Advertisement
ನನ್ನ ದಯನೀಯವಾದ ದನಿಯನ್ನು ಕೇಳಿ ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದ ಮೊಬೈಲ್ ಫೋನ್ ಸರ್ವಿಸ್ ಸೆಂಟರಿನ ವ್ಯಕ್ತಿ ತಲೆ ಎತ್ತಿ, ‘ಏನಿವನದು ಕಿರಿಕಿರಿ?’ ಎಂಬಂತೆ ನನ್ನೆಡೆ ನೋಡಿದ. ನಾನು ಫೋನ್ ಅವನ ಕೈಗಿತ್ತೆ.
Related Articles
Advertisement
ಅನ್ನ, ನೀರು ಬಿಟ್ಟು ಇರಬಹುದೇನೋ, ಆದರೆ ಈ ಮೊಬೈಲ್ ಬಿಟ್ಟು ಇರಲು ಸಾಧ್ಯವೇ? ಅನಿಯಮಿತ ಡೇಟಾ, ಉಚಿತ ಕರೆಗಳ ಪ್ಯಾಕ್ ಹಾಕಿಸಿ ಒಂದು ವಾರವೂ ಆಗಿರಲಿಲ್ಲ. ಮೊಬೈಲ್ ಇವನ ಬಳಿ ಕೊಟ್ಟರೆ ನನಗೆ ನಷ್ಟವಲ್ಲದೆ ಇನ್ನೇನು? ಕೆಲಸ ಮುಗಿಸಿ ರೂಮ್‌ವರೆಗಿನ ಬಸ್‌ಪ್ರಯಾಣದಲ್ಲಿ, ರಾತ್ರಿ ನಿದ್ದೆ ಬರುವ ತನಕ ಸಮಯ ಕೊಲ್ಲಲು ಮೊಬೈಲ್ ಇಲ್ಲದೆ ಸಾಧ್ಯವೇ ಇಲ್ಲ.
”ಸ್ವಲ್ಪ ನೋಡಿ ಸಾರ್, ಈಗಲೇ ಸರಿ ಮಾಡಿ ಕೊಟ್ರೆ ಒಳ್ಳೆಯದಿತ್ತು, ಸ್ವಲ್ಪ ಮುಖ್ಯವಾದ ಕರೆ ಮಾಡುವುದಿದೆ, ಹಾಗೇ ಸ್ವಲ್ಪ ಆಫೀಸ್ ವರ್ಕ್ ಕೂಡ ಇತ್ತು”.
ಅದಾಗಲೇ ಇನ್ನೆರಡು ಗಿರಾಕಿಗಳು ನನ್ನ ಪಕ್ಕ ಬಂದು ನಿಂತಾಗಿತ್ತು. ಅವರು ತಮ್ಮ ತಮ್ಮ ಸಮಸ್ಯೆ ಹೇಳಲು ಶುರುವಿಟ್ಟಿದ್ದರಿಂದ ನನ್ನ ಕಡೆಗಿನ ಅವನ ಕರುಣೆ ಈಗಾಗಲೇ ಮುಗಿದಿತ್ತು.
”ನೋಡಿ ಸಾರ್, ಇದನ್ನು ಸರಿ ಮಾಡುವ ಬದಲು ನಮ್ಮ ಸೇಲ್ಸ್ ಸೆಕ್ಷನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ನಡೀತಿದೆ, ಹೋಗಿ ಲೇಟೆಸ್ಟ್ ಮಾಡೆಲ್ ಯಾವ್ದಾದ್ರೂ ತಗೊಳ್ಳಿ. ಬೇಕಾದ್ರೆ ಇಎಂಐ ಕೂಡ ಕೊಡ್ತೀವಿ. ಅಲ್ಲ , ಇದೇ ಸರಿ ಮಾಡ್ಬೇಕು ಅಂದ್ರೆ ಇವತ್ತಾಗಲ್ಲ ಸಾರ್! ಸ್ಸಾರಿ!” ಅಂದು ಮುಖ ತಿರುಗಿಸಿ ಬಿಟ್ಟ ಪುಣ್ಯಾತ್ಮ.
