Advertisement

ಸರ್ಪನಮನೆ ಸಸ್ಯಕೇಂದ್ರ: 3.58 ಲಕ್ಷ ವಿವಿಧ ಜಾತಿಯ ಗಿಡಗಳು

11:10 PM Jun 17, 2020 | Sriram |

ಬೈಂದೂರು: ಬೈಂದೂರು ತಾಲೂಕಿನ ಪ್ರಸಿದ್ಧ ಸಸ್ಯ ಕೇಂದ್ರವಾದ ಶಿರೂರು ಸರ್ಪನಮನೆ ಕ್ಷೇತ್ರದಲ್ಲಿ ಈ ವರ್ಷ 3.58 ಲಕ್ಷ ಗಿಡಗಳನ್ನು ಸಿದ್ಧಪಡಿಸಲಾಗಿದೆ.ಹಸುರು ಕ್ರಾಂತಿಯ ಚಿಂತನೆಯೊಂದಿಗೆ ಅರಣ್ಯ ಇಲಾಖೆ ಕಾಡುವೃದ್ಧಿ ಹಾಗೂ ಅರಣ್ಯ ಬೆಳೆಸಲು ವಿಭಿನ್ನ ಯೋಜನೆಗಳನ್ನು ರೂಪಿಸಿದೆ.

Advertisement

ಶಿರೂರು ಗ್ರಾಮದ ಸಂಕದಗುಂಡಿ ಬಳಿ ಇರುವ ಸರ್ಪನಮನೆ ಸಸ್ಯ ಕ್ಷೇತ್ರ 5 ಎಕರೆ ವಿಶಾಲವಾಗಿದೆ.ಸಾಗುವಾನಿ, ಬಾದಾಮಿ, ಹಲಸು, ಶ್ರೀಗಂಧ, ಮಾವು,ಮಹಾಗನಿ, ಸೇರಿದಂತೆ 38ಕ್ಕೂ ಅಧಿಕ ಪ್ರಭೇದದ ಗಿಡಗಳನ್ನು ಪೂರೈಸಲಾಗುತ್ತಿದೆ.

ಬೈಂದೂರು ಅರಣ್ಯ ವ್ಯಾಪ್ತಿ ವಿವರ
ಬೈಂದೂರು ವಲಯಾರಣ್ಯ ಪ್ರಾದೇಶಿಕ ವಲಯದಲ್ಲಿ ಒಟ್ಟು 8,467 ಹೆಕ್ಟೇರ್‌ ಅರಣ್ಯ ಭೂಮಿ ಹೊಂದಿದೆ. ಬೈಂದೂರಿನಿಂದ ಮರವಂತೆಯವರೆಗೆ ವ್ಯಾಪ್ತಿ ಹೊಂದಿದೆ. ಬೈಂದೂರು ಕೇಂದ್ರ ಸ್ಥಾನ,ಗೋಳಿಹೊಳೆ, ಕಿರಿಮಂಜೇಶ್ವರ ವ್ಯಾಪ್ತಿಗಳಿದ್ದು 9 ಗಸ್ತುಗಳಾಗಿ ವಿಂಗಡಿಸಲಾಗಿದೆ.

ಶಿರೂರು, ಕರ್ನ್ಗದ್ದೆ, ಬೈಂದೂರು, ವಸ್ರೆ, ಗೋಳಿಹೊಳೆ, ಹುಲಿಮೀಸೆ ಪಾರೆ, ಕುರ್ಶಿಗುಡ್ಡೆ , ಹೇರೂರು ಪೂರ್ವ ಮತ್ತು ಹೇರೂರು ಪಶ್ಚಿಮ ಎಂದು ವಿಂಗಡಿಸಲಾಗಿದೆ. 2019-20ರ ಸಾಲಿನಲ್ಲಿ 316 ಹೆಕ್ಟೇರ್‌ ನೆಡುತೋಪು ನೆಡುವ ಗುರಿ ಹೊಂದಿದೆ. ಹಸುರು ಕರ್ನಾಟಕ ಯೋಜನೆಯಡಿ 5 ಸಾವಿರ ಹೊಂಡಗಳನ್ನು ತೆಗೆಯಲಾಗಿದೆ.ಇದುವರೆಗೆ 2 ಲಕ್ಷಕ್ಕೂ ಅಧಿಕ ಗಾಳಿಗಿಡಗಳನ್ನು ನೆಡಲಾಗಿದೆ.

ಸಾರ್ವಜನಿಕ ಯೋಜನೆಗಳು
ಅರಣ್ಯ ಇಲಾಖೆಯು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 20 ಸಾವಿರ ಗಿಡ ನೆಡಲಾಗಿದೆ. ಕೃಷಿಕರಿಗೆ 1 ಹೆಕ್ಟೇರ್‌ಗೆ 400 ಗಿಡಗಳನ್ನು ನೀಡಲಾಗುತ್ತದೆ.ಅತ್ಯಂತ ರಿಯಾಯಿತಿ ದರದಲ್ಲಿ ನೀಡುವ ಜತೆಗೆ ಮೊದಲ ವರ್ಷ 30 ರೂಪಾಯಿ, ಎರಡನೇ ವರ್ಷ 30 ರೂಪಾಯಿ ಹಾಗೂ ಮೂರನೇ ವರ್ಷ 40 ರೂಪಾಯಿ ಸಹಾಯಧನ ನೀಡುತ್ತಿದೆ. ಕಸಿ ಗೇರು, ಮಾವಿನ ಗಿಡಗಳು ದೊರೆಯಲಿದೆ.

Advertisement

ಬೈಂದೂರು ವ್ಯಾಪ್ತಿಯ ಅರಣ್ಯ ರಕ್ಷಣೆ ಮತ್ತು ಪರಿಸರ ಕಾಳಜಿಯ ಬಗ್ಗೆ ಇಲಾಖೆ ಸಾಕಷ್ಟು ಮುತುವರ್ಜಿ ವಹಿಸಿದೆ. ಜನರ ವಿಶ್ವಾಸ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾಡಿನ ರಕ್ಷಣೆ ಕುರಿತು ವಿಭಿನ್ನ ಚಿಂತನೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಇರಾದೆ ಇದೆ. ಪರಿಸರ ಕಾಳಜಿ ಕೇವಲ ಇಲಾಖೆ ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ.
-ಕಿರಣ ಬಾಬು, ಬೈಂದೂರು ವಲಯಾರಣ್ಯಾಧಿಕಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next