ಹುಬ್ಬಳ್ಳಿ: ವೈದ್ಯಕೀಯ ವೃತ್ತಿ ಅತ್ಯಂತ ಸೂಕ್ಷ್ಯ ಹಾಗೂ ಕಾಳಜಿ ಪೂರ್ವಕವಾಗಿದ್ದು, ಇನ್ನೊಬ್ಬರ ಜೀವನದೊಂದಿಗೆ ವೃತ್ತಿ ಮಾಡುವುದಾಗಿದೆ. ವೈದ್ಯರು ರೋಗಿಗಳಿಗೆ ಅತ್ಯುತ್ತಮ ಸೇವೆ ಒದಗಿಸಬೇಕಾಗುತ್ತದೆ ಎಂದು ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ| ಶ್ರೀನಿವಾಸ ಕೆ. ಬನ್ನಿಗೋಳ ಹೇಳಿದರು.
ವಿಶ್ವ ಶ್ರಮ ಚೇತನದ ಶರ್ಮಾ ದರ್ಶನ ಭವನದಲ್ಲಿ ಡಾ| ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳು ಸಂಘಟಿಸಿದ್ದ ವೈದ್ಯರ ದಿನ ಕಾರ್ಯಕ್ರಮದಲ್ಲಿ ‘ವೈದ್ಯ ಶಿರೋಮಣಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ತು ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ವೈದ್ಯರಿಗೆ ಸಹನೆ, ತಾಳ್ಮೆ, ಮಾನವೀಯತೆ, ತ್ಯಾಗ, ಸೇವಾ ಮನೋಭಾವ ಮುಖ್ಯ. ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಬದ್ಧತೆ, ಸಮರ್ಪಣಾ ಮನೋಭಾವ ಇರಬೇಕು ಎಂದರು.
ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಪರಿಗಣಿಸಿ ದಾವಣಗೆರೆಯ ಡಾ| ಬಿ.ಆರ್. ಗಂಗಾಧರ ವರ್ಮಾ ಅವರಿಗೆ ‘ವೈದ್ಯ ಶ್ರೀ’ ಪ್ರಶಸ್ತಿ, ಸಾಂಪ್ರದಾಯಿಕ ವೈದ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಸಾಮಾನ್ಯ ಸೇವೆ ಗುರುತಿಸಿ ವೈದ್ಯ ಬಿ. ರಾಮರಾಜು ಅವರಿಗೆ ‘ವೈದ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ| ಕೆ.ಎಸ್. ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಡಾ| ಅಶ್ವಿನಿ ಡಿಸೋಜಾ ಹಾಗೂ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮೊದಲಾದವರಿದ್ದರು. ಪ್ರೊ| ರವಿ ಶಿರೋಳ್ಕರ ನಿರೂಪಿಸಿದರು. ಡಾ| ಸೋಮಶೇಖರ ಹುದ್ದಾರ ವಂದಿಸಿದರು.