ವಿಜಯಪುರ: ಬುಲೆರೋ, ಬಸ್, ಕಾರಿನ ನಡುವೆ ಸಂಭವಿಸಿದೆ ಸರಣಿ ಅಪಘಾತದಲ್ಲಿ ಓರ್ವ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-52 ರ ವಿಜಯಪುರ ತಾಲೂಕಿನ ಹೊನಗನಳ್ಳಿ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಸಾರಿಗೆ ಸಂಸ್ಥೆಯ ಬಸ್‌ಗೆ ಬುಲೆರೋ ಮುಖಾಮುಖಿ ಡಿಕ್ಕಿಯಾಗಿದೆ ಈ ವೇಳೆ ಬಸ್‌ಗೆ ಹಿಂಬದಿಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಓರ್ವ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ-52 ರ ವಿಜಯಪುರ ತಾಲೂಕಿನ ಹೊನಗನಳ್ಳಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬುಲೆರೋ ವಾಹನ ಚಾಲಕ ವಾಹನದಲ್ಲೇ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬುಲೆರೋ ವಾಹನ ಚಾಲಕ ಮದ್ಯ ಸೇವಿಸಿದ್ದ ಎನ್ನಲಾಗಿದ್ದು, ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಸಾರಿಗೆ ಸಂಸ್ಥೆಯ ಬಸ್‌ಗೆ ಬುಲೆರೋ ವಾಹನ ಡಿಕ್ಕಿಯಾಗುತ್ತಲೇ ಬಸ್ಸಿನ ಹಿಂಭಾಗದಲ್ಲಿ ಬರುತ್ತಿದ್ದ ಕಾರು ಬಸ್ಸಿಗೆ ಡಿಕ್ಕಿಯಾಗಿದೆ. ಇದರಿಂದಾಗಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ಕಾರಣ ದ್ವಿಮುಖ ಸಂಚಾರ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿ ಬಿದ್ದಿದ್ದ ವಾಹನಗಳನ್ನು ತೆರವು ಮಾಡಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.