Advertisement

ಗಂಭೀರ ಭಾಷಣ,ಆರೋಪ, ಹಾಸ್ಯ ಚಟಾಕಿ; HDK, BSY ಭಾಷಣದಲ್ಲಿ ಹೇಳಿದ್ದೇನು?

05:26 PM May 25, 2018 | Team Udayavani |

ಬೆಂಗಳೂರು: ವಿಧಾನಸಭೆಯಲ್ಲಿ ಶುಕ್ರವಾರ ನಡೆದ ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮೇಲೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಾಡಿದ ದೀರ್ಘ ಭಾಷಣಕ್ಕೆ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ನೀಡಿದ ತಿರುಗೇಟು ಸದನದಲ್ಲಿ ಗಂಭೀರ ಚರ್ಚೆ ಹಾಗೂ ಶಾಸಕರನ್ನು ನಗೆಗಡಲಲ್ಲಿ ಮೂಡಿಸಿತ್ತು.

Advertisement

ನಾನು ವಚನಭ್ರಷ್ಟನಲ್ಲ, ರೈತರ ಸಾಲಮನ್ನಾಕ್ಕೆ ಬದ್ಧ

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಯಾವುದೇ ಕಾರಣಕ್ಕೂ ಬೇರೆ ಯಾವ ಪಕ್ಷಕ್ಕೂ ಅಧಿಕಾರಕ್ಕೆ ಏರಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ಕೊಟ್ಟಿದ್ದರು. ಈ ಮಾತನ್ನು ಅವರು ಹೇಳಿದ್ದು ಎಷ್ಟು ಸೂಕ್ತ ಎಂಬುದು ಪ್ರಶ್ನೆ. ಇದು ಎಲ್ಲೋ ಒಂದು ಕಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮೇಲೆ ಮಾತನಾಡುತ್ತ ತಿಳಿಸಿದ್ದರು.

ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ ಪಕ್ಷದ 38, ಕಾಂಗ್ರೆಸ್ ನ 78 ಹಾಗೂ ಇಬ್ಬರು ಪಕ್ಷೇತರ ಶಾಸಕರು ಸೇರಿ ಮನವಿ ಸಲ್ಲಿಸಿದ್ದಾಗ ರಾಜ್ಯಪಾಲರು ನಮಗೆ ಸರ್ಕಾರ ರಚಿಸಲು ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ನಮಗೆ ಕಾನೂನು ಬದ್ಧವಾಗಿಯೇ ಅವಕಾಶ ಕೊಡದೇ ಬಿಜೆಪಿಗೆ ಅವಕಾಶ ಕೊಟ್ಟರು ಎಂದರು.

ಅಂದು ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರಕ್ಕಾಗಿ ನನ್ನ ಮತ್ತು ಯಡಿಯೂರಪ್ಪನವರ ನಡುವೆ ಮಾತ್ರ ಒಪ್ಪಂದವಾಗಿತ್ತು. ಆ ಸಂದರ್ಭದಲ್ಲಿ ಕೆಎಸ್ ಈಶ್ವರಪ್ಪನವರೂ ಕೂಡಾ ಜತೆಗಿದ್ದರು. ನಾನು ಬಿಜೆಪಿಗೆ ಅಧಿಕಾರ ಕೊಡಲು ಸಿದ್ಧನಾಗಿದ್ದೆ. ವಚನ ಭ್ರಷ್ಟತೆ ಅನ್ನೋದು ನನ್ನಿಂದ ಆದದ್ದಲ್ಲ. ಜೆಡಿಎಸ್ ಬಿಜೆಪಿ ಜತೆ ಕೈಜೋಡಿಸಿದ್ದು ತಂದೆಯವರಿಗೆ ಇಷ್ಟವಿರಲಿಲ್ಲವಾಗಿತ್ತು, ಅವರ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು. ಅಧಿಕಾರ ನೀಡಲಿಲ್ಲ ಎಂದು ವಿನಾಕಾರಣ ನನ್ನ ಮೇಲೆ ವಚನಭ್ರಷ್ಟ ಎಂದು ಹಣೆಪಟ್ಟಿ ಕೊಟ್ಟರು. ನಾನು ಬಿಜೆಪಿ ವರಿಷ್ಠರ ಜತೆ ಒಪ್ಪಂದ ಮಾಡಿಕೊಂಡಿಲ್ಲ, ಎಂದು ಕುಮಾರಸ್ವಾಮಿ ಹಳೆಯ ಘಟನೆಗಳ ಮೆಲುಕು ಹಾಕಿದರು.

Advertisement

ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿ ನಡೆಯುತ್ತೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಯಾವುದೇ ಅನುಮಾನ ಬೇಡ. ನಮಗೆ ಯಾವುದೇ ವೈಯಕ್ತಿಕ ಆಸೆ ಇಲ್ಲ ಎಂದು ಹೇಳಿದರು. ಪ್ರತಿಪಕ್ಷ ನಾಯಕರಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ, ನೀವು(ಯಡಿಯೂರಪ್ಪ) 2 ವರ್ಷಗಳ ಕಾಲ ರಾಜ್ಯ ಸುತ್ತಿ ಬಂದಿದ್ದೀರಿ, ರೈತರ ಕಷ್ಟಗಳನ್ನು ಅರಿತುಕೊಂಡಿದ್ದೀರಿ, ನಮಗೂ ನಿಮ್ಮ ಸಲಹೆ, ಸೂಚನೆ ಬೇಕು. ಹೀಗಾಗಿ ನಿಮಗೆ ನಾವು ಪ್ರತಿಭಟನೆ ನಡೆಸುವ ಕಷ್ಟ ಕೊಡೋದಿಲ್ಲ ಎಂದು ಹೇಳಿದರು.

ನನ್ನ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ: ಬಿಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಭಾಷಣದ ಬಳಿಕ ಮಾತನಾಡಿದ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ತಮ್ಮ ಮಾತಿನುದ್ದಕ್ಕೂ ಕುಮಾರಸ್ವಾಮಿ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಾನು ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಕೆಲ ಶಾಸಕರನ್ನು ಸಂಪರ್ಕಿಸಿದ್ದು ನಿಜ. ಯಾಕೆಂದರೆ ಅಧಿಕಾರ ದಾಹದಿಂದ ಗದ್ದುಗೆ ಏರಲು ಹೊರಟಿರುವ ಅಪ್ಪ, ಮಕ್ಕಳನ್ನು ಬೆಂಬಲಿಸಬೇಡಿ ಎಂದು ಹೇಳಿದ್ದೆ. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ, ಭ್ರಷ್ಟ ಅಪ್ಪ ಮಕ್ಕಳ ವಿರುದ್ಧ ಎಂದು ಬಿಎಸ್ ಯಡಿಯೂರಪ್ಪ ಗುಡುಗಿದರು.

20 ತಿಂಗಳ ಕಾಲ ನಾನು ಕುಮಾರಸ್ವಾಮಿ ಅವರಲ್ಲಿ ಏನನ್ನೂ ಕೇಳಿರಲಿಲ್ಲವಾಗಿತ್ತು. ಸರಿಯೋ ತಪ್ಪೋ ಎಲ್ಲವನ್ನೂ ಸಹಿಸಿಕೊಂಡಿದ್ದೆ. 20 ತಿಂಗಳ ನಂತರ ನಮಗೆ ವಿಶ್ವಾಸದ್ರೋಹ ಬಗೆದು ವಚನಭ್ರಷ್ಟರಾಗಿಬಿಟ್ಟರು.

ಅಧಿಕಾರದ ಆಸೆ ಇಲ್ಲ ಎಂದು ಹೇಳುವ ನೀವು 20 ತಿಂಗಳ ಕಾಲ ನಮ್ಮ(ಬಿಜೆಪಿ) ಕೈ ಹಿಡಿದುಕೊಂಡು ಯಾಕೆ ಬಂದ್ರಿ. ಸಮ್ಮಿಶ್ರ ಸರ್ಕಾರ ನಮ್ಮಪ್ಪನಿಗೆ ಬೇಜಾರು ತಂದಿತ್ತು ಎಂದಿದ್ದೀರಿ. 2006ರಲ್ಲಿ ಕಾಂಗ್ರೆಸ್ ನ ಧರಂ ಸಿಂಗ್ ಅವರನ್ನು ನಂಬಿಸಿ ಜೆಡಿಎಸ್ ಮೋಸ ಮಾಡಿದೆ, ಅದೇ ರೀತಿ ಬಿಜೆಪಿಗೂ ಮೋಸ ಮಾಡಿದೆ, ಈಗ ಮತ್ತೆ ಕಾಂಗ್ರೆಸ್ ಗೆ ಮೋಸ ಮಾಡಲು ಜೆಡಿಎಸ್ ಹೊರಟಿದೆ ಎಂದು ದೂರಿದರು. 1984ರಲ್ಲಿ ದೇವೇಗೌಡರ ಕುಟುಂಬದವರು 40 ಸೈಟ್ ಗಳನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಎಚ್ ಡಿಕೆ ಮನೆದೇವರು ದುರ್ಯೋಧನ, ಡಿಕೆಶಿ ಖಳನಾಯಕ, ಸಿದ್ದರಾಮಯ್ಯ ಪರ ಬ್ಯಾಟಿಂಗ್!

ಕೆಲವೇ ದಿನಗಳಲ್ಲಿ ಅಪ್ಪ ಮಕ್ಕಳಿಂದ ಕಾಂಗ್ರೆಸ್ ಪಕ್ಷ ನಾಶ ಆಗಲಿದೆ. ಓರ್ವ ಜನನಾಯಕ ಜನಾದೇಶ ಕೊಡದಿದ್ದರೆ ಸಾಯ್ತೀನಿ ಅಂತ ಹೇಳಿದರು. ನಾವೇನು ಜೆಡಿಎಸ್ ಅನ್ನು ಅಪ್ಪಿಕೊಳ್ಳಲು ಹೋಗಿದ್ವಾ? ಸಿದ್ದರಾಮಯ್ಯನವರೇ ನಿಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡಿ ಎಂದ ಬಿಎಸ್ ಯಡಿಯೂರಪ್ಪ, ಈ ಎಲ್ಲಾ ಬೆಳವಣಿಗೆ ಹಿಂದಿನ ಖಳನಾಯಕ ಡಿಕೆ ಶಿವಕುಮಾರ್ ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದರು.

ಈ ಅಪವಿತ್ರ ಮೈತ್ರಿ ಸರ್ಕಾರ ರಾಜ್ಯಕ್ಕೆ ಅನಿಷ್ಠ, ಇವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಮೋದಿ ಅವರ ಬಗ್ಗೆ ಅನಾವಶ್ಯಕವಾಗಿ ಸುಳ್ಳು ಹೇಳುವುದು ಬೇಡ ತಿರುಗೇಟು ನೀಡಿದರು.

ನಾಗರಹಾವು ರೋಷಕ್ಕೆ 12 ವರ್ಷವಂತೆ, ಕುಮಾರಸ್ವಾಮಿ ಅವರ ರೋಷ ಹಾವಿನ ರೋಷಕ್ಕಿಂತಲೂ ಹೆಚ್ಚು. ಕುಮಾರಸ್ವಾಮಿಯವರಿಗೆ ದುರ್ಯೋಧನ ಮನೆ ದೇವ್ರು ಇರಬೇಕು. ವಿನಾಶವೇ ದುರ್ಯೋಧನನ ಮಂತ್ರ. ಎಚ್ ಡಿಕೆ ಕೂಡಾ ಹಾಗೆ. ವಿನಾಶವೇ ದುರ್ಯೋಧನನ ಸಂಕಲ್ಪ. ಸಿದ್ದರಾಮಯ್ಯ ಕರ್ಣನಿದ್ದಂತೆ..ಅವರಿಂದ ಎಲ್ಲ ಪಡೆದು ಅವರನ್ನು ದೂರ ಮಾಡಲಿದ್ದಾರೆ ಕಾದು ನೋಡಿ.

ಕೊಳ್ಳಿ ದೇವರ ಬಾಯಲ್ಲಿ ಭಗವದ್ಗೀತೆ ಎಂಬಂತೆ ಎಚ್ ಡಿಕೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಯವರ ವ್ಯಕ್ತಿತ್ವ ನಂಬಿದವರನ್ನು ಮುಗಿಸೋದು. ಡಿಕೆ ಶಿವಕುಮಾರ್ ಅವರು ಮುಂದೆ ಪಶ್ಚಾತ್ತಾಪ ಪಡಲಿದ್ದೀರಿ ಎಂದು ಹೇಳಿದಾಗ ಸದನದಲ್ಲಿ ನಗೆಯ ಅಲೆಯುಕ್ಕಿಸಿದ್ದರು.

ಕ್ಷಮೆ ಕೇಳಿದ ಬಿಎಸ್ ವೈ:

ನೇರ ರಾಜಕೀಯಕ್ಕೆ ಬನ್ನಿ, ನಿಮ್ಮ ಮಠ ಮಂದಿರದ ಕೆಲಸ ನೋಡಿಕೊಳ್ಳಿ ಹೇಳುವ ಮೂಲಕ ನಾಡಿನ ಜನರಿಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪಮಾನವನ್ನು ಮಾಡಿದ್ದಾರೆ..ಎಂದಾಗ ಸದನದಲ್ಲಿ ನಗೆ..ಕ್ಷಮಿಸಿ, ಕ್ಷಮಿಸಿ ನನಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಹೇಳಲು ಕೆಲವು ದಿನಗಳೇ ಬೇಕಾಗುತ್ತದೆ ಎಂದರು.

ಬಿಜೆಪಿ ಸಭಾತ್ಯಾಗ, ಸೋಮವಾರ ರಾಜ್ಯಾದ್ಯಂತ ಬಂದ್;

ಇಂದು ಸಂಜೆಯೊಳಗೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಸಾಲಮನ್ನಾ ಘೋಷಣೆ ಮಾಡಬೇಕು, ಇಲ್ಲದಿದ್ದರೆ ಸೋಮವಾರ ರಾಜ್ಯಾದ್ಯಂತ ಬಂದ್ ಆಚರಿಸಲಿದ್ದೇವೆ ಎಂದು ಹೇಳಿ ದೀರ್ಘ ಭಾಷಣ ಮುಕ್ತಾಯಗೊಳಿಸಿದ ಬಿಎಸ್ ವೈ ವಿಶ್ವಾಸಮತ ಯಾಚನೆಗೂ ಮುನ್ನ ಸಭಾತ್ಯಾಗ ಮಾಡಿದ ನಂತರ ಬಿಜೆಪಿ ಶಾಸಕರೂ ಅವರನ್ನು ಅನುಸರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next