯ ಕಾಲ. ಕೃಷಿಕರಿಗಂತೂ ಸಂತಸ ಸಂಭ್ರಮದ ಕಾಲ. ಹೊಸಬೆಳೆ ಕೊಯಿಲಿಗೆ ಬಂದಿರುತ್ತದೆ. ಅದನ್ನು ಕಟಾವುಮಾಡಿ ಒಟ್ಟುಗೂಡಿಸಿ ಧಾನ್ಯರಾಶಿಗೆ ಪೂಜೆಮಾಡುವ ಕಾಲ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ತಮಿಳುನಾಡುಗಳಲ್ಲಿ ಈ ಹಬ್ಬವನ್ನು ಬೇರೆ ಬೇರೆ ಹೆಸರುಗಳಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿ “ಮಕರಸಂಕ್ರಾಂತಿ’ ಎಂದೂ, ತಮಿಳುನಾಡಿನಲ್ಲಿ “ಪೊಂಗಲ್’ ಎಂದೂ, ಆಂಧ್ರದಲ್ಲಿ “ಸಂಕ್ರಾಂತಿ’ ಅಥವಾ “ಕನುಮ ಪಂಡುಗ’ ಎಂದೂ ಕರೆಯುತ್ತಾರೆ. ಕೇರಳದಲ್ಲಿ ಶಬರಿಮಲೆಗೆ ಈ ಹಬ್ಬಕ್ಕೆ ಅವಿನಾಭಾವ ಸಂಬಂಧ ಕಲ್ಪಿಸಿದ್ದಾರೆ. ಉತ್ತರಇಂಡಿಯಾದಲ್ಲಿ ಈ ಹಬ್ಬವು ವಿವಿಧ ಹೆಸರುಗಳಿಂದ ಆಚರಿಸಲ್ಪಡುತ್ತದೆ. ಗುಜರಾತ್‌ನಲ್ಲಿ ಉತ್ತರಾಯಣವೆಂದೂ, ಹರಿಯಾಣ ಮತ್ತು ಹಿಮಾಚಲಪ್ರದೇಶಗಳಲ್ಲಿ ಮಾಗಿ ಎಂದೂ, ಉತ್ತರಪ್ರದೇಶದಲ್ಲಿ ಕಿಚಡಿ ಎನ್ನುವ ಹೆಸರುಗಳಲ್ಲೂ ಆಚರಿಸುತ್ತಾರೆ. ಈ ಹಬ್ಬದಲ್ಲಿ ಉತ್ತರಭಾರತದ ಜನರು ಗಾಳಿಪಟ ಹಾರಿಸುವುದನ್ನು ಒಂದು ಪದ್ಧತಿಯನ್ನಾಗಿ ರೂಢಿಸಿಕೊಂಡಿದ್ದಾರೆ.
Related Articles
Advertisement
ಸಂಕ್ರಾಂತಿಯ ದಿನ ಮನೆಮಕ್ಕಳನ್ನು ಕೂಡಿಸಿ ಆರತಿಮಾಡಿ, ಕಬ್ಬಿನ ಚೂರು, ಎಲಚೀಹಣ್ಣು, ಕಾಸುಗಳನ್ನು ಬೆರೆಸಿ ಪಾವಿನಲ್ಲಿ ತುಂಬಿಕೊಂಡು ತಲೆಯ ಮೇಲೆ ಸುರಿದು ಶುಭಹಾರೈಸುತ್ತಾರೆ. ಪೂಜೆಯ ನಂತರ ಹಿರಿಯರು ಮಕ್ಕಳಿಗೆ ಬೆರೆಸಿದ ಎಳ್ಳುಬೆಲ್ಲವನ್ನು ಕೊಟ್ಟು “ಎಳ್ಳು ತಿಂದು ಒಳ್ಳೆಯ ಮಾತನಾಡಿ’ ಎಂದು ಹರಸುತ್ತಾರೆ.
