Advertisement

ಉನ್ನತ ಗುರಿಯೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸಿ

12:29 PM Apr 23, 2022 | Team Udayavani |

ಧಾರವಾಡ: ವೈದ್ಯರು ಉನ್ನತ ಗುರಿಯೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸಬೇಕು ಎಂದು ಹುಬ್ಬಳ್ಳಿ ಇಸ್ಕಾನ್‌ ಉಪಾಧ್ಯಕ್ಷ ರಘೋತ್ತಮದಾಸ್‌ ಹೇಳಿದರು.

Advertisement

ಡಾ| ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ವಿವಿ, ಎಸ್‌ಡಿಎಂ ವೈದ್ಯಕೀಯ ಕಾಲೇಜು, ಎಸ್‌ಡಿಎಂ ಕಾಲೇಜ್‌ ಆಫ್‌ ಫಿಸಿಯೋಥೆರಪಿ ಮತ್ತುಎಸ್‌ಡಿಎಂ ಇನ್ಸ್ಟಿಟ್ಯೂಟ್‌ ಆಫ್‌ ನರ್ಸಿಂಗ್‌ನ 13ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿ ತಾನು ಅಳವಡಿಸಿಕೊಂಡ ಸಂಸ್ಕೃತಿ ಮತ್ತು ನಡತೆಯಿಂದ ಅಳೆಯಲ್ಪಡುತ್ತಾನೆ. ಮನುಷ ಸುಖ ಜೀವನ ನಡೆಸಲು ಭಾವನೆಗಳನ್ನು ತನ್ನ ವಶದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ತನ್ನನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವಾಗ ಸಕಾರಾತ್ಮಕ ಭಾವನೆಗಳನ್ನು ಹೊಂದಬೇಕಾಗುತ್ತದೆ. ಸುಶಿಕ್ಷಿತರು ಸಮಾಜದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಬಹುದು ಎಂದರು.

ಎಸ್‌ಡಿಎಂ ವಿವಿ ಕುಲಪತಿ ಡಾ| ವೀರೇಂದ್ರ ಹೆಗ್ಗಡೆ ವರ್ಚುವಲ್‌ ವೇದಿಕೆ ಮೂಲಕ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಹೃದಯ ಶ್ರೀಮಂತಿಕೆಯಿಂದ ವೈದ್ಯರಾಗಬೇಕೇ ವಿನಃ ಪೆನ್ನಿನಿಂದ ಪರೀಕ್ಷೆ ಬರೆದು ಅಲ್ಲ. ವೈದ್ಯರು ತಮ್ಮ ಉತ್ತಮ ಕೈಗುಣಗಳಿಂದ ರೋಗಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ರೋಗಿಗಳೊಂದಿಗೆ ಪ್ರೀತಿ-ವಾತ್ಸಲ್ಯದೊಂದಿಗೆ ವ್ಯವಹರಿಸಿ ಅವರನ್ನು ರೋಗ ಮುಕ್ತಗೊಳಿಸಬೇಕು. ಅತ್ಯಾಧುನಿಕ ಚಿಕಿತ್ಸಾ ಮತ್ತು ಶೈಕ್ಷಣಿಕ ವಿಧಾನಗಳನ್ನು ಅಳವಡಿಸಿಕೊಳಬೇಕು. ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಮನದಟ್ಟು ಮಾಡುವ ಯೋಗ್ಯತೆ ಹೊಂದಬೇಕು ಎಂದರು.

ಉಪಕುಲಪತಿ ಡಾ| ನಿರಂಜನಕುಮಾರ ಮಾತನಾಡಿ, ಎಸ್‌ಡಿಎಂನಲ್ಲಿ ನಾವು ಹಾಕಿಕೊಟ್ಟ ಭದ್ರಬುನಾದಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮಿಂಚಬೇಕು. ವೈದ್ಯರಾದ ಶುಭಸಂದರ್ಭದಲ್ಲಿ ತಮ್ಮ ಹೆತ್ತವರಿಗೆ ಮತ್ತು ಮಾರ್ಗದರ್ಶಕರಿಗೆ ಕೃತಜ್ಞರಾಗಿರಬೇಕು ಎಂದು ಹೇಳಿದರು.

Advertisement

ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ, ಆಡಳಿತ ನಿರ್ದೇಶಕರಾದ ಸಾಕೇತ ಶೆಟ್ಟಿ, ಡಾ| ಎಸ್‌.ಕೆ. ಜೋಶಿ ಹಾಗೂ ಜೀವಂಧರಕುಮಾರ, ಕುಲಸಚಿವರಾದ ಡಾ| ಚಿದೇಂದ್ರ ಎಂ. ಶೆಟ್ಟರ, ಮಾಜಿ ಕುಲಸಚಿವರಾದ ಲೆಪ್ಟಿನಂಟ್‌ ಕರ್ನಲ್‌ ಯು.ಎಸ್‌. ದಿನೇಶ, ಡೆಂಟಲ್‌ ಕಾಲೇಜಿನ ಪ್ರಾಂಶುಪಾಲರಾದ ಡಾ| ಬಲರಾಮ್‌ ನಾಯ್ಕ, ಫಿಸಿಯೋಥೆರಪಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ| ಸಂಜಯ್‌ ಪರಮಾರ್‌, ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡೇವಿಡ್‌ ಕೋಲಾ ಮತ್ತು ಎಸ್‌ಡಿಎಂ ರಿಬ್ಸ್ನ ಪ್ರಾಂಶುಪಾಲರಾದ ಡಾ| ಪಾಲಾಕ್ಷ ಕೆ.ಜೆ. ಉಪಸ್ಥಿತರಿದ್ದರು.

ಅತಿಥಿಗಳು ಮತ್ತು ಉಪ ಕುಲಪತಿಗಳು ಚಿನ್ನದ ಪದಕ ವಿಜೇತರಿಗೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಉಪಕುಲಸಚಿವರಾದ ಡಾ| ಅಜಂತಾ ಜಿ.ಎಸ್‌. ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ| ರತ್ನಮಲಾ ದೇಸಾಯಿ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಡಾ| ಮಹೇಶ ಬೆಣ್ಣಿಕಲ್‌ ಪರಿಚಯಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿನಿ ಡಾ| ಶಿವಾಂಗಿ ಸಿಂಗ್‌ ವೈದ್ಯಕೀಯ ಕಾಲೇಜಿನ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಡಾ| ರಮೇಶಕುಮಾರ ಮತ್ತು ಡಾ| ವಿನುತಾ ಚಿಕ್ಕಮಠ ನಿರೂಪಿಸಿದರು. ಡಾ| ಆದಿತ್ಯ ಅಗ್ನಿಹೋತ್ರಿ ಮತ್ತು ಡಾ| ಅಶ್ವಿ‌ನಿ ಎಸ್‌. ಪದವೀಧರರನ್ನು ಪರಿಚಯಿಸಿದರು. ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ| ವಿಜಯ ಕುಲಕರ್ಣಿ ವಂದಿಸಿದರು.

ವೈದ್ಯರು ಹಣದ ಆಸೆಗೆ ಬೀಳದೆ ಗುಣಮಟ್ಟದ ಸೇವೆ ಒದಗಿಸುತ್ತಾ ಬರಬೇಕು. ನಮಗೆ ಮಾರ್ಗದರ್ಶನ ಮಾಡುವ ವ್ಯಕ್ತಿಗಳೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಇರಬೇಕು. ಕಠಿಣ ಪರಿಶ್ರಮ ಒಂದರಿಂದಲೇ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತುಂಗಕ್ಕೇರಲು ಸಾಧ್ಯ. ರೋಗಿಗಳೊಂದಿಗೆ ಕಳೆದ ಸಮಯ ಪರಿಣಾಮಕಾರಿಯಾಗಿರಬೇಕು. ಸ್ವಂತಿಕೆ ಮತ್ತು ಸ್ವಾಭಿಮಾನ ವೈದ್ಯರಿಗೆ ಎರಡು ರತ್ನಗಳಿದ್ದಂತೆ. –ಡಾ| ನಿರಂಜನಕುಮಾರ, ಉಪಕುಲಪತಿ, ಎಸ್‌ಡಿಎಂ ವಿವಿ

Advertisement

Udayavani is now on Telegram. Click here to join our channel and stay updated with the latest news.

Next