ಚನ್ನರಾಯಪಟ್ಟಣ: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯಲು ಹೊಸ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಹಳೆ ಚೀಟಿಯಲ್ಲಿ ಮೃತರ ಹೆಸರು ಡಿಲೀಟ್ ಹಾಗೂ ತಿದ್ದುಪಡಿ ಮಾಡಿಸಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಆದರೆ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ನಿತ್ಯ ಕಚೇರಿ, ಆನ್‌ಲೈನ್ ಸೆಂಟರ್ ಗಳನ್ನು ಅಲೆಯುವುದು ಮಾತ್ರ ತಪ್ಪುತ್ತಿಲ್ಲ.
ಅನ್ನಭಾಗ್ಯ ಹಣ ಸಂದಾಯವಿಲ್ಲ: ತಾಲೂಕಿನಲ್ಲಿ 72,138 ಕುಟುಂಬ ಬಿಪಿಎಲ್, 6,172 ಕುಟುಂಬ ಎಪಿಎಲ್ ಹಾಗೂ 3,926 ಕುಟುಂಬ ಅಂತ್ಯೋದಯ ಚೀಟಿ ಹೊಂದಿದ್ದಾರೆ. ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಐದು ಕೆ.ಜಿ. ಅಕ್ಕಿಗೆ ಬದಲಾಗಿ ಹಣ ಸಂದಾಯ ಮಾಡಲಿದೆ. ಆದರೆ ಅನೇಕ ಮನೆಯಲ್ಲಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆ ಹೊಂದಿಲ್ಲ, ಕೆಲವರು ಖಾತೆ ಹೊಂದಿದ್ದರೂ ಅದು ನಿಷ್ಕ್ರಿಯವಾಗಿದೆ. ಇನ್ನು ಕೆಲವರು ಆಧಾರ್ ಲಿಂಕ್ ಮಾಡಿಸಿಲ್ಲ, ಐಎಫ್ಎಸ್ಸಿ ಕೋಡ್ ಸೇರಿದಂತೆ ಕೆಲ ಸಮಸ್ಯೆಗಳಿವೆ. ಹಾಗಾಗಿ ಅವರಿಗೆ ಸರ್ಕಾರದಿಂದ ಹಣ ಸಂದಾಯವಾಗುತ್ತಿಲ್ಲ.
ಗೃಹಲಕ್ಷ್ಮೀಗೂ ತೊಡಕು: ಕುಟುಂಬದ ಯಜಮಾನಿಗೆ 2 ಸಾವಿರ ರೂ. ಕೊಡುವ ಗೃಹಲಕ್ಷ್ಮೀ ಯೋಜನೆಗೂ ಸರ್ವರ್ ಸಮಸ್ಯೆ ತೊಡಕಾಗಿ ಪರಿಣಮಿಸಿದೆ. ಮೃತರ ಹೆಸರಿನ ಖಾತೆಗೆ ಹಣ ಜಮೆ: ಕೆಲವು ಪ್ರಕರಣಗಳಲ್ಲಿ ಚೀಟಿಯಲ್ಲಿನ ಮುಖ್ಯಸ್ಥೆ ತೀರಿದ ಬಳಿಕ ಕುಟುಂಬಸ್ಥರು ನ್ಯಾಯಬೆಲೆ ಅಂಗಡಿಗೆ ಮರಣ ಪ್ರಮಾಣ ಪತ್ರ ಸಲ್ಲಿಕೆ ಬಳಿಕ ಅವರಲ್ಲಿ ಹೆಸರಲ್ಲಿ ಬರುವ ಪಡಿತರ ಆಹಾರವನ್ನು ರದ್ದುಪಡಿಸುತ್ತಾರೆ. ಆದರೆ, ಅನ್ನಭಾಗ್ಯದ ಹಣ ಮಾತ್ರ ಮೃತ ಮನೆಯ ಮುಖ್ಯಸ್ಥೆ ಖಾತೆಗೆ ಜಮಾ ಆಗುತ್ತಿದೆ. ತಿದ್ದುಪಡಿಗಾಗಿ ಆಹಾರ ಇಲಾಖೆ ಹಾಗೂ ಸೇವಾ ಸಿಂಧು, ಆನ್‌ಲೈನ್ ಸೆಂಟರ್ ಗಳಿಗೆ ಅಲೆಯುವಂತಾಗಿದೆ.