ರೂಮ್‌ಬಾಡಿಗೆ, ಎಜುಕೇಶನಲ್ ಲೋನ್, ಊಟ-ತಿಂಡಿ ಇತರೆ ಖರ್ಚಿಗೆ ಬರುತ್ತಿರುವ ಸಂಬಳ ಸಾಲುತ್ತಿಲ್ಲ. ಇವ ಬೇರೆ ಹೊಸ ಫೋನ್ ಕಥೆ ಹೇಳ್ತಾ ಇದ್ದಾನೆ. ಕಡಿಮೆ ಎಂದರೂ ಒಂದೊಳ್ಳೆ ಫೋನ್ ಬೇಕೆಂದರೆ ಕನಿಷ್ಠ ಹತ್ತು ಸಾವಿರವಾದರೂ ಬೇಡವೇ? ಇವತ್ತೂಂದು ದಿನ ಹೇಗಾದರೂ ಅಡ್ಜಸ್ಟ್ ಮಾಡಿದರಾಯಿತು ಅಂದುಕೊಳ್ಳುತ್ತ, ”ಸರಿ, ನಾಳೆ ಬರ್ತೀನಿ” ಅಂತ ಅಲ್ಲಿಂದ ಬಸ್‌ಸ್ಟಾಪ್ ಕಡೆಗೆ ನಡೆದೆ.
ಬಸ್‌ಸ್ಟಾಪ್ ಸುತ್ತಲೂ ಬೇಕರಿಗಳು, ಜೋಳ, ನೆಲಕಡಲೆ ಬೇಯಿಸಿ ಮಾರುವವರ ಗಾಡಿಗಳಿಂದ ಬರುತ್ತಿರುವ ಸುವಾಸನೆ ನನ್ನ ಮೂಗನ್ನು ಪ್ರವೇಶಿಸಿ ಅದೆಲ್ಲದರ ರುಚಿಯ ನ್ನೊಮ್ಮೆ ನೋಡಲು ಮಿದುಳಿಗೆ ಸಿಗ್ನಲ್ ಕಳುಹಿಸಿದರೂ, ಹೊಸ ಫೋನ್ ಕೊಳ್ಳಬೇಕಾಗುವ ಸರ್ವಿಸ್ ಸೆಂಟರಿನವನ ಎಚ್ಚರಿಕೆ ನೆನಪಾಗಿ ನನ್ನ ಕಾಲನ್ನು ವೇಗವಾಗಿ ಚಲಾಯಿಸಿ ಮುಂದೆ ನಡೆದೆ. ಇದಕ್ಕೊಂದು ತೀರ್ಮಾನವಾಗುವ ತನಕ ಅನವಶ್ಯಕ ಖರ್ಚು ನಿಷಿದ್ಧ.
