ನೆಲಮಂಗಲ : ರೈತರಿಗೆ ಎದುರಾಗುವ ಬೆಲೆ ಕುಸಿತ, ಬೆಳೆಹಾನಿಯ ಸಂಕಷ್ಟಗಳ ನಡುವೆ ಸರ್ವರ್ ಸಮಸ್ಯೆಯಿಂದಾಗಿ, ಸಾಲ ಸೌಲಭ್ಯಕ್ಕಾಗಿ ಬೆಳೆ ಆಧಾರ್ ಪತ್ರ ಪಡೆಯಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ರೈತರು ಸರ್ಕಾರಿ ಬೆಳೆಸಾಲ ಸೌಲಭ್ಯಕ್ಕಾಗಿ ಬೆಳೆ ಆಧಾರ್ ಪತ್ರ ಪಡೆಯಲು ಬಂದರೆ, ಒಂದು ಕಡೆ ಸರ್ವರ್ ಸಮಸ್ಯೆ ಮತ್ತೂಂದು ಕಡೆ ಜಮೀನು ರಿಜಿಸ್ಟರ್ ಮಾಡಿಸುವ ಮಧ್ಯವರ್ತಿಗಳ ದರ್ಪದ ಮಾತಿನಿಂದ ಕಂಗಾಲಾಗುವಂತಾಗಿದೆ.
ಗಲಾಟೆ : ರೈತರು ಹಾಗೂ ಕಚೇರಿ ಸಿಬ್ಬಂದಿ ನಡುವೆ ಬೆಳೆ ಆಧಾರ್ ಪತ್ರ ನೀಡಲು ವಿಳಂಬ ಮಾಡುವ ವಿಚಾರದಲ್ಲಿ ಗುರುವಾರ ಮಧ್ಯಾಹ್ನ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಗಲಾಟೆ ನಡೆದಿದೆ. ಅಧಿಕಾರಿಗಳು ಮಧ್ಯಪ್ರವೇಶಿಸಿ ಗಲಾಟೆಯನ್ನು ಶಾಂತಗೊಳಸಿದ್ದಾರೆ.
ಅಲೆದಾಟ : ರೈತರು ಬ್ಯಾಂಕುಗಳಲ್ಲಿ ಹಾಗೂ ಸಹಕಾರಿ ಸಂಘಗಳಲ್ಲಿ ಸಾಲಸೌಲಭ್ಯ ಪಡೆದುಕೊಳ್ಳಲು ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಆಧಾರ್ ಪತ್ರ ಪಡೆದರೆ ಮಾತ್ರ ಸೌಲಭ್ಯ ಸಿಗುವುದು.ಆದರೆ, ಕಚೇರಿಗೆ ಹತ್ತಾರು ಬಾರಿ ರೈತರು ಅಲೆದರೂ, ಸರ್ವರ್ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹಿಸಬೇಕಾದ ಅಧಿಕಾರಿಗಳು ಮೌನವಾಗಿದ್ದಾರೆ.
ಮಧ್ಯವರ್ತಿಗಳ ಕಾಟ : ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಪನೊಂದಣಾಧಿಕಾರಿಗಳ ಕಚೇರಿ ಎಂದರೆ ಮಧ್ಯವರ್ತಿಗಳ ಜೈಲಿದ್ದಂತೆ, ಕಂಪ್ಯೂಟರ್ ಆಪರೇಟರ್‌ನಿಂದ ಸ್ಕ್ಯಾನ್ ಮಾಡುವ ವ್ಯಕ್ತಿಗಳವರೆಗೂ ಮಧ್ಯವರ್ತಿಗಳ ಆಟದ ಗೊಂಬೆಗಳಾಗಿದ್ದಾರೆ. ರೈತರು ದಾಖಲೆ ತಂದು ನೀಡಿದರೂ, ಸರ್ವರ್ ಬಂದ ತಕ್ಷಣ ಮಧ್ಯವರ್ತಿಗಳ ಕೆಲಸ ಮುಗಿಸಿ ನಂತರ ರೈತರ ಕೆಲಸ ಮಾಡುತಿದ್ದಾರೆ ಎಂದು ರೈತರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.