ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸವಾಲುಗಳಿವೆ. ವೈದ್ಯರ ಮತ್ತು ರೋಗಿಗಳ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದ್ದು ದೇಶದಲ್ಲಿ ವೈದ್ಯಕೀಯ ಸೇವೆಯ ಅಗತ್ಯ ಬಹಳಷ್ಟಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಅಸಂಖ್ಯಾತ ರೋಗಗಳಿಂದ ಬಳಲುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಿ ಎಂದು ಹೈದರಾಬಾದಿನ ಫಿಂಗರ್ ಪ್ರಿಟಿಂಗ್ ಮತ್ತು ಡೈಗ್ನೊಸ್ಟಿಕ್ ಸೆಂಟರ್‌ನ ನಿರ್ದೇಶಕ ಡಾ|ಕೆ.ತಂಗರಾಜ ಹೇಳಿದರು.
ನಗರದ ಬಿ.ವಿ.ವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಿ ಮತ್ತು ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಭವಿಷ್ಯದಲ್ಲಿ ಜೆನೆಟಿಕ್ಸ್ ಸಂಬಂಧಿತ ಸಂಶೋಧನೆ ಹೆಚ್ಚಲಿದೆ. ಯುವವೈದ್ಯರಿಗೆ ರೋಗಿಗಳಿಗೆ ತಾಳ್ಮೆಯಿಂದ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದರು.
ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ವೈದ್ಯರ ಕೊರತೆ ಎದುರಿಸುತ್ತಿದೆ. ಬಡ ಮತ್ತು ಅಸಹಾಯಕರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಿ ಮತ್ತು ಗ್ರಾಮೀಣ ಭಾಗದಲ್ಲಿ ಸೇವೆಸಲ್ಲಿಸಿ. ಕೋವಿಡ್-19ರ ಸಂದರ್ಭ ಕುಮಾರೇಶ್ವರ ಆಸ್ಪತ್ರೆಯನ್ನು ಚಿಕಿತ್ಸೆಗಾಗಿ ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗಿತ್ತು. ಮನೆ ಬಾಗಿಲಿಗೆ ವೈದ್ಯರ ಸೇವೆ ಎನ್ನುವ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ ಹೆಮ್ಮೆ ನಮ್ಮ ಆಸ್ಪತ್ರೆಗಿದೆ. ನಮ್ಮ ಈ ಕಾರ್ಯಕ್ಕೆ ಮಾಧ್ಯಮಗಳಿಂದ ಪ್ರಶಂಸೆ ದೊರೆತದ್ದು ಸಾರ್ವಜನಿಕರ ಆರೋಗ್ಯ ಸೇವೆಗಾಗಿ ಇನ್ನಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರೇರಣೆಯಾಯಿತು ಎಂದು ಹೇಳಿದರು.
ಯುವ ವೈದ್ಯರಾದ ಡಾ| ಸಂತೋಷ, ಡಾ| ರಿಷಿ ರಂಜನ್, ಡಾ|ಖುಷ್ಮಿತ್ ಕೌರ್, ಡಾ| ಸೌಭಾಗ್ಯ ದವಳಿ, ಡಾ|ಅನುಷಾ ಪಾಟೀಲ, ಡಾ| ಶ್ರದ್ಧಾಸಿಂಗ್, ಡಾ|ವೀಣಾ, ಸಾತಕೋತ್ತರ ವಿದ್ಯಾರ್ಥಿ ಡಾ|ಸೋಜಾ ಜೊಚಿಮ್ ಅವರಿಗೆ ಚಿನ್ನದ ಪದಕ ವಿತರಿಸಲಾಯಿತು.
ಕಾಲೇಜಿನ 152 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮತ್ತು ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಉಪಸ್ಥಿತರಿದ್ದರು.
ಇದೇ ಡಾ|ಕೆ.ತಂಗರಾಜ ಅವರನ್ನು ಸನ್ಮಾನಿಸಲಾಯಿತು. ವಿವಿಧ ದಾನಿಗಳು ಸ್ಥಾಪಿಸಿದ ಪ್ರಶಸ್ತಿಗಳನ್ನು ಆಯಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡಿ ಸನ್ಮಾನಿಸಲಾಯಿತು. ಡಾ| ಭುವನೇಶ್ವರಿ ಯಳಮಲಿ ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ|ಎಸ್.ಎಸ್. ಸೊಲಬಣ್ಣವರ ಪರಿಚಯಿಸಿದರು. ಡಾ|ಬಿ.ಎಸ್. ಅಂಕದ, ಡಾ|ನಾರಾಯಣ ಮುತಾಲಿಕ, ಡಾ| ಸುನೀತಾ ಪೂಜಾರಿ ಮತ್ತು ಡಾ|ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಡಾ|ಅಶೋಕ ಡೋರ್ಲೆ ವಂದಿಸಿದರು.