Advertisement

ಸರ್ವರ್‌ ಗತಿ ನಿಧಾನ: ಆಧಾರ್‌ ನೋಂದಣಿ, ತಿದ್ದುಪಡಿಗೆ ಸಮಸ್ಯೆ

05:23 PM Mar 20, 2018 | |

ಬಂಟ್ವಾಳ : ತಾಲೂಕು ಕೇಂದ್ರದಲ್ಲಿ ಎರಡು ಹಾಗೂ ವಿಟ್ಲದಲ್ಲಿ ಇರುವ ಒಂದು ಆಧಾರ್‌ ನೋಂದಣಿ ತಿದ್ದುಪಡಿ ಕೇಂದ್ರಗಳಲ್ಲಿ ಗಣಕ ಯಂತ್ರ, ನಿರ್ವಾಹಕರ ಸಂಖ್ಯೆ ಹೆಚ್ಚಿಸುವ ಮೂಲಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನರ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಎಲ್ಲ ಆವಶ್ಯಕತೆಗಳಿಗೆ ಒಂದೇ ಪರಿಹಾರ ಎಂದು ಭಾವಿಸಿರುವ ಆಧಾರ್‌ ಗುರುತು ಚೀಟಿ ಪಡೆಯುವ ಸಮಸ್ಯೆ ಬಿಗಡಾಯಿಸಿದ್ದು ಜನರು ನೆರಳು, ನೀರು, ಊಟವಿಲ್ಲದೆ ಇಲ್ಲಿನ ನೋಂದಣಿ ಕೇಂದ್ರದ ಎದುರು ಕಾಯುವಂತಾಗಿದೆ. ಈ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕಾಗಿದೆ.

Advertisement

ಬಿ.ಸಿ. ರೋಡ್‌ ಮಿನಿ ವಿಧಾನಸೌಧ ಮತ್ತು ಪಡಸಾಲೆಯಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿಗೆ ಸಂಬಂಧಿಸಿದ ಆಧಾರ್‌ ಕೇಂದ್ರವಿದೆ. ಕೇಂದ್ರಕ್ಕೆ ಒಂದು ಗಣಕ ಯಂತ್ರ, ಒಬ್ಬರು ನಿರ್ವಾಹಕಿ ಇದ್ದಾರೆ. ಹೀಗೆ ಇಡೀ ತಾಲೂಕಿಗೆ ಮೂವರು ನಿರ್ವಾಹಕರು, ಮೂವರು ಗುತ್ತಿಗೆ ಸಿಬಂದಿ ಇದ್ದಾರೆ.

ಸಮಸ್ಯೆ ಏನು?
ಗಣಕ ಯಂತ್ರ ಆಧುನಿಕ ವ್ಯವಸ್ಥೆಗೆ ಸಂಬಂಧಪಟ್ಟಿಲ್ಲ. ಅದರ ಸೇವೆ ಅತ್ಯಂತ ನಿಧಾನಗತಿಯಲ್ಲಿದೆ.  ಇಲ್ಲಿಗೆ ಸಂಪರ್ಕಿಸುವ ಸರ್ವರ್‌ ಒಂದಲ್ಲ ಒಂದು ಕಾರಣಕ್ಕೆ ಸ್ಲೋ ಆಗಿರುತ್ತದೆ.  ಇದರಿಂದಾಗಿ ಈ ಹಿಂದೆ ದಿನಕ್ಕೆ ಮೂವತ್ತು ಮಂದಿಗೆ ಸೇವೆ ನೀಡುತ್ತಿದ್ದ ಗಣಕ ಯಂತ್ರ ಮೂರು ದಿನಗಳಿಂದ ಸ್ಲೋ ಆಗಿದೆ. ಹೀಗಾಗಿ, ನಿತ್ಯ 30 ಮಂದಿಗೆ ಟೋಕನ್‌ ನೀಡುತ್ತಿದ್ದರೂ 25 ಜನರ ಆಧಾರ್‌ ನೋಂದಣಿ, ತಿದ್ದುಪಡಿ ಮಾತ್ರ ಸಾಧ್ಯವಾಗಿ, ಉಳಿದವರೆಲ್ಲ  ತಾಸುಗಟ್ಟಲೆ ಸರತಿಯಲ್ಲಿ ಕಾಯಬೇಕಾದ ಸ್ಥಿತಿ ಉಂಟಾಗಿದೆ.

ಮೂವತ್ತು ಜನರನ್ನು ಲೆಕ್ಕಕ್ಕೆ ಹಿಡಿದು ಟೋಕನ್‌ ನೀಡಲಾಗಿತ್ತು.  ಒಂದು ತಿಂಗಳಿಂದ ವಿವಿಧ ಕಾರಣಗಳಿಂದ ನೋಂದಣಿ, ತಿದ್ದುಪಡಿ ವಿಳಂಬವಾದವರು ಕೇಂದ್ರಕ್ಕೆ ಬರುತ್ತಿದ್ದು ಸರತಿ ಸಾಲಿನ ಸಮಸ್ಯೆ ಕಗ್ಗಂಟಾಗಿದೆ. ದಿನಾ ಬೆಳಗ್ಗಿನಿಂದಲೇ ಜನರು ತಾಲೂಕಿನ ವಿವಿಧ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸಿ ಸಾಲುಗಟ್ಟಿ ನಿಲ್ಲುತ್ತಾರೆ. ಒಂದೇ ಕಂಪ್ಯೂಟರ್‌ ವ್ಯವಸ್ಥೆ, ಒಬ್ಬರೇ ನಿರ್ವಾಹಕಿ ಆಧಾರ್‌ ನೋಂದಾಯಿಸಲು ಸಾಧ್ಯವಾಗದೆ ಪರದಾಡುತ್ತಾರೆ.

ಗುತ್ತಿಗೆದಾರರು ಸ್ಪಂದಿಸಬೇಕು
ಕೆಲವು ದಿನಗಳಿಂದ ವಿವಿಧ ಸಮಸ್ಯೆಗಳು ಎದುರಾಗಿವೆ. ನೋಂದಣಿ ತಿದ್ದುಪಡಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸರಕಾರ ನಿಗದಿ ಮಾಡಿದ ಮಾನದಂಡದಂತೆ ಒಂದು ಕಂಪ್ಯೂಟರ್‌, ಒಬ್ಬರು ನಿರ್ವಾಹಕಿಯನ್ನು ನೀಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ಅವರು ಕೆಲಸ ಮಾಡುತ್ತಾರೆ. ಗುತ್ತಿಗೆ ಪಡೆದುಕೊಂಡವರು ಇದಕ್ಕೆ ಸೂಕ್ತ ಸ್ಪಂದನ ನೀಡಬೇಕು. ತಾತ್ಕಾಲಿಕವಾಗಿ ಹೆಚ್ಚುವರಿ ಕಂಪ್ಯೂಟರ್‌ ನೀಡಿ ಸಮಸ್ಯೆ ಬಗೆಹರಿಸಬಹುದು. ಮುಂದಿನ ದಿನಗಳಲ್ಲಿ ಒತ್ತಡವನ್ನು ನಿಬಾಯಿಸಿ ತಹಬಂದಿಗೆ ಬರುವಂತೆ ಕ್ರಮ ಕೈಗೊಂಡಿದೆ.
– ಪುರಂದರ ಹೆಗ್ಡೆ ,ಬಂಟ್ವಾಳ ತಹಶೀಲ್ದಾರ್‌

Advertisement

– ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next