ಮಂಡ್ಯ: ಪಡಿತರ ಚೀಟಿದಾರರು ಸದ್ಯ ಪಡಿತರ ಪದಾರ್ಥಗಳಿಗಾಗಿ ಪರದಾಡುವ ಸನ್ನಿವೇಶ ಸೃಷ್ಟಿಯಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿರುವ ಬಯೋಮೆಟ್ರಿಕ್ ಯಂತ್ರಕ್ಕೆ ಅರ್ಹರು ಹೆಬ್ಬೆಟ್ಟು ಕೊಟ್ಟರೂ ಸ್ವೀಕರಿಸುತ್ತಿಲ್ಲ, ಪಡಿತರಕ್ಕಾಗಿ ದಿನಗಟ್ಟಲೆ ಕಾದು ಕೂರುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಸರ್ವರ್ ಡೌನ್.
ಒಂದು ದಿನಕ್ಕೆ ಮೂರರಿಂದ ನಾಲ್ಕು ಮಂದಿ ಹೆಬ್ಬೆಟ್ಟನ್ನು ಸ್ವೀಕರಿಸುವುದೇ ಹೆಚ್ಚು. ಉಳಿದಂತೆ ಸರ್ವರ್ ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತದೆ. ಪಡಿತರ ಪಡೆಯಲು ಸಿದ್ಧರಾಗಿ ಬರುವವರು ಸರ್ವರ್ ಇಲ್ಲದಿರುವುದನ್ನು ತಿಳಿದು ನಿರಾಸೆಯಿಂದ ವಾಪಸ್ ತೆರಳುತ್ತಿದ್ದಾರೆ.
ಪ್ರತಿ ತಿಂಗಳ ಮೊದಲ ವಾರದಲ್ಲೇ ಪಡಿತರ ಪದಾರ್ಥಗಳನ್ನು ನೀಡಿ ಮುಗಿಸಕು.ಆದರೆ, ಅಕ್ಟೋಬರ್ ತಿಂಗಳ ಪಡಿತರವನ್ನು ಹದಿನೈದು ದಿನಗಳಾದರೂ ಕೊಡಲು ಸಾಧ್ಯವಾಗಿಲ್ಲ. ಬಯೋಮೆಟ್ರಿಕ್ ಯಂತ್ರ ಅರ್ಹ ಪಡಿತರದಾರರ ಹೆಬ್ಬೆಟ್ಟು ಸ್ವೀಕರಿಸುವಲ್ಲಿ ವಿಫಲವಾಗುತ್ತಿದೆ. ಇದುನ್ಯಾಯಬೆಲೆ ಅಂಗಡಿಯವರು ಹಾಗೂ ಪಡಿತರ ಚೀಟಿದಾರರನ್ನು ಬೆಸ್ತು ಬೀಳುವಂತೆ ಮಾಡಿದೆ. ಅಲ್ಲದೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೂ ತೊಂದರೆ ತಂದೊಡ್ಡಿದೆ. ಪಡಿತರ ಪದಾರ್ಥಗಳನ್ನೇ ಜೀವನಾಧಾರ ಮಾಡಿಕೊಂಡಿರುವವರು ಕೆಲಸ ಬಿಟ್ಟು ದಿನಗಟ್ಟಲೆ ನ್ಯಾಯಬೆಲೆ ಅಂಗಡಿಗಳ ಎದುರು ಕಾದು ಕೂರುತ್ತಿದ್ದಾರೆ.
ದಿನವಿಡೀ ಕಾಯ್ದರೂ ಸರ್ವರ್ ಸರಿಹೋಗದೆ ವಾಪಸ್ ತೆರಳಿರುವ ನಿದರ್ಶನಗಳೂ ಇವೆ. ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ವಿಶ್ವಾಸ, ನಂಬಿಕೆ ಮೇಲೆ ಪಡಿತರ ಚೀಟಿದಾರರಿಂದ ಕಾರ್ಡ್ ಗಳು ಮತ್ತು ಅವರ ಫೋನ್ ನಂಬರ್‌ಗಳನ್ನು ಪಡೆದು ಪಡಿತರ ಪದಾರ್ಥಗಳನ್ನು ವಿತರಿಸುತ್ತಿದ್ದಾರೆ. ಸರ್ವರ್ ಸಿಕ್ಕ ಸಮಯದಲ್ಲಿ ಅವರಿಗೆ ದೂರವಾಣಿ ಕರೆ ಮಾಡಿ ಕರೆಸಿಕೊಂಡು ಹೆಬ್ಬೆಟ್ಟನ್ನು ಬಯೋಮೆಟ್ರಿಕ್ ಯಂತ್ರದಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ. ಆದರೆ, ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಬ್ಬೆಟ್ಟು ದಾಖಲಾಗದೆ ಅರ್ಹರಿಗೆ ಪಡಿತರ ಪದಾರ್ಥಗಳನ್ನು ನೀಡುತ್ತಿಲ್ಲ. ಇದರಿಂದ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ನಿತ್ಯವೂ ಅಲೆದಾಡುವ ಸ್ಥಿತಿ ಸಾಮಾನ್ಯವಾಗಿದೆ.
ಅಂಗಡಿ ಮಾಲೀಕರ ಅಸಹಾಯಕತೆ: ಕೆಲವು ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 8 ಗಂಟೆಗೆ ಬಾಗಿಲು ತೆರೆದರೆ, ಬಹುತೇಕ ಅಂಗಡಿಗಳು ಬೆಳಗ್ಗೆ 10.30ರ ನಂತರ ತೆರೆಯುತ್ತಿವೆ.ಕೆಲವೊಮ್ಮೆ 8 ಗಂಟೆಯಿಂದ 10.30ರವರೆಗೆ ಸರ್ವರ್ ಸಿಗುವ ಸಾಧ್ಯತೆಯಿದೆ. ಅದನ್ನು ತಿಳಿದು ಎಲ್ಲಾ ಕೆಲಸ ಬಿಟ್ಟು ಪಡಿತರ ಚೀಟಿ ಕುಟುಂಬದ ಸದಸ್ಯರು ಬಂದರೂ ಆವೇಳೆಯಲ್ಲೂ ಸ್ಥಗಿತಗೊಂಡಿರುವುದು ಪಡಿತರದಾರರನ್ನು ಕಂಗೆಡಿಸುತ್ತಿದೆ. ಇನ್ನು ಬೆಳಗ್ಗೆ 10.30ರಿಂದ ಸಂಜೆ 7 ಗಂಟೆಯವರೆಗೆ ಸರ್ವರ್ ಸಿಗುವುದೇ ಇಲ್ಲ. ನ್ಯಾಯಬೆಲೆಅಂಗಡಿ ಮಾಲೀಕರು ಪಡಿತರ ಪದಾರ್ಥಗಳನ್ನು ನೀಡಲಾಗದೆ ಅಸಹಾಯಕತೆ ಪ್ರದರ್ಶಿಸುವುದು ಸಾಮಾನ್ಯವಾಗಿದೆ.