ಹಾಸನ: ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಪೂರ್ವದಲ್ಲಿ ಸೋಂಕು, ವೈರಸ್, ಬ್ಯಾಕ್ಟೀರಿಯಾ ಫಂಗಸ್ ತಪಾಸಣೆಯನ್ನು ತಕ್ಷಣ ಕೈಗೊಂಡು ಮೇ 4ರೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ತೋಟಗಾರಿಕಾ ಇಲಾಖೆ ಹಾಗೂ ಸಂಶೋಧನಾ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಪೂರ್ವ ಸಿದ್ಧತೆ ಕುರಿತಂತೆ ಅಧಿಕಾರಿಗಳು ಹಾಗೂ ವರ್ತಕರ ಸಭೆ ನಡೆಸಿದ ಅವರು ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ವಿಶೇಷ ಮುಂಜಾಗ್ರತೆ ವಹಿಸಬೇಕಿದ್ದು ವರ್ತಕರು ಹಾಗೂ ರೈತರ ಸಹಕಾರ ಅತ್ಯಗತ್ಯ ಎಂದರು. ಶೀಘ್ರದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ಅಥವಾ ವಿಡಿಯೋ ಸಂವಾದ ನಡೆಸಿ ಆಲೂಗಡ್ಡೆ ಮಾರಾಟ ದಿನಾಂಕದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಾಮಾಜಿಕ ಅಂತರ ಕಾಪಾಡಿ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಅತ್ಯಗತ್ಯ. ಈ ಬಾರಿ ವರ್ತಕರು ತಾವು ಮಾರಾಟ ಮಾಡುವ ಬಿತ್ತನೆ ಆಲೂ ಗಡ್ಡೆ ಮಾದರಿಗಳ ಪ್ರದರ್ಶನ ಹಾಗೂ ಎತ್ತುವಳಿ ಕೇಂದ್ರಗಳನ್ನು ಹೆಚ್ಚು ವಿಸ್ತರಿಸುವುದು ಹಾಗೂ ಕೇಂದ್ರಿಕರಿಸುವುದು ಅಗತ್ಯ ಎಂದು ಡೀಸಿ ಹೇಳಿದರು.
ಬಿತ್ತನೆ ಬೀಜದ ಗುಣಮಟ್ಟ ಕಾಪಾಡಿ: ರೈತರಿಗೆ ಗುಣಮಟ್ಟ ಹಾಗೂ ದರದಲ್ಲಿ ಮೋಸವಾಗದಂತೆ ವರ್ತಕರು ಗಮನ ಹರಿಸಬೇಕು. ರೈತರ ಜಮೀನುಗಳಿಗೆ ವರ್ತಕರೇ ಬಿತ್ತನೆ ಬೀಜಗಳನ್ನು ಸಾಗಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಎಎಸ್ಪಿ ಬಿ. ಎನ್. ನಂದಿನಿ, ತೋಟಗಾರಿಕಾ ಉಪ ನಿರ್ದೇಶಕ ಮಂಜುನಾಥ್, ಹಾಸನ ಎಪಿಎಂಸಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಶ್ರೀಹರಿ ವರ್ತಕರ ಸಂಘದ ಅಧ್ಯಕ್ಷ ಗೋಪಾಲ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ಇದ್ದರು.