ಸಂಕ್ರಾಂತಿಯ ದಿನಗಳಲ್ಲಿ ಕೃಷಿಕರು, ಕಾವಾಡಿಗರು ರಾಸುಗಳಿಗೆ ಮೈತೊಳೆದು ಬಣ್ಣಬಣ್ಣದ ಬಟ್ಟೆ ಹೊದಿಸಿ, ಕೊಂಬುಗಳಿಗೆ ಬಣ್ಣಬಳಿದು, ಗೆಜ್ಜೆಗಳಿಂದ ಅಲಂಕರಿಸುತ್ತಾರೆ. ಕೊರಳಿಗೆ ಹಾರಹಾಕಿ ಗಂಟೆಗಳನ್ನು ಕಟ್ಟಿ ಗೋಪೂಜೆ ಮಾಡಿ ಅವುಗಳಿಗೆ ಕೊಬ್ಬರಿ-ಬೆಲ್ಲ-ಅಕ್ಕಿಯ ಜೊತೆ ಮನೆಯಲ್ಲಿ ಮಾಡಿರುವ ತಿಂಡಿತಿನಿಸುಗಳನ್ನು ಉಣಿಸಿ, ಊರಿನಲ್ಲಿ ಮೆರವಣಿಗೆಯನ್ನು ಮಾಡುತ್ತಾರೆ. ಸಾಯಂಕಾಲವಾಗುತ್ತಿದ್ದಂತೆ ರಾಸುಗಳಿಂದ ಕಿಚ್ಚು ಹಾಯಿಸುತ್ತಾರೆ. ಅದುವರೆಗೂ ಹೊಲಗದ್ದೆಗಳಲ್ಲಿ ದುಡಿದ ರಾಸುಗಳ ಮೈಯಲ್ಲಿ, ಪಾದಗಳಲ್ಲಿ ಸೇರಿದ್ದ ಸೂಕ್ಷ್ಮಜೀವಿಗಳು ಕಿಚ್ಚು ಹಾಯಿಸುವುದರಿಂದ ನಾಶವಾಗುತ್ತವೆ. ಆಂಧ್ರಪ್ರದೇಶದಲ್ಲಿ ಈ ಹಬ್ಬವನ್ನು ಮೂರುದಿನಗಳ ಕಾಲ ಆಚರಿಸುತ್ತಾರೆ.
ಮೊದಲ ದಿನ ಭೋಗಿಹಬ್ಬ : ಸೂರ್ಯ ಮೂಡುವ ಮುನ್ನವೇ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಅಂದರೆ ಪೊರಕೆ, ಬುಟ್ಟಿ, ಮುರಿದ ಮರದ ಸಾಮನುಗಳನ್ನು, ನಾಲ್ಕು ರಸ್ತೆಗಳು ಕೂಡುವಲ್ಲಿ ಪೇರಿಸಿ ಬೆಂಕಿ ಹಚ್ಚುತ್ತಾರೆ. ಹೊಸವಸ್ತುಗಳಿಂದ ಹೊಸಜೀವನ ಆರಂಭಿಸುವ ಉದ್ದೇಶದಿಂದ ಆಚರಿಸುವ ಈ ದಿನವನ್ನು ಭೋಗಿಮಂಟ ಎಂದು ಕರೆಯುತ್ತಾರೆ.
ಸಂಕ್ರಾಂತಿಯ ಎರಡನೆಯ ದಿನ ಜನರು ಹೊಸಬಟ್ಟೆ ಧರಿಸಿ, ಮನೆಯಲ್ಲಿ ಹಾಲು ಉಕ್ಕಿಸಿ, ಅದರಿಂದ ಸಿಹಿತಿಂಡಿಗಳನ್ನು ತಯಾರಿಸಿ ಮನೆಮಂದಿಯೆಲ್ಲ ತಿನ್ನುತ್ತಾರೆ. ಅಂದು ಸಾಮಾನ್ಯವಾಗಿ ಪಿತೃತರ್ಪಣವನ್ನು ಅರ್ಪಿಸುವ ರೂಢಿಯೂ ಕಂಡುಬರುತ್ತದೆ.
