Advertisement

ಕರ್ನಾಟಕ ಒನ್‌ ಕೇಂದ್ರದ ಸೇವೆ ಸ್ಥಗಿತ

05:47 PM Dec 12, 2019 | Suhan S |

ಹುಬ್ಬಳ್ಳಿ: ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ವಿಜಯ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಒನ್‌ (ಹುಧಾ ಒನ್‌) ನಾಗರಿಕ ಸೇವಾ ಕೇಂದ್ರ ಸ್ಥಗಿತಗೊಂಡಿದ್ದು, 15 ದಿನ ಕಳೆದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಕಟ್ಟಡ ಸಾಮರ್ಥ್ಯ ಪರೀಕ್ಷೆ ನಡೆಸಿ ವರದಿ ನೀಡಿಲ್ಲ. ಕೇಂದ್ರಕ್ಕೆ ಬೀಗಿ ಹಾಕಿರುವುದರಿಂದ ಸಾರ್ವಜನಿಕರು ವಿವಿಧ ಬಿಲ್‌ ಪಾವತಿಗೆ ಪರದಾಡುವಂತಾಗಿದೆ.

Advertisement

ವರ್ಷದ 365 ದಿನಗಳ ಕಾಲ ಒಂದೇ ಸೂರಿನಡಿ ವಿವಿಧ ಬಿಲ್‌ ಪಾವತಿಸುವ ಸೌಲಭ್ಯ ಇರುವುದರಿಂದ ಕರ್ನಾಟಕ ಒನ್‌ ಕೇಂದ್ರಗಳನ್ನು ಜನರು ಅವಲಂಬಿಸಿದ್ದಾರೆ. ಹೀಗಾಗಿ ಕಳೆದ 15 ದಿನಗಳಿಂದ ವಿಜಯನಗರ ಕೇಂದ್ರದ ಕಾರ್ಯ ಸ್ಥಗಿತಗೊಂಡಿರುವುದರಿಂದ ಸುತ್ತಲಿನ ಜನರು ಬಿಲ್‌ ಪಾವತಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೇಂದ್ರ ಸ್ಥಗಿತಗೊಂಡಾಗಿನಿಂದ ವಿದ್ಯುತ್‌, ನೀರು, ದೂರವಾಣಿ ಬಿಲ್‌ ಪಾವತಿ ಸೇರಿದಂತೆ ಇತರೆ ಸೇವೆಗಳಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೇ ಕಡೆ ಎಲ್ಲಾ ಬಿಲ್‌ಗ‌ಳನ್ನು ಪಾವತಿ ಮಾಡಬೇಕಾದರೆ ಕೇಶ್ವಾಪುರ, ಐಟಿ ಪಾರ್ಕ್‌ ಹಾಗೂ ಉಣಕಲ್ಲ ಕ್ರಾಸ್‌ ಬಳಿಯಿರುವ ಒನ್‌ ಕೇಂದ್ರಗಳಿಗೆ ಹೋಗಾಬೇಕಾಗಿದೆ.

ವಿಜಯನಗರ, ಸಂತೋಷ ನಗರ, ಆದರ್ಶ ನಗರ, ಅಶೋಕ ನಗರ, ವಿಶ್ವೇಶ್ವರ ನಗರ, ಗೋಪನಕೊಪ್ಪ, ಬೆಂಗೇರಿ, ಮಯೂರಿ ಎಸ್ಟೇಟ್‌, ದೇವಾಂಗ ಪೇಟೆ ಸೇರಿದಂತೆ ಸುತ್ತಮುತ್ತಲಿನ ಜನರು ನೀರಿನಕರ ಪಾವತಿ ಮಾಡಲು ಬೆಂಗೇರಿ ಖಾದಿ ಗ್ರಾಮೋದ್ಯೋಗ ಅವರಣದಲ್ಲಿರುವ ಕೇಂದ್ರ, ವಿದ್ಯುತ್‌ ಬಿಲ್‌ ಪಾವತಿಗೆ ಅಶೋಕ ನಗರ, ದೂರವಾಣಿ ಬಿಲ್‌ ಪಾವತಿಗೆ ಬಿಎಸ್‌ ಎನ್‌ಲ್‌ ಕಚೇರಿ ಸೇರಿದಂತೆ ಪ್ರತಿಯೊಂದು ಬಿಲ್‌ ಪಾವತಿಗೆ ಅಲೆದಾಡುವಂತಾಗಿದೆ. ಏಕಾಏಕಿ ಕೇಂದ್ರ ಸ್ಥಗಿತಗೊಳಿಸಿರುವುದರಿಂದ ಹಿರಿಯ ನಾಗರಿಕರು ಶಾಪ ಹಾಕುತ್ತಿದ್ದಾರೆ. ಸ್ಥಗಿತಗೊಂಡು 15 ದಿನವಾದರೂ ನಿತ್ಯವೂ ಹತ್ತಾರು ಜನರು ಬಾಗಿಲು ಹಾಕಿರುವ ಕೇಂದ್ರ ನೋಡಿಕೊಂಡು ವಾಪಸ್‌ ಹೋಗುತ್ತಿದ್ದಾರೆ.

