Advertisement
ಸ್ಮಶಾನ ಎಂದರೆ ಎಲ್ಲರೂ ಒಂದು ಮಾರು ದೂರ ನಿಲ್ಲುತ್ತಾರೆ. ಅಲ್ಲಿಗೆ ಹೋದರೆ ಏನಾಗುತ್ತದೋ ಅನ್ನೋ ಭಾವ. ಸಾವು ಎದುರಾದಾಗ ಮಾತ್ರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಅಲ್ಲಿಗೆ ಹೋಗಿ ಬರುತ್ತಾರೆ. ಯಾರಿಗೂ ಕೂಡ ಸ್ಮಶಾನ ಅಂದರೆ, ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲದ ಮನಃಸ್ಥಿತಿ. ಎಲ್ಲರೂ ಹೀಗೆ ಇದ್ದು ಬಿಟ್ಟರೆ, ಸ್ಮಶಾನದ ಸ್ವತ್ಛತೆ ಕಾಪಾಡುವುದಾದರೂ ಹೇಗೆ?
ಯಾವುದೇ ಸಮುದಾಯದವರೇ ಆದರೂ ಅವರ ಅಂತ್ಯ ಸಂಸ್ಕಾರಕ್ಕೆ ಹೋಗುವುದು ಅಡಿವೆಪ್ಪ ಅವರಿಗೆ ರೂಢಿ. ಮೂರು ವರ್ಷಗಳ ಹಿಂದೆ ಕ್ರಿಶ್ಚಿಯನ್ ಸ್ನೇಹಿತರೊಬ್ಬರ ಅಂತ್ಯಸಂಸ್ಕಾರಕ್ಕೆ ಹೋಗಿದ್ದರು. ಅಲ್ಲಿ ಶವವನ್ನು ಹೂಳಲು ಒಂದಿಷ್ಟು ಜಾಗವಿರಲಿಲ್ಲ. ಎಲ್ಲಾ ಕಡೆ ಕಲ್ಲು-ಮುಳ್ಳು-ಕಸ ಬೆಳೆದಿತ್ತು. ಶವ ಹೂಳಲು ಜಾಗಕ್ಕಾಗಿ ಪರದಾಡುವುದನ್ನು ನೋಡಿ ಅಡಿವೆಪ್ಪನವರ ಮನಸ್ಸು ಹಿಂಡಿದಂತಾಯಿತು. ಅಂತಿಮವಾಗಿ ಒಂದು ಮೂಲೆಯಲ್ಲಿ ಶವವನ್ನು ಹೂತು ಸಮಾಧಿ ಮಾಡಿದರೂ, ಅವರ ಒದ್ದಾಟ ಇವರ ಮನಸ್ಸಲ್ಲಿ ನೆಲೆಯಾಯಿತು. ಈ ಘಟನೆ ಅಡಿವೆಪ್ಪರನ್ನು ಇನ್ನಿಲ್ಲದಂತೆ ಕಾಡಿತು. ಮನೆಗೆ ಬಂದವರೇ, ಸಮಾನ ಮನಸ್ಕರರೊಂದಿಗೆ ಸ್ಮಶಾನದ ವಿಚಾರ ಕುರಿತು ಚರ್ಚಿಸಿದರು. ಮರುದಿನ ಹತ್ತರಿಂದ-ಹದಿನೈದು ಜನರನ್ನು ಕಟ್ಟಿಕೊಂಡು ಆ ಕ್ರಿಶ್ಚಿಯನ್ ಸ್ಮಶಾನವನ್ನು ಸ್ವತ್ಛಗೊಳಿಸಿದರು. ಆ ಜಾಗದಲ್ಲಿ ತುಂಬು ಹುಲುಸಾಗಿ ಬೆಳೆದಿದ್ದ ಬಳ್ಳಾರಿ ಜಾಲಿ, ನಾಯಿಗಿಡ, ಪಾಥೆìನಿಯಂ ಗಿಡಗಳನ್ನು ಕಿತ್ತು ಹಾಕಿ ಸ್ವತ್ಛ ಮಾಡಿದರು. ಈ ಕೆಲಸದ ನಂತರ ಇವರ ಮನಸ್ಸಿಗೆ ಒಂದಿಷ್ಟು ಸಮಾಧಾನವಾಯಿತು. ಈ ಕೆಲಸದಲ್ಲಿ ಭಾಗಿಯಾದ ಸಮಾನ ಮನಸ್ಕರಿಗೆ, ಒಂದಿಷ್ಟು ಹಣವನ್ನು ತಮ್ಮ ಜೇಬಿನಿಂದ ಎತ್ತಿಟ್ಟರು. ಆನಂತರ ಶುರುವಾದದ್ದೇ ಕವಿರತ್ನ ಕಾಳಿದಾಸ ಸಂಘ. ಅದರಲ್ಲಿ ಗ್ರಾಮದ ನಾಗರಾಜ ಆನ್ವೇರಿ,ಮಾಲತೇಶ ಕುರಿಯವರ,ಮಂಜಪ್ಪ ಎಲಿ,ತಿಪ್ಪಣ್ಣ ಕುರಿಯವರ, ಶೇಖರಪ್ಪ ಹರಮಗಟ್ಟಿ,ಶೇಖಪ್ಪ ಕಾಟೇನಹಳ್ಳಿ,ಚಂದ್ರು ಬೇವಿನಮರದ, ನೀಲಕಂಠಪ್ಪ ಆಡೂರು ಮುಂತಾದವರು ಇದ್ದಾರೆ. ಇವರೆಲ್ಲ ಸೇರಿಕೊಂಡು, ವರ್ಷಕ್ಕೆ ಒಂದರಂತೆ ಸ್ಮಶಾನಗಳನ್ನು ಹುಡುಕಿ ಶುಚಿ ಮಾಡುತ್ತಾ ಬರುತ್ತಿದ್ದಾರೆ.
Related Articles
Advertisement
ಮಲ್ಲಪ್ಪ . ಫ ಕರೇಣ್ಣನವರ