ಮೂರನೆಯ ದಿವಸ ಕನುಮ ಪಂಡುಗ ಎಂದು ಕರೆಯುವ ಈ ಹಬ್ಬದಲ್ಲಿ ಬಣ್ಣಬಣ್ಣದ ರಂಗೋಲಿ ಹಾಕಿ ಅದರ ಮಧ್ಯೆ ಸೆಗಣಿಯಿಟ್ಟು ಕುಂಬಳ ಹೂವಿನಿಂದ ಅಲಂಕರಿಸುತ್ತಾರೆ ಅವುಗಳನ್ನು ಗೊಬ್ಬೆಮ್ಮ ಅಥವಾ ಗೊಬ್ಬಿಳ್ಳು ಎಂದು ಕರೆಯುತ್ತಾರೆ. ಅವುಗಳನ್ನು ಹಸುಗಳಿಂದ ತುಳಿಸುತ್ತಾರೆ. ಈ ದಿನ ವರ್ಷಪೂರ್ತಿ ಬೇಸಾಯಕ್ಕೆ ಸಹಾಯಮಾಡಿದ ಪಶುಪಕ್ಷಿಗಳಿಗೂ ಕೃತಜ್ಞತೆಯನ್ನು ಅರ್ಪಿಸುತ್ತಾರೆ. ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ. ಮೊದಲನೆಯ ದಿನ ಭೋಗಿಹಬ್ಬ. ಮನೆಯನ್ನು ಅಲಂಕರಿಸಿ ಹೊಸಬಟ್ಟೆ ಧರಿಸಿ ಅರಸಿನ ಅಥವಾ ಸಗಣಿ ಬಳಸಿ ಪಿಳ್ಳಾರಿ (ಗಣಪ) ಮಾಡಿ, ಪೂಜಿಸಿ ಹುಗ್ಗಿ ನೈವೇದ್ಯ ಮಾಡುತ್ತಾರೆ.
ಎರಡನೆಯ ದಿನ ಸೂರ್ಯಪೊಂಗಲ್. ಮನೆಯ ಹೊರಗಡೆಯ ಜಾಗವನ್ನು ಶುಚಿಮಾಡಿ, ಬಣ್ಣಬಣ್ಣದ ರಂಗೋಲಿಹಾಕಿ, ಹೊಸ ಮಣ್ಣಿನ ಪಾತ್ರೆಗೆ ಅರಸಿನದ ಕೊಂಬು, ಶುಂಠಿ ಕಟ್ಟಿ ಹೂಗಳಿಂದ ಅಲಂಕರಿಸಿ, ಆ ಪಾತ್ರೆಯಲ್ಲಿ ಪೊಂಗಲ್ ತಯಾರಿಸುತ್ತಾರೆ. ಮೊದಲು ಸೂರ್ಯನಿಗೆ ನೈವೇದ್ಯಮಾಡಿ ನಂತರ ಹಸುಗಳಿಗೆ ತಿನ್ನಿಸುತ್ತಾರೆ. ಆ ಪೊಂಗಲನ್ನು ಮನೆಯವರು ಪ್ರಸಾದದ ರೀತಿಯಲ್ಲಿ ಸ್ವೀಕರಿಸುತ್ತಾರೆ.
ಮೂರನೆಯ ದಿನ ಮಟ್ಟುಪೊಂಗಲ್ ರಾಸುಗಳ ಹಬ್ಬ. ರಾಸುಗಳಿಗೆ ಹೂವು, ಮಣಿಸರಗಳಿಂದ ಅಲಂಕಾರ ಮಾಡಿ, ಕೊಂಬುಗಳಿಗೆ ಬಣ್ಣ ಬಳೆದು ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಎತ್ತುಗಳ ಓಟದ ಸ್ಪರ್ಧೆ, ಹೋರಾಟದ ಸ್ಪರ್ಧೆ(ಜಲ್ಲಿಕಟ್ಟು) ನಡೆಸುತ್ತಾರೆ.
