ಧಾರವಾಡ: ಶತಮಾನದ ಇತಿಹಾಸ ಹೊಂದಿರುವ ಕೆಸಿಸಿ ಬ್ಯಾಂಕ್‌ನ ನೌಕರ ಎಂಬ ಅಭಿಮಾನ ಬೆಳೆಸಿಕೊಳ್ಳಬೇಕು. ಇದರಿಂದ ಬ್ಯಾಂಕ್ ಆರ್ಥಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ಬ್ಯಾಂಕ್‌ನ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು.
ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಕೆಸಿಸಿ ಬ್ಯಾಂಕ್ ನೌಕರರ ಪತ್ತಿನ ಸಹಕಾರಿ ಸಂಘದ 57ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕೆಸಿಸಿ ಬ್ಯಾಂಕ್ ರಾಜ್ಯದಲ್ಲಿನ ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳಲ್ಲಿ ವಿಶೇಷ ಸ್ಥಾನಮಾನವಿದೆ. ಮೂರು ಜಿಲ್ಲೆಗಳ ಕಾರ್ಯ ವ್ಯಾಪ್ತಿ ಹೊಂದಿರುವ ಈ ಬ್ಯಾಂಕಿನ ಪ್ರತಿಯೊಬ್ಬ ನೌಕರನು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಆಸಕ್ತಿ ತೋರಿಸಬೇಕು. ಬಡವರು, ಮಧ್ಯಮ ವರ್ಗದವರು ಮತ್ತು ವಿಶೇಷವಾಗಿ ರೈತರ ಸೇವೆ ನೌಕರರ ಆದ್ಯತೆಯಾಗಬೇಕು ಎಂದರು.
ನೌಕರರಿಗೆ ಆಡಳಿತ ಮಂಡಳಿ ಸಕಲ ಸೌಲಭ್ಯವನ್ನು ಒದಗಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಗ್ರಾಹಕ ಮಹಾಮಂಡಳದ ಅಧ್ಯಕ್ಷರಾಗಿ ಆಯ್ಕೆಯಾದ ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಪಾಟೀಲ ಅವರನ್ನು ಸಂಘದ ವತಿಯಿಂದ ಸತ್ಕರಿಸಲಾಯಿತು. ನಿವೃತ್ತಿ ಹೊಂದಿದ ಸದಸ್ಯರನ್ನು ಮತ್ತು ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಶಿವಾನಂದ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್‌ನ ಉಪಾಧ್ಯಕ್ಷ ಶೇಖರಗೌಡ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ. ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಎ.ಡಿ. ಮದ್ನೂರ, ಸಂಘದ ಉಪಾಧ್ಯಕ್ಷ ಸಣ್ಣಪ್ಪ ರುದ್ರಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು. ಮಧುರಾ ಹಿರೇಮಠ ಪ್ರಾರ್ಥಿಸಿದರು. ಅಶೋಕ ಸೋಬಾನದ ಸ್ವಾಗತಿಸಿ, ನಿರೂಪಿಸಿದರು. ಸಿ.ಡಿ. ಮಲ್ಲಾಪುರ ವಂದಿಸಿದರು.