15 ಕಳೆದರೂ ವರದಿ ನೀಡಿಲ್ಲ: 9 ವರ್ಷಗಳ ಹಿಂದೆ ಕೇಂದ್ರ ಆರಂಭಿಸುವ ಸಂದರ್ಭದಲ್ಲಿ ಈ ಭಾಗದಲ್ಲಿ ಸರಕಾರಿ ಕಟ್ಟಡ ದೊರೆಯದ ಕಾರಣ ತಾತ್ಕಾಲಿಕವಾಗಿ ಈ ಕಟ್ಟಡ ನೀಡಲಾಗಿತ್ತು. ಕಟ್ಟಡ ಹಳೆಯದು ಎನ್ನುವ ಕಾರಣದಿಂದ ಸುಸ್ಥಿತಿಯಲ್ಲಿರುವ ಸರಕಾರಿ ಕಟ್ಟಡ ಒದಗಿಸಲು ಪಾಲಿಕೆಯಿಂದ ಹಿಡಿದು ಜಿಲ್ಲಾಡಳಿತದವರೆಗೂ ಮನವಿ ಮಾಡಲಾಗಿತ್ತು. ಆದರೆ ಇದೀಗ ಕಟ್ಟಡ ಕಾಲಂ ಬಿರುಕು ಬಿಟ್ಟಿರುವುದರಿಂದ ಸಿಬ್ಬಂದಿ ಹಾಗೂ ಜನರು ಪ್ರಾಣದ ಪ್ರಶ್ನೆ ಎನ್ನುವ ಕಾರಣಕ್ಕೆ ಯೋಜನೆ ನಿರ್ವಹಣೆ ಮಾಡುತ್ತಿರುವ ಸಿಎಸ್‌ಎಂ ಕಂಪ್ಯೂಟರ್ನ ವರು ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸ್ಥಗಿತಗೊಳಿಸಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ಕಟ್ಟಡ ಪರೀಶಿಲಿಸಿ ಸ್ಥಿತಿಗತಿ ಕುರಿತು ವರದಿ ನೀಡಬೇಕಾಗಿದೆ. 15 ದಿನ ಕಳೆದರೂ ಪಾಲಿಕೆ ಅಧಿಕಾರಿಗಳು ಜನರು ಪಡುತ್ತಿರುವ ಸಂಕಷ್ಟದ ಗಂಭೀರತೆ ಅರ್ಥ ಮಾಡಿಕೊಂಡಿಲ್ಲ ಎಂದು ಕಾಣಿಸುತ್ತಿದೆ.

ಪರ್ಯಾಯ ಕಟ್ಟಡವೂ ಸಿಗುತ್ತಿಲ್ಲ: ಕಟ್ಟಡ ಚೆನ್ನಾಗಿದ್ದು, ಕೇಂದ್ರ ಪುನಃ ಆರಂಭವಾದರೆ ಈ ಭಾಗದ ಜನರ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ. ಒಂದು ವೇಳೆ ಕಟ್ಟಡ ಬಳಕೆಗೆ ಯೋಗ್ಯವಾಗಿರದಿದ್ದರೆ ಈ ಭಾಗದಲ್ಲಿ ಸರಕಾರಿ ಕಟ್ಟಡಗಳು ಇಲ್ಲದಿರುವುದು ಸಮಸ್ಯೆ ತಲೆದೂರಲಿದೆ. ಅಶೋಕ ನಗರದ ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ಕೇಂದ್ರ ಆರಂಭಿಸಲು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಉದ್ಘಾಟನೆ ಹಂತದಲ್ಲಿ ಕೈಬಿಡಲಾಯಿತು. ಇದೊಂದನ್ನು ಹೊರತು ಪಡಿಸಿದರೆ ಈ ಭಾಗದಲ್ಲಿ ಸರಕಾರಿ ಕಟ್ಟಡ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಅಶೋಕ ನಗರದಲ್ಲಿರುವ ಸಾಹಿತ್ಯ ಭವನದಲ್ಲಿ ಈಗಾಗಲೇ ಸಿದ್ಧಗೊಳಿಸಿರುವ ಕೇಂದ್ರಕ್ಕೆ ಅವಕಾಶ ನೀಡಬೇಕು ಎನ್ನುವುದು ಜನರ ಅಭಿಪ್ರಾಯವಾಗಿದ್ದು, ಇದಕ್ಕೆ ಸಾಕಷ್ಟು ವಿರೋಧ ಇರುವುದರಿಂದ ಈ ಕೇಂದ್ರವನ್ನು ದೂರದ ಭಾಗಕ್ಕೆ ಸ್ಥಳಾಂತರ ಮಾಡಿದರೆ ಹೇಗೆ ಎನ್ನುವ ಆತಂಕ ಇಲ್ಲಿನ ಜನರಲ್ಲಿದೆ.

Advertisement

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next