ನಾಲ್ಕನೆಯ ದಿನ ಕನುಪೊಂಗಲ್. ಮೊದಲೆಲ್ಲಾ ಅಣ್ಣತಮ್ಮಂದಿರ ಶ್ರೇಯಸ್ಸಿಗಾಗಿ ಪೂಜೆಮಾಡಿ ಬಗೆಬಗೆಯ ಪಕ್ವಾನ್ನಗಳನ್ನು ತಯಾರಿಸಿಕೊಂಡು ಬಂಧುಬಳಗದ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಈಗ ಎಲ್ಲರೂ ಒಟ್ಟಿಗೆ ಸೇರಿ ಯಾವುದಾದರೂ ಸ್ಥಳಕ್ಕೆ ಪ್ರವಾಸ ಹೋಗಿ ಕಾಲಕಳೆಯುತ್ತಾರೆ.
ಕೇರಳದಲ್ಲಿ ಸಂಕ್ರಾಂತಿಗೂ ಶಬರಿಮಲೆಗೆ ಸಂಬಂಧ ಕಲ್ಪಿಸಲಾಗಿದೆ. ಮಕರಸಂಕ್ರಾಂತಿಯ ದಿನ ಸಾವಿರಾರು ಭಕ್ತಾದಿಗಳು ಶಬರಿಮಲೆಯಲ್ಲಿ ಸೇರುತ್ತಾರೆ. ಸ್ವಾಮಿ ಅಯ್ಯಪ್ಪನ ದರ್ಶನಮಾಡಿ ದೇವಾಲಯದಿಂದ ಹೊರಗೆ ಬಂದು ಪೂರ್ವದಿಗಂತದಲ್ಲಿ ಕಾಣಿಸುವ ಮಕರಜ್ಯೋತಿಯ ದರ್ಶನಕ್ಕಾಗಿ ಕಾತರಿಸುತ್ತಾರೆ. ಮಕರಜ್ಯೋತಿಯ ದರ್ಶನವಾದ ನಂತರ ಜನರು ಹರ್ಷೋದ್ಗಾರ ಮಾಡುತ್ತ ನಿರ್ಗಮಿಸುತ್ತಾರೆ. ಇದನ್ನು ಮಕರವಿಳೈಕು ಎಂದು ಕರೆಯುತ್ತಾರೆ.
ಮಕರಜ್ಯೋತಿಭಾರತದಲ್ಲಿ ಮಕರಜ್ಯೋತಿಯ ಸಂದರ್ಭದಲ್ಲಿ ಅನೇಕ ಮೇಳಗಳನ್ನು ಆಯೋಜಿಸುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ಹರಿದ್ವಾರ, ಪ್ರಯಾಗ, ಉಜ್ಜಯಿನಿ, ನಾಸಿಕ್‌ಗಳಲ್ಲಿ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಜನರು ಪವಿತ್ರ ನದಿಗಳಲ್ಲಿ ಮುಳುಗಿ ದೇವರಿಗೆ ನಮಸ್ಕರಿಸುತ್ತಾರೆ. ಪ್ರಯಾಗದಲ್ಲಿ ಪ್ರತಿವರ್ಷ ಮಾಘಮೇಳವನ್ನೂ, ಗಂಗಾನದಿಯ ಪಾತ್ರಗಳಲ್ಲಿ ಗಂಗಾಸಾಗರ ಮೇಳಗಳನ್ನೂ ಆಯೋಜಿಸುತ್ತಾರೆ.
ಮಕರ ಸಂಕ್ರಾಂತಿ ಜನರ ಹಬ್ಬ. ಈ ಹಬ್ಬದಿಂದ ಹೊಸ ಜೀವನ, ಹೊಸ ಆಲೋಚನೆಗಳು, ಅದೃಷ್ಟ ಆರಂಭವಾಗುತ್ತವೆ. ಸಿ. ಎನ್. ಮುಕ್ತಾ