ಮದ್ದೂರು: ತಾಲೂಕು ಕೇಂದ್ರದಲ್ಲಿ ಬಹು ನಿರೀಕ್ಷೆಯೊಂದಿಗೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಸಾಮರ್ಥ್ಯ ಸೌಧವು ಸದ್ಬಳಕೆಯಾಗದೆ ಸೇವೆಯಿಂದ ದೂರವೇ ಉಳಿದಿದೆ.
ಜಿಪಂ ಅನುದಾನದ 20 ಲಕ್ಷ ರೂ. ಗಳಿಗೂ ಅಧಿಕ ವೆಚ್ಚ ಬರಿಸಿ ಒಂದು ದಶಕಗಳ ಹಿಂದೆ ಹತ್ತು, ಹಲವು ನಿರೀಕ್ಷೆಗಳ ನಡುವೆ ತಲೆಎತ್ತಿದ ಸಾಮರ್ಥ್ಯಸೌಧ ಕಟ್ಟಡದಲ್ಲೀಗ ಯಾವುದೇ ಚಟುವಟಿಕೆಗಳು ಕಂಡು ಬರದೆ ಭೂತ ಬಂಗಲೆಯಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಮದ್ದೂರು ಸೇರಿದಂತೆ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ 27 ತಾಪಂ ಸದಸ್ಯರನ್ನು ಹೊಂದಿರುವ ಇಲ್ಲಿ ಸಾಮರ್ಥ್ಯ ಸೌಧದ ನಿಷ್ಕ್ರಿಯೆ ಕುರಿತಾಗಿ ಯಾವೊಬ್ಬ ಸದಸ್ಯರೂ ಇದುವರೆವಿಗೂ ಧನಿ ಎತ್ತದಿರುವುದು ಇಚ್ಚಾಶಕ್ತಿ ಕೊರತೆಯ ಉದಾಹರಣೆಯಾಗಿದೆ.
ಮೈಸೂರು, ಬೆಂಗಳೂರು ಹೆದ್ದಾರಿ ಬದಿಯ ತಾಲೂಕು ಕಚೇರಿ ಕೂಗಳತೆ ದೂರದಲ್ಲಿರುವ ಸೌಧ ಉದ್ಘಾಟನೆಗೊಂಡ ದಿನದಿಂದಲೂ ಈವರೆವಿಗೂ ಕಾರ್ಯ ಚಟುವಟಿಕೆಗಳ ಹೊರತಾಗಿದ್ದು ತಾಪಂ ಸಭೆ ವೇಳೆ ಆಗೊಮ್ಮೆ ಇಗೊಮ್ಮೆ ನಡೆಯುವ ಊಟೋಪಚಾರಕಷ್ಟೇ ಸೀಮಿತವಾಗಿರುವುದು ದುರಂತ
ಎಲ್ಲಾ ಸರಕಾರಿ ಕಟ್ಟಡಗಳಲ್ಲಿರುವಂತೆ ಈ ಕಟ್ಟಡಲ್ಲಿಯೂ ಚಿಕ್ಕದಾದ ಸಭಾಂಗಣ, ಪ್ರತ್ಯೇಕ ಮೂರು ಕೊಠಡಿಗಳು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ನೀರು ಮತ್ತು ಕಟ್ಟಡದ ಸುತ್ತಲೂ ಅಗತ್ಯ ಕಾಂಪೌಂಡ್ ನಿರ್ಮಿಸಿದ್ದು ಇದುವರೆವಿಗೂ ಯಾವುದೇ ಪ್ರಕ್ರಿಯೆಗಳು ತಾಪಂ ಆಡಳಿತದ ವತಿಯಿಂದ ನಡೆದೇ ಇಲ್ಲ. ಕಾರ್ಯಚಟುವಟಿಕೆಗಳಿಂದ ಹೊರತಾಗಿರುವ ಸೌಧದ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದ್ದು ಕಟ್ಟಡದ ಸುತ್ತೇಲ್ಲ ಗಿಡಗಂಟಿಗಳು ಬೆಳೆದಿದ್ದು, ತ್ಯಾಜ್ಯಗಳ ಶೇಖರಣೆಯಾಗುತ್ತಿದೆ. ಅಲ್ಲದೆ ಇಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ನಿರ್ಮಾಣವಾಗುತ್ತಿದೆ.
ಕೆಲವು ಸರಕಾರಿ ಕಚೇರಿಗಳು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಖಾಸಗಿ ಕಟ್ಟಡಗಳಲ್ಲಿ ಮಾಸಿಕ ಬಾಡಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅಂತಹ ಇಲಾಖೆಗಳಲ್ಲಿಯೂ ಸಾಮಾರ್ಥ್ಯ ಸೌಧಕ್ಕೆ ಸ್ಥಳಾಂತರಿಸಬಹುದಾದ ಅವಕಾಶವಿದ್ದಾಗ್ಯೂ ಕಂಡು ಕಾಣದಂತಿರುವ ಕ್ರಮ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಿಪಂ ಅಧಿಕಾರಿಗಳು, ಸ್ಥಳೀಯ ಜಿಪಂ ಸದಸ್ಯರು ಮದ್ದೂರು ತಾಪಂ ಸದಸ್ಯರು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯ ನಿರಂತರವಾಗಿ ಮುಂದುವರೆದಿದ್ದು ಸಾರ್ವಜನಿಕ ತೆರಿಗೆ ಹಣದಲ್ಲಿ ನಿರ್ಮಿಸಲ್ಪಟ್ಟ ಕಟ್ಟಡ ಮುಂದಿನ ದಿನಗಳಲ್ಲಾದರೂ ಸದುಪಯೋಗ ಆಗಬೇಕೆಂಬುದೇ ಸ್ಥಳೀಯರ ಅಭಿಪ್ರಾಯವಾಗಿದೆ.
● ಎಸ್.ಪುಟ್ಟಸ್ವಾಮಿ, ಮದ್ದೂರು