Advertisement
ಕಪ್ಪು ಬಣ್ಣದ ಅಡಿಯಿಂದ ಮುಡಿಯವರೆಗೆ ದೇಹವನ್ನು ಮುಚ್ಚಿದ, ಆದರೆ ಮುಚ್ಚಿದರೂ ಇರುವಂತೆಯೇ ಆಕಾರ ಪ್ರದರ್ಶಿಸುವ ಈ ಡ್ರೆಸ್ ಕ್ಯಾಟ್ ಸೂಟ್ 2 ಎಂದು ಕರೆಸಿಕೊಂಡಿದೆ. ಅದಕ್ಕೆ ಹೊಟ್ಟೆಯ ಭಾಗದಲ್ಲಿ ಉದ್ದಕ್ಕೆ ಸಾಗಿಹೋದ ಕೆಂಪು ಪಟ್ಟಿಯ ಮಿಂಚು ಬೇರೆ. ಕ್ಯಾಟ್ ಸೂಟ್ 1ನ್ನು ಕೂಡ ಇದೇ ಫ್ಯಾಶನ್ ಡಿಸೈನಿಂಗ್ ಭಕ್ತೆ ಸೆರೆನಾ ಈ ಹಿಂದೆ ಯುಎಸ್ ಓಪನ್ 2002ರಲ್ಲಿ ಪ್ರದರ್ಶಿಸಿದ್ದರು. ಕಪ್ಪು ಮೈಗಂಟಿದ ಮೇಲುಡುಗೆಯ ಜೊತೆಗೆ ಕಪ್ಪನೆಯ ಫಿಟ್ ಚೆಡ್ಡಿಯಾಗಿತ್ತದು.
ಟೆನಿಸ್‌ಗಷ್ಟೇ ಸೀಮಿತವಾಗಿ ಹೇಳುವುದಾದರೆ, ಇಲ್ಲಿನ ಪ್ರತಿ ಗ್ರಾನ್‌ಸ್ಲಾಂನಲ್ಲಿ ಡ್ರೆಸ್ ಕೋಡ್ ಜಾರಿಯಲ್ಲಿದೆ. ಫ್ರೆಂಚ್ ಓಪನ್‌ನ ನಿಯಮಗಳ ಪ್ರಕಾರ, ಜೀನ್ಸ್ ಕಟ್‌ಆಫ್‌ಗಳು, ಟೀ-ಶರ್ಟ್, ಜಿಮ್ ಸೂಟ್‌ಗಳು ನಿಷಿದ್ಧ. ಈ ಪಟ್ಟಿಯಲ್ಲಿ ಯಾವ್ಯಾವುದು ನಿಷಿದ್ಧ ಎಂದು ಇನ್ನಷ್ಟು ಐಟಂಗಳನ್ನು ಹೆಸರಿಸಿಲ್ಲ, ವಿಸ್ತಾರವಾಗಿ ಹೇಳಿಲ್ಲ. ಬಚಾವ್ ಸೆರೆನಾ! ನಿಯಮಗಳನ್ನು ವಿಶ್ಲೇಷಿಸಿ ಹೇಳಬೇಕಾದ ಸಂಘಟಕರು ಸುಮ್ಮನಿದ್ದರಿಂದ ಸೆರೆನಾ ಸ್ಪರ್ಧೆಯಲ್ಲಿದ್ದಷ್ಟೂ ಸುತ್ತುಗಳಲ್ಲಿ ಇದೇ ಉಡುಗೆ ಬಳಸಿದರು.
Related Articles
Advertisement
ನಿಯಮಗಳಲ್ಲಿ ಸ್ಪಷ್ಟತೆ ಇಲ್ಲದಿದ್ದ ಸಂದರ್ಭದಲ್ಲಿ ಟಾಪ್ ಆಟಗಾರರನ್ನು ಪ್ರಶ್ನಿಸಲು ಸಂಘಟಕರು ಹೋಗುವುದಿಲ್ಲ. ಸೆರೆನಾ ಈ ಬಾರಿ ಕೆಂಪು ಜೇಡಿ ಮಣ್ಣಿನಂಕಣದಲ್ಲಿ ಧರಿಸಿದ ಉಡುಗೆ ವೃತ್