ತಾಲೂಕಿನಲ್ಲಿ ಸಾಕಷ್ಟು ಕುಟುಂಬದ ಮನೆ ಒಡತಿ ಮೃತರಾಗಿರುವುದ್ದರಿಂದ ಹಣ ಕುಟುಂಬದ ಕೈ ಸೇರುತ್ತಿಲ್ಲ, ಇದಕ್ಕೆ ಯಾರನ್ನು ಹೊಣೆ ಮಾಡಬೇಕು ಎನ್ನುವುದು ತಿಳಿಯದೇ ಸಾಕಷ್ಟು ಬಡ ಕುಟುಂಬಗಳು ನಿತ್ಯವೂ ಹೋಬಳಿ ಕೇಂದ್ರದ ನಾಡಕಚೇರಿ, ತಾಲೂಕು ಕೇಂದ್ರದಲ್ಲಿನ ಮಿನಿ ವಿಧಾನ ಸೌಧ ಅಲೆಯುತ್ತಿದ್ದಾರೆ. ತಾಲೂಕಿನ ಹಿರೀಸಾವೆ, ನುಗ್ಗೆಶ್ರವಣಬೆಳಗೊಳ, ಬಾಗೂರು ಹೋಬಳಿ ಕೇಂದ್ರದಲ್ಲಿನ ಬ್ಯಾಂಕ್ ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಸಮಸ್ಯೆಯಿಂದ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಕೆವೈಸಿ ಮಾಡಿಸಿಕೊಳಲು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಅತ್ಯಗತ್ಯವಾಗಿದೆ. ಹೆಚ್ಚು ಮಹಿಳೆಯರು ಕಳೆದ ಒಂದು ವಾರದಿಂದ ಕೆವೈಸಿ ಮಾಡಿಸಲು ತಾವು ಖಾತೆ ಹೊಂದಿರುವ ಬ್ಯಾಂಕ್‌ಗೆ ನಿತ್ಯವೂ ಅಲೆಯುತ್ತಿದ್ದಾರೆ. ಆದರೆ, ಅಲ್ಲಿನ ಸರ್ವರ್ ಸಮಸ್ಯೆಯಿಂದ ನಿತ್ಯವೂ ಹಣ ವೆಚ್ಚ ಮಾಡಿಕೊಂಡು ಗ್ರಾಮಗಳಿಂದ ಬ್ಯಾಂಕ್‌ಗೆ ಬರಬೇಕಾಗುತ್ತದೆ. ಒಟ್ಟಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆ ಪಡೆಯಲು ಮಹಿಳೆಯರು ಪರದಾಡುತ್ತಿದ್ದಾರೆ.
ಪಡಿತರ ಚೀಟಿಯಲ್ಲಿ ಲೋಪ ಸರಿಪಡಿಸಿಕೊಳ್ಳಲು ಸರ್ಕಾರ ಆನ್ ಲೈನ್ ಓಪನ್ ಮಾಡಿತ್ತು. ಆದರೆ, ರಾಜ್ಯ ವ್ಯಾಪ್ತಿ ಆಹಾರ ಇಲಾಖೆ ವೆಬ್‌ಸೈಟ್ ಲಾಗಿನ್ ಆಗುತ್ತಿರುವುದರಿಂದ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದು, ಲೋಪಗಳನ್ನು ಸರಿಪಡಿಸಲಾಗುತ್ತಿಲ್ಲ.
-ಎಚ್.ಪಿ.ವಾಸು, ಶಿರಸ್ತದಾರ್ ಆಹಾರ ಮತ್ತು ನಾಗರೀಕ ಸೇವೆ ಇಲಾಖೆ
-ಶಾಮಸುಂದರ್ ಕೆ.ಅಣ್ಣೇನಹಳ್ಳಿ