Advertisement

ಸೇವಾ ಮನೋಭಾವ ಎಲ್ಲರಲ್ಲೂ ಅಗತ್ಯ: ಡಾ|ವೀರೇಂದ್ರ ಹೆಗ್ಗಡೆ

09:12 AM Jun 23, 2020 | mahesh |

ಬೆಳ್ತಂಗಡಿ: ಸರಕಾರ ವಿಪತ್ತು ನಿರ್ವಹಣೆಗೆ ಎಂದೂ ಸನ್ನದ್ಧವಾಗಿದೆ. ಆದರೆ ಪ್ರಜೆಗಳಲ್ಲಿ ಸೇವಾ ಮನೋಭಾವ ಬೆಳೆಯಬೇಕಿರುವುದು ಮುಖ್ಯ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಯು ಸ್ವಯಂ ಸೇವಕರ ತಂಡವನ್ನು ರಚಿಸಿ ವಿಪತ್ತು ನಿರ್ವಹಣೆಯ ಹೊಣೆಗಾರಿಕೆ ವಹಿಸಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸರಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಹಭಾಗಿತ್ವದಲ್ಲಿ ಧರ್ಮಸ್ಥಳದಲ್ಲಿ ಸೋಮವಾರ ಆಯೋಜಿಸಿದ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ವೈಜ್ಞಾನಿಕವಾಗಿ ತೊಡಗಿಸಿಕೊಂಡು ಸ್ವಯಂ ಸ್ಫೂರ್ತಿಯಿಂದ ರಕ್ಷಣಾ ಕಾರ್ಯಕ್ಕೆ ಸದಾ ಬದ್ಧರಾಗಿರಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜತೆಗೆ ಇತರರ ರಕ್ಷಣೆಗೆ ಧಾವಿಸಬೇಕು. ಸ್ವಯಂ ಸೇವಕರಿಗೆ ರಕ್ಷಣಾ ಪರಿಕರಗಳ ಸಮರ್ಪಕ ಬಳಕೆ ವಿಚಾರದಲ್ಲಿ ಮಾಹಿತಿ ನೀಡಲಾಗುವುದು. ತರಬೇತಿ ಪಡೆದ ಬಳಿಕ ಸ್ವಯಂ ಸೇವಕರು ತಮ್ಮ ಮನೆಮಂದಿ ಹಾಗೂ ಸಮಾಜದ ಬಂಧುಗಳಿಗೆ ವಿಪತ್ತು ನಿರ್ವಹಣೆ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಮಾತನಾಡಿ, ಸೂಕ್ತ ತರಬೇತಿಯಿಂದ ಸ್ವಯಂ ಸೇವಕರು ಉತ್ತಮ ರೀತಿಯ ಸೇವೆ ನೀಡಲು ಅನುಕೂಲವಾಗಿದೆ. ಸರಕಾರದ ವಿವಿಧ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಕೊಡುಗೆ ಅಪಾರ. ಬೆಳ್ತಂಗಡಿಯಿಂದ ಆರಂಭಗೊಂಡ ಕ್ಷೇತ್ರದ ಸೇವೆ ರಾಜ್ಯಾದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು. ವಿಧಾನಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಮಾತನಾಡಿ, ತರಬೇತಿ ಪಡೆದ ಸ್ವಯಂ ಸೇವಕರು ಸೇವಾಮನೋಭಾವದೊಂದಿಗೆ ಜನರ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆಗೆ ಕಟಿಬದ್ಧರಾಗಿ ಎಂದರು.

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಟ್ರಸ್ಟಿ ಡಿ. ಸುರೇಂದ್ರ ಕುಮಾರ್‌, ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಗೋಪಾಲ್‌ಲಾಲ್‌ ಮೀನಾ, ಮಂಗಳೂರು ಘಟಕದ ಅಧಿಕಾರಿ ವಿಜಯ ಕುಮಾರ್‌ ಉಪಸ್ಥಿತರಿದ್ದರು. ಶ್ರೀ ಕ್ಷೇ.ಧ.ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಪ್ರಸ್ತಾವನೆಗೈದು, ಸ್ವಾಗತಿಸಿದರು. ನಿರ್ದೇಶಕ ಬೂದಪ್ಪ ಗೌಡ ವಂದಿಸಿದರು. ನೇತ್ರಾವತಿ ಸ್ನಾನಘಟ್ಟದಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.

55 ತಾಲೂಕುಗಳಲ್ಲಿ ತಂಡ
– ರಾಜ್ಯದಲ್ಲಿ 55 ಸೂಕ್ಷ್ಮ ತಾಲೂಕುಗಳಲ್ಲಿ ಸ್ವಯಂ ಸೇವಕರ ತಂಡ ರಚಿಸಿ ತರಬೇತಿ.
– ಪ್ರಥಮವಾಗಿ ಬೆಳ್ತಂಗಡಿ ತಾಲೂಕಿನ 200 ಸ್ವಯಂ ಸೇವಕರ ತಂಡದೊಂದಿಗೆ ಯೋಜನೆಗೆ ಚಾಲನೆ.
-ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಗೋಪಾಲ್‌ಲಾಲ್‌ ಮೀನಾ ಅವರಿಂದ ವಿಪತ್ತು ನಿರ್ವಹಣೆ ಹಾಗೂ ಪರಿಕರಗಳ ಬಳಕೆಯ ತರಬೇತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next