ಸಕಲೇಶಪುರ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಕುಟುಂಬ ಸಮೇತ ಬಯೋಮೆಟ್ರಿಕ್ (ಬೆರಳಚ್ಚು) ನೀಡಬೇಕೆಂದು ಆದೇಶ ಹೊರಡಿಸಿದೆ.
ಪಡಿತರ ಚೀಟಿದಾರರು ಬಯೋಮೆಟ್ರಿಕ್ ನೀಡಲು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸರ್ವರ್ ಸಮಸ್ಯೆಯಿಂದಾಗಿ ದಿನವಿಡೀ ಕೆಲಸ ಕಾರ್ಯಗಳನ್ನು ಬಿಟ್ಟು ಕಾಯುತ್ತಾ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.
5-6 ದಿನಗಳಿಂದ ಸಮಸ್ಯೆ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸರ್ವರ್ ಕಳೆದ 5-6 ದಿನನಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಯೋ ಮೆಟ್ರಿಕ್ ಗಾಗಿ ಇಲಾಖೆಗೆ ವೆಬ್ ಸೈಟ್ ಆನ್ ಮಾಡಿದರೆ “ದಿಸ್ ಸೈಟ್ ಕಾಂಟ್ ಬೀ ರೀಚ್‌ಡ್’ ಎಂದು ಪರದೆ ಮೇಲೆ ಕಾಣಿಸಿಕೊಳ್ಳುವ ಮೆಸೇಜ್ ಓದಿ ಪಡಿತರ ವಿತರಕರು ಸುಸ್ತಾಗಿದ್ದಾರೆ.
ಪಡಿತರ ವಿತರಣೆಗೂ ತೊಂದರೆ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸರ್ವರ್ ಕೈಕೊಟ್ಟಿದ್ದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪಡಿತರಕ್ಕಾಗಿ ಬಿಪಿಎಲ್ ಪಡಿತರ ಚೀಟಿದಾರರು ನಿತ್ಯ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪಡಿತರ ಸಿಗದೇ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯ ಬೆಲೆ ಅಂಗಡಿ ಮಾಲೀಕರು ತಮ್ಮದಲ್ಲದ ತಪ್ಪಿಗೆ ಪಡಿತರ ಚೀಟಿದಾರರಿಂದ ಬೈಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಆಹಾರ ಇಲಾಖೆ ನಿರ್ಲಕ್ಷ್ಯ: ಪಡಿತರ ಚೀಟಿದಾರರ ಎಲ್ಲಾ ಸದಸ್ಯರ ಬೆರಳಚ್ಚು ಪಡೆಯುವುದಗೋಸ್ಕರ (ಕೆವೈಸಿ) ಪ್ರತ್ಯೇಕ ಸರ್ವರ್ ಲೈನ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಇಲಾಖೆ ಇದನ್ನು ಸರಿಯಾಗಿ ಅನುಷ್ಠಾನ ಮಾಡಲು ಮುಂದಾಗಿಲ್ಲ. ಹಳೆಯ ಸರ್ವರ್ ಹದಗೆಟ್ಟಿರುವುದರಿಂದ ತಾಲೂಕಿನಲ್ಲಿ ಶೇ.70ರಷ್ಟು ಪಡಿತರ ವಿತರಣೆಯಾಗಿಲ್ಲ. ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಈ ರೀತಿಯ ಸಮಸ್ಯೆ ಇದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೂಲಿ ಕಾರ್ಮಿಕರ ಪರದಾಟ: ತಾಲೂಕಿನಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕೂಲಿಕಾರ್ಮಿಕರು ದಿನಕ್ಕೆ 250ರಿಂದ 300 ರೂ. ದುಡಿಯುತ್ತಿದ್ದಾರೆ. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಅಂದಿನ ಕೂಲಿ ಹಣ ದೊರೆಯದೇ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆಫ್ಲೈನ್ ಮೂಲಕ ಪಡಿತರ ವಿತರಣೆ: ನ್ಯಾಯಬೆಲೆ ಅಂಗಡಿಯವರು ಸರ್ವರ್ ಸಮಸ್ಯೆ ಬಗೆಹರಿಯುವರೆಗೂ ಆಫ್ ಲೈನ್ ಮುಖಾಂತರ ಪಡಿತರ ವಿತರಣೆ ಮಾಡಲು ಅವಕಾಶ ನೀಡಬೇಕೆಂದು ತಾಲೂಕು ಆಹಾರ ಇಲಾಖೆಗೆ ಮನವಿ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಸರ್ವರ್ ಸಮಸ್ಯೆ ಸರಿಯಾಗದಿದ್ದಲ್ಲಿ ಆಫ್ ಲೈನ್ ಮುಖಾಂತರ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
-ಸುಧೀರ್ ಎಸ್.ಎಲ್