ಬಸ್‌ಸ್ಟಾಪಿನಲ್ಲಿ ಬೆರಳೆಣಿಕೆಯಷ್ಟೇ ಮಂದಿಯನ್ನು ನೋಡಿ, ಯಬ್ಟಾ , ಇವತ್ತೂಂದು ದಿನವಾದರೂ ಆರಾಮವಾಗಿ ಹೋಗಬಹುದೆಂಬ ಆಸೆ ಮೂಡಿತ್ತು. ಕಿಕ್ಕಿರಿದ ಬಸ್ಸಿನಲ್ಲಿ ಒಂದೂವರೆ ಗಂಟೆ ಪ್ರಯಾಣ ಹರಸಾಹಸವೇ ಸರಿ. ಸಮಯ ಉರುಳುತ್ತಿದ್ದರೂ ಬಸ್ಸಿನ ಪತ್ತೆ ಇಲ್ಲ. ಜನರು ಬಂದು ಸೇರತೊಡಗಿದರು. ಯಾವತ್ತಿನ ಒದ್ದಾಟ ತಪ್ಪಿದ್ದಲ್ಲ. ಯಾಕಪ್ಪ , ಈ ಬಸ್ ಇನ್ನು ಬರಲಿಲ್ಲ ಎಂದು ಟೈಮ್ ನೋಡಲು ಪಕ್ಕನೆ ಪ್ಯಾಂಟಿನ ಎಡ ಕಿಸೆಗೆ ಅಯಾಚಿತವಾಗಿ ನುಗ್ಗಿದ ಕೈ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸು ಬಂತು. ಮೊಬೈಲ್ ಕೊಂಡ ನಂತರ ವಾಚ್ ಧರಿಸುವುದೇ ಬಿಟ್ಟಿದ್ದೆ. ಅದೊಂದು ಯಾಕೆ ಕೈಗೆ ಸುಮ್ಮನೆ ಭಾರ ಅಂತನಿಸಿತ್ತು.
ಅಂತೂ ಇಂತೂ ತುಂಬು ಗರ್ಭಿಣಿಯಂತೆ ಜನರನ್ನು ತುಂಬಿಸಿಕೊಂಡು ನಮ್ಮ ಬಸ್ಸಿನ ಆಗಮನವಾಯಿತು. ವಾಡಿಕೆಯಂತೆ ಹಲವಾರು ಜನರು ಇಳಿದರೂ ಅದರ ದುಪ್ಪಟ್ಟು ಮಂದಿ ಏರಿದರು. ಹೇಗೋ ಬಸ್ಸಿನ ಒಳ ಸೇರಿಕೊಂಡೆ. ಸ್ವಲ್ಪದರಲ್ಲೇ ಹಿಂದಿನಿಂದ ಗಲಾಟೆಯ ಶಬ್ದ ಕೇಳಲು ಶುರುವಾಯಿತು. ಅದೆಲ್ಲ ಸಂಜೆಯ ನಂತರದ ಬಸ್ಸುಗಳಲ್ಲಿ ಮಾಮೂಲಿ. ಎಣ್ಣೆಯ ಏಟಿಗೊಳಗಾಗಿ ಕೆಲವರು ಜಗಳ ಕಾಯುವುದು ನಿತ್ಯದ ಗೋಳು. ಇದನ್ನೆಲ್ಲ ಕೇಳಿಯೂ ಕೇಳದಂತೆ ಮಾಡಲು ಹಾಡು ಕೇಳ್ಳೋಣವೆಂದರೆ ನನ್ನ ಬಳಿ ಇಯರ್ ಫೋನ್ ಮಾತ್ರ ಇದೆ, ಮೊಬೈಲೇ ಇಲ್ಲ. ಈ ಜನಜಂಗುಳಿಯಿಂದ ಬರುತ್ತಿರುವ ಎಣ್ಣೆಯ ಘಮಟು ವಾಸನೆ, ಬೊಬ್ಬೆ ಗಲಾಟೆಗಳು, ಇವೆಲ್ಲದರ ನಡುವೆ ಪಾದಗಳನ್ನು ಯಾವುದೇ ಕರುಣೆ ಇಲ್ಲದೆ ಮೆಟ್ಟಿ ಅತ್ತಿತ್ತ ಓಡಾಡುತ್ತಿರುವ ಕಂಡಕ್ಟರ್ ಮಹಾಶಯನ ಉಪದ್ರವ, ಇವೆಲ್ಲದರಿಂದಲೂ ನನ್ನನ್ನು ಸಂರಕ್ಷಿಸಿ ಹಾಡಿನ ಮೂಲಕ ಒಂದು ಸಮಾಧಿ ಸ್ಥಿತಿಗೆ ಕೊಂಡೊಯ್ಯುತ್ತಿದ್ದ ನನ್ನ ಮೊಬೈಲ್ ಸಂಗಾತಿಯ ಅನುಪಸ್ಥಿತಿ ಬಹುವಾಗಿ ತೀವ್ರವಾಗಿ ಕಾಡುತ್ತ ಇದೆ.
ಒಂದೂವರೆ ಗಂಟೆಗಳ ಹೋರಾಟದ ನಂತರ ನನ್ನ ಸ್ಟಾಪಿನಲ್ಲಿ ಇಳಿದು ರೂಮ್ ಸೇರಿದಾಗ ಹೈರಾಣಾಗಿಬಿಡುತ್ತೇನೆ. ನಂತರ ಒಂದು ಸಣ್ಣ ನಿದ್ದೆ. ಆದರೆ ಇಂದು ಸಣ್ಣ ನಿದ್ದೆ ಸ್ವಲ್ಪ ದೀರ್ಘವಾಗಿ ಬಿಟ್ಟಿತ್ತು. ಸಂಜೆಯ ನಿದ್ದೆ ಮೂಡ್ ಔಟ್ ಮಾಡಿಬಿಡುತ್ತದೆ. ರಾತ್ರಿ ಅಡುಗೆ ಮಾಡಲು ತೀರಾ ಮನಸ್ಸಿಲ್ಲ. ಊಟ ಆನ್‌ಲೈನ್‌ನಲ್ಲಿಯೇ ಬುಕ್ ಮಾಡೋಣ ಅಂತ ಟೇಬಲ್ನಲ್ಲಿ ಮೊಬೈಲ್ ಹುಡುಕಲು ಹೋಗಿ ನಾಲಿಗೆ ಕಚ್ಚಿಕೊಂಡೆ. ಹೊರಗೆ ಪುನಃ ಹೋಗಲು ಮನಸ್ಸಾಗದೆ, ಮೊಬೈಲ್ ಇರುತ್ತಿದ್ದರೆ ಇಷ್ಟು ಹೊತ್ತಿನಲ್ಲಿ ಬಿಸಿ ಬಿಸಿ ಬಿರಿಯಾನಿ ತಿನ್ನಬೇಕಿದ್ದ ನಾನು ಸರ್ವಿಸ್ ಸೆಂಟರಿನವನಿಗೆ ಮನದಲ್ಲೇ ಹಿಡಿಶಾಪ ಹಾಕುತ್ತ ಬೆಳಗ್ಗಿನ ಉಪ್ಪಿಟ್ಟು ಬಿಸಿ ಮಾಡಿ ತಿಂದೆ. ಇಷ್ಟನ್ನೆಲ್ಲ ಹೇಗೋ ಸಹಿಸಬಹುದು ಆದರೆ, ಇನ್ನು? ನಿದ್ದೆಬರುವ ತನಕ ಸಮಯ ಹೇಗೆ ಕಳೆಯುವುದೆಂದೇ ಗೊತ್ತಾಗುತ್ತಿಲ್ಲ. ಎಲ್ಲ ಟಿವಿ ಚಾನೆಲ್ಗಳು ಮೊಬೈಲಿನಲ್ಲೇ ಲಭ್ಯವಿರುವುದರಿಂದ ಕೇಬಲ್ ತೆಗೆದು ಹಾಕಿದ್ದು ಮೂರ್ಖತನವಾಯಿತು. ಬೆಡ್‌ನಲ್ಲಿ ಮಲಗಿ ಛಾವಣಿ ದಿಟ್ಟಿಸಿದರೆ ತನ್ನೆಲ್ಲ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ವೀಡಿಯೊ ಪ್ಲೇ ಆದಂತೆ ಆಗ್ತಾ ಇದೆ. ಆದರೆ ಇಲ್ಲಿ ಸ್ಟಾಪ್, ಪೌಸ್, ಫಾರ್ವರ್ಡ್ ಬಟನುಗಳಿಲ್ಲ. ಸಂಜೆ ನಿದ್ದೆ ಹೋದದ್ದೇ ತಪ್ಪಾಯಿತು. ಬೇಗ ನಿದ್ದೆ ಬರುವುದು ದೂರದ ಮಾತು. ಆಗಾಗ ಸಮಯ ನೋಡಲು ಅಲಾರಮ್ ಕಡೆ ನೋಡಿ ಬೇಸ್ತು ಬೀಳುವುದು ನಡೆದೇ ಇತ್ತು. ಯಾಕೆಂದರೆ, ಅದರ ಬ್ಯಾಟರಿ ಬದಲಿಸದೆ ತಿಂಗಳುಗಳೇ ಕಳೆದಿದೆ. ಮೊಬೈಲಿನಲ್ಲೇ ಅಲಾರಂ ಇಟ್ಟು ಅಭ್ಯಾಸವಾಗಿತ್ತು ನೋಡಿ.
ರಾತ್ರಿ ಎಷ್ಟು ಗಂಟೆಗೆ ನಿದ್ದೆ ಬಂತೋ ಗೊತ್ತಿಲ್ಲ. ಆದರೆ ಬೆಳಗ್ಗೆ ಏಳುವಾಗ ಲೇಟ್ ಆದದ್ದಂತೂ ಸತ್ಯ. ಅಲಾರ್ಮ್ ಇಲ್ಲದೆ ಬೇಗ ಎದ್ದ ಚರಿತ್ರೆಯೇ ಇಲ್ಲ ನೋಡಿ ನಮಗೆ. ಎದ್ದೆನೋ ಬಿದ್ದೆನೋ ಅಂತ ಗಡಿಬಿಡಿಯಲ್ಲೇ ಎಲ್ಲ ಕೆಲಸ ಮುಗಿಸಿ ಬಸ್‌ಸ್ಟಾಪಿನ ಕಡೆಗೆ ಓಡಿದೆ. ಆಫೀಸ್ ಸ್ಟಾಪಿನಲ್ಲಿಳಿದು ಮೊದಲು ಹೋದದ್ದು ಸರ್ವಿಸ್ ಸೆಂಟರಿನ ಕಡೆಗೆ. ಅದು ಇನ್ನೂ ತೆರೆದೇ ಇಲ್ಲ. ನಿರಾಸೆಯಿಂದ ಮರಳಿದೆ. ಕೆಲಸದ ಒತ್ತಡದಿಂದ ಹೇಗೋ ಸಂಜೆಯವರೆಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಆಫೀಸ್ ಟೈಮ್ ಮುಗಿಯಲು ಕಾಯುತ್ತಿದ್ದವನು ಮತ್ತೂಮ್ಮೆ ಮೊಬೈಲ್ ಸರ್ವಿಸ್ ಸೆಂಟರ್ ಕಡೆಗೆ ಹೋದೆ.
”ನಮಸ್ಕಾರ, ಅದೂ… ನಿನ್ನೆ ಕೊಟ್ಟಿದ್ದೆ ಆ ಮೊಬೈಲ್”
ಒಂದು ಕ್ಷಣ ನನ್ನನ್ನು ನೋಡಿ ಏನೋ ಜ್ಞಾಪಕ ಬಂದವನಂತೆ ಅತ್ತಿತ್ತ ಹುಡುಕುವ ನಾಟಕ ಮಾಡಿ, ”ನೀವು ಸ್ವಲ್ಪ ದಿನ ಬಿಟ್ಟು ಬರ್ತೀರಾ? ನಿಮ್ಮ ಸೆಟ್ ಕಂಪೆನಿಗೆ ಕಳುಹಿಸಿದ್ದೇವೆ. ಅದರ ಪಾರ್ಟ್ಸ್ ಎಲ್ಲ ಈಗ ಬರಲ್ಲ ನೋಡಿ. ಒಂದು ಎರಡು ವಾರ ಕಾಯಬೇಕಾಗಬಹುದು” ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟ.
ಎರಡು ವಾರ ಎಂದಷ್ಟೇ ಕಿವಿಗೆ ಬಿತ್ತು, ಬೇರೇನೂ ಕೇಳಿಸಲೇ ಇಲ್ಲ. ಒಂದೋ ಹೊಸ ಮೊಬೈಲ್, ಇಲ್ಲಾಂದ್ರೆ ಕಾಯಲೇ ಬೇಕು. ಧರ್ಮ ಸಂಕಟಕ್ಕೆ ಸಿಲುಕಿದೆ. ಮನಸ್ಸಿನ ಒಳಗೆ ಹಲವು ಲೆಕ್ಕಾಚಾರಗಳಾಗಿ ಕೊನೆಗೆ ಬಜೆಟಿಗೆ ಮೇಲುಗೈಯಾಗಿ ಇನ್ನೆರಡು ವಾರ ಹೀಗೇ ದೂಡಲು ತೀರ್ಮಾನಿಸಿದೆ.
ಇವತ್ತು ಬಸ್ ಯಾವತ್ತಿನಷ್ಟು ರಶ್ ಇರಲಿಲ್ಲ. ಸೀಟ್ ಬೇರೆ ಸಿಕ್ಕಿತ್ತು. ಆದರೂ ಒಂದೂವರೆ ಗಂಟೆ ಸುಮ್ಮನೇ ಕುಳಿತು ಕೊಳ್ಳಲು ಬೇಜಾರು. ಬೇರೆ ದಾರಿ ಇಲ್ಲದೆ ಪಕ್ಕ ಕುಳಿತಿದ್ದವನ ಜೊತೆ ಮಾತನಾಡಲು ಪ್ರಯತ್ನಿಸಿದೆ. ಅವನು ಯಾವುದೋ ದಪ್ಪದ ಇಂಗ್ಲಿಷ್ ಕಾದಂಬರಿಯ ಒಳಗೆ ಹೊಕ್ಕಿಯಾಗಿತ್ತು. ನನಗೂ ಹಿಂದೆ ಓದುವ ಹುಚ್ಚಿತ್ತು. ಇಬ್ಬರ ಅಭಿರುಚಿ ಒಂದೇ ಇದ್ದ ಮೇಲೆ ಮಾತು ಸರಾಗವಾಯಿತು. ನನ್ನ ಸ್ಟಾಪ್ ಬಂದಿದ್ದೇ ಗೊತ್ತಾಗಲಿಲ್ಲ.
ರೂಮಿಗೆ ತಲುಪಿ ಉಸ್ಸಪ್ಪಾ ಅಂತ ಕುಳಿತು ನೋಡಿದರೆ ಈಗಷ್ಟೇ ಯುದ್ಧ ಮುಗಿದಂತಿತ್ತು ರೂಮಿನ ಅವಸ್ಥೆ. ಹೇಗೂ ಬೇಕಾದಷ್ಟು ಸಮಯವಿದೆ. ಕ್ಲೀನಿಂಗ್ ಅಭಿಯಾನ ಶುರುಮಾಡಿದೆ. ನಂತರ ಅಡುಗೆ, ಊಟ. ಸಮಯ ಸುಲಭವಾಗಿ ಮುಂದೆ ಓಡಿತ್ತು. ಇನ್ನು ನಿದ್ದೆ ಬರುವವರೆಗೆ ಏನು ಎಂಬುದೇ ಪ್ರಶ್ನೆ. ಆಗ ನೆನಪಿಗೆ ಬಂದದ್ದು ಅಂದೆಂದೋ ಲೈಬ್ರರಿಯಿಂದ ತಂದ ಪುಸ್ತಕಗಳು. ಶೆಲ್ಫ್ನಲ್ಲಿ ಹುಡುಕಾಟ ಶುರು. ಉತVನನ ಮಾಡಿ ಹೊರತೆಗೆದ ಪಳೆಯುಳಿಕೆಗಳಂತೆ ಒಂದೊಂದೇ ಹೊರ ತೆಗೆದೆ. ಧೂಳು ಒರೆಸಿ ಎಲ್ಲಾ ಟೇಬಲ್ ಮೇಲೆ ಇಟ್ಟು ಓದಲು ಶುರು ಮಾಡಿದೆ. ಒಂದನ್ನು ತೆಗೆದು ಬ್ಯಾಗಿನಲ್ಲಿ ಇಟ್ಟುಕೊಂಡೆ. ಬಸ್ಸಿನಲ್ಲಿ ಅಪ್ಪಿತಪ್ಪಿ ಸೀಟು ಸಿಕ್ಕರೆ ಓದಬಹುದಲ್ಲವೆ?
ಸ್ವಲ್ಪ ಓದಿದ ನಂತರ ಸೊಂಪಾಗಿ ನಿದ್ದೆ ಹತ್ತಿದ್ದು ಮಾತ್ರವಲ್ಲದೆ ಬೆಳಗ್ಗೆ ಬೇಗ ಎಚ್ಚರವಾಯಿತು. ಅದು ಕೂಡ ಅಲಾರಂ ಸಹಾಯವಿಲ್ಲದೆ. ಯಾವಾಗಲೋ ಶುರು ಮಾಡಬೇಕೆಂದಿದ್ದ ಜಾಗಿಂಗ್ ಇವತ್ತು ಪ್ರಾರಂಭವಾಯಿತು. ತಿಂಗಳ ಫೀ ಕೊಡಲು ಮಾತ್ರ ಹೋಗುತ್ತಿದ್ದ ಜಿಮ್ಮಿಗೆ ಇವತ್ತಿನಿಂದ ಪುನಃ ಹೋಗಲು ಶುರು ಮಾಡಿದೆ.
ರಿಪೇರಿಗೆ ಕೊಟ್ಟ ನನ್ನ ಹಳೆ ಮೊಬೈಲ್ ಮರೆತೇಹೋಗಿತ್ತು. ಅದನ್ನು ಅಲ್ಲೇ ಮಾರಾಟ ಮಾಡಿ ಹಣ ತಗೊಂಡು ಬರಲು ಅಲ್ಲಿ ಹೋದ್ರೆ, ”ಬನ್ನಿ ಸಾರ್, ನಿಮ್ಮ ಮೊಬೈಲ್ ಕಂಪೆನಿ ವಾಪಸ್ ತಗೊಂಡು ಹೊಸಾ ಫೋನ್ ಕೊಡ್ತಿದಾರೆ ಕೇವಲ ಐದು ಸಾವಿರ ಕೊಟ್ರೆ ಸಾಕು. ಸಿಮ್‌ಕಾರ್ಡ್ ಜೊತೆ ಇನ್ನು ಒಂದು ವರ್ಷ ಅನ್ ಲಿಮಿಟೆಡ್ ಕಾಲ್ಸ್, ಇಂಟರ್‌ನೆಟ್ ಕೊಡ್ತಾರೆ. ಇಲ್ಲಿ ನೋಡಿ ಐದಿಂಚು ಡಿಸ್‌ಪ್ಲೇ, 32 ಜಿಬಿ ಮೆಮೊರಿ, 4000 ಎಮ್‌ಎಚ್ ಲಾಂಗ್ ಲೈಫು ಬ್ಯಾಟರಿ ಬೇರೆ ಇದೆ”.
ಇನ್ನೂ ಏನೇನೋ ಹೇಳ್ತಾ ಇದ್ದ.
ಏನು ಮಾಡೋಣ ಎಂಬ ದೊಡ್ಡದೊಂದು ಗೊಂದಲದಲ್ಲಿ ಬಿದ್ದವನಂತೆ ಸ್ತಬ್ಧನಾಗಿ ನಿಂತೆ.
ಹರಿಕಿರಣ್. ಎಚ್