Advertisement

“ವಿವಾದಕ್ಕೆ ಕೊಲೆ ಪರಿಹಾರವಲ್ಲ’

01:35 AM Oct 29, 2020 | mahesh |

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಯುವಕರ ಸರಣಿ ಹತ್ಯೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಬೀಳಬೇಕು ಎಂದು ಕರ್ನಾಟಕ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಾಂದ ಸ್ವಾಮೀಜಿ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ವೈಯಕ್ತಿಕ ದ್ವೇಷ, ಹಣಕಾಸು ವಿಚಾರ ಹಾಗೂ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ನಿರಂತರವಾಗಿ ಕೊಲೆ, ಕೊಲೆಯತ್ನ, ಜೀವ ಬೆದರಿಕೆ ಮೊದಲಾದ ಅಹಿತಕರ ಘಟನೆಗಳು ನಡೆಯುತ್ತಿವೆ. ಇದು ತುಂಬಾ ನೋವಿನ ಸಂಗತಿ. ಮಾತುಕತೆ, ಸಂಧಾನದ ಮೂಲಕ ಇಂಥಹ ವಿವಾದ ಸರಿಪಡಿಸಲು ಸಾಧ್ಯ. ಕೊಲೆ ಪರಿಹಾರವಲ್ಲ. ಕರಾವಳಿಯ ಎಷ್ಟೋ ಹಿಂದೂ ಯುವಕರು ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಹೀಗಿರುವಾಗ ನಾನಾ ಕಾರಣಗಳಿಗೆ ದ್ವೇಷ ಸಾಧನೆಯೊಂದಿಗೆ ಪರಸ್ಪರ ಹೊಡೆದಾಡುವ ಬದಲು ನಮ್ಮ ಸಮಾಜವನ್ನು ಕಾಪಾಡುವ ಕರ್ತವ್ಯ ಎಲ್ಲರ ಮೇಲಿದೆ. ಮುಂದೆ ಇಂತಹ ಅಪರಾಧ ಕೃತ್ಯಗಳು ನಡೆಯದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಜಾಗೃತಿ ಕಾರ್ಯ
ಸರಣಿ ಕೊಲೆಗಳ ಬಗ್ಗೆ ವಿಶ್ವಹಿಂದೂ ಪರಿಷತ್‌ ಈಗಾಗಲೇ ಅವಲೋಕನ ಸಭೆ ನಡೆಸಿದೆ. ಎಲ್ಲ ಊರಿನ ಯುವಕರಲ್ಲಿಯೂ ಜಾಗೃತಿ ಮಾಡಿಸಲಾಗುವುದು. ಈ ಹಿಂದೆ ಡ್ರಗ್ಸ್‌ ವಿರುದ್ಧ ಹೋರಾಟ ಮಾಡಲಾಗಿತ್ತು. ಅಲ್ಲದೆ ಡ್ರಗ್ಸ್‌ ಸೇವಿಸಿ ತೊಂದರೆಗೊಳಗಾದವರಿಗೆ ಆಶ್ರಯ ಒದಗಿಸಿ ಅವರನ್ನು ಸರಿಪಡಿಸಿದ್ದು, ಅವರು ಉತ್ತಮ ಜೀವನ ನಡೆಸುತ್ತಿದ್ದಾರೆ. ಯುವಕರು ತಮ್ಮ ಶಕ್ತಿಯನ್ನು ಸಮಾಜದ ಏಳಿಗೆಗೆ ವಿನಿಯೋಗಿಸಬೇಕು ಎಂದರು.

ಸಂಘಟನೆಯಲ್ಲಿ ಅವಕಾಶವಿಲ್ಲ
ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮಾತನಾಡಿ, ವಿಹಿಂಪ, ಬಜರಂಗದಳ ಶಿಸ್ತಿನ ಸಂಘಟನೆಗಳು. ಅವುಗಳಿಗೆ ಚೌಕಟ್ಟು ಇದೆ. ಸಂಘಟನೆಯಲ್ಲಿ ಇಂತಹ ಕೃತ್ಯಗಳಿಗೆ ಅವಕಾಶವಿಲ್ಲ ಎಂದರು.

ಯುವತಿ ಕೊಲೆಗೆ ಖಂಡನೆ
ಫ‌ರಿದಾಬಾದ್‌ನಲ್ಲಿ ಯುವಕನೋರ್ವ ಯುವತಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ತೀವ್ರ ಖಂಡನೀಯ. ಕೇಂದ್ರ ಸರಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶರಣ್‌ ಪಂಪ್‌ವೆಲ್‌ ಆಗ್ರಹಿಸಿದರು. ವಿಹಿಂಪ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ್‌ ಕುತ್ತಾರ್‌, ಜಿಲ್ಲಾ ಕಾರ್ಯದರ್ಶಿ ಶಿವಾನಂದ್‌ ಮೆಂಡನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next