ಶಿರಸಿ: ಶತಮಾನಗಳಿಂದ ವಾಸವಿರುವ ಪೌರ ಕಾರ್ಮಿಕರು ನಗರ ಸರ್ವೇ ನಂಬರ್‌ನ ಕಂದಾಯ ಭೂಮಿಯಲ್ಲಿದ್ದರೂ ಅವರಿಗೆ ಈವರೆಗೆ ನ್ಯಾಯಯುತವಾಗಿ ಸಿಗಬೇಕಿದ್ದ ಪಟ್ಟಾ ಲಭಿಸಿಲ್ಲ. ಕಳೆದೆರಡು ವರ್ಷಗಳಿಂದ ಅಲೆದಾಟ ನಡೆಸಿದರೂ ಸಣ್ಣ ಸಣ್ಣ ಕಾರಣ ಇಟ್ಟು ಹಿಂಬರಹ ನೀಡುತ್ತಿದ್ದಾರೆ. ಜು.31 ರೊಳಗೆ ಪಟ್ಟಾ ಕುರಿತು ಅಧಿಕೃತ ತೀರ್ಮಾನ ಹೊರ ಬೀಳದೇ ಇದ್ದರೆ ಆ.1 ರಿಂದ ಅನಿರ್ದಿಷ್ಟ ಅವಧಿಗೆ ಪೌರ ಕಾರ್ಮಿಕ ಸೇವೆ ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದಿದ್ದಾರೆ.
ರಾಜೀವ ನಗರದ ಪೌರ ಕಾರ್ಮಿಕರ ವಸತಿ ಪ್ರದೇಶದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರಸಭೆ ಮಾಜಿ ಅಧ್ಯಕ್ಷ, ವಾರ್ಡ್ ಸದಸ್ಯ ಪ್ರದೀಪ ಶೆಟ್ಟಿ, ಇಡೀ ನಗರದ ಆರೋಗ್ಯ, ಸ್ವಚ್ಛತೆ ಕಾಪಾಡುವವರ ಸ್ಥಿತಿ ಹೀಗಾಗಿದೆ. ಅವರಿಗೆ ಸ್ವಂತ ಭೂಮಿಯಲ್ಲಿ ಸೂರೂ ಇಲ್ಲದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪೌರ ಕಾರ್ಮಿಕರ ಪಾದ ತೊಳೆಯುತ್ತಾರೆ. ಕೇಂದ್ರ, ರಾಜ್ಯ ಸರಕಾರದ ನೆರವಿನ ಯೋಜನೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರ ತನಕ ಬಾರದೇ ಕಲ್ಯಾಣ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗ್ಗೆ ಆರಕ್ಕೆ ನಗರ ಸ್ವಚ್ಛಗೊಳಿಸಲು ಮುಂದಾಗುವ ಪೌರ ಕಾರ್ಮಿಕರಿಗೆ ಪಟ್ಟಾ ಪಡೆಯಬೇಕು ಎಂಬ ಜ್ಞಾನ, ತಿಳಿವಳಿಕೆ ಕೂಡ ಇರಲಿಲ್ಲ. ಒಂದು ಎಕರೆ ಪ್ರದೇಶದಲ್ಲಿ ಸಿಟಿ ಸರ್ವೆ ನಂ.26/37ನಲ್ಲಿ 35 ಕುಟುಂಬಗಳು ವಾಸ್ತವ್ಯ ಮಾಡಿವೆ. ಕಳೆದೆರಡು ವರ್ಷದ ಹಿಂದೆ ತಹಶೀಲ್ದಾರ್‌ಗೆ ಮನವಿ ಮಾಡಿಕೊಂಡಿದ್ದೆವು. ಅವರು ಹೋಗಲು ರಸ್ತೆ ಇಲ್ಲ ಎಂದು ಅರ್ಜಿ ತಿರಸ್ಕಾರ ಮಾಡಿದ್ದರು. ಉಳಿದ ಅನೇಕರಿಗೆ ಅದೇ ಅವಧಿಯಲ್ಲಿ ಆಗಿತ್ತಾದರೂ ಪೌರ ಕಾರ್ಮಿಕರಿಗೆ ಈ ಭಾಗ್ಯ ಸಿಗಲಿಲ್ಲ. ಈಗಿನ ತಹಶೀಲ್ದಾರ್‌ಗೆ ಮನವಿ ಮಾಡಿದಾಗ ಸಹಾಯಕ ಆಯುಕ್ತರಿಗೆ ಮೇಲ್ಮನವಿ ಹಾಕಲು ಸೂಚಿಸಿದ್ದರು. ಅಂದಿನ ಸಹಾಯಕ ಆಯುಕ್ತ ರಾಜು ಮೊಗವೀರರು ಮೂರು ವಿಚಾರಣೆ ನಡೆಸಿ ಆದೇಶ ಬರೆಯುವ ಮೊದಲು ವರ್ಗಾವಣೆ ಆಗಿ ಹೋದರು ಎಂದರು.
ಈಗಿನ ಎಸಿ ಈಶ್ವರ ಉಳ್ಳಾಗಡ್ಡಿ ಅವರು ರಸ್ತೆ ಇದೆ ಎಂಬ ದಾಖಲೆ ಕೊಡಿ ಎಂದು ಕೇಳಿದ್ದರು. ತಲುಪಿಸಿದ ಬಳಿಕ ನಗರಸಭೆಗೆ ಈ ರಸ್ತೆ ಹಸ್ತಾಂತರ ಆದ ದಾಖಲೆ ಕೇಳಿದ್ದಾರೆ. ನಿತ್ಯವೂ ನಗರ ಸ್ವಚ್ಛತೆಯೇ ಧ್ಯೇಯವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ನಿಜವಾಗಿ ಪಟ್ಟಾ ಸಿಗಬೇಕು. ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದರೆ ಮೇಲಿನ ಹಂತದ ತನಕ ದೂರು ಒಯ್ಯಲಾಗುತ್ತದೆ. ಇಂಥ ಬಡವರಿಗೂ ನ್ಯಾಯ ಕೊಡಲಾಗದೇ ಇದ್ದರೆ ಹೇಗೆ ಎಂದೂ ಪ್ರದೀಪ ಶೆಟ್ಟಿ ಕೇಳಿದ್ದಾರೆ. ವೇದಿಕೆಯಲ್ಲಿ ಪೌರ ಕಾರ್ಮಿಕರಿಗೆ ನ್ಯಾಯ ಕೊಡಿಸುವ ಮಾತುಗಳನ್ನು ಆಡುತ್ತಾರೆ. ಆದರೆ ವಾಸ್ತವ ಬೇರೆ. ಬಡ ಪೌರ ಕಾರ್ಮಿಕರಿಗೆ ಪಟ್ಟ ಪ್ರಕ್ರಿಯೆ ಆರಂಭವಾಗದೇ ಇದ್ದರೆ ನಗರದಲ್ಲಿ ಇವರಿಂದ ಸ್ವಚ್ಛತಾ ಕಾರ್ಯ ನಿಲುತ್ತದೆ. ಇದಕ್ಕೆ ಅಧಿಕಾರಿಗಳೇ ಹೊಣೆ ಆಗುತ್ತಾರೆ ಎಂದೂ ಹೇಳಿದರು. ಸುಭಾಸ ಮಂಡೂರು ಇತರರು ಇದ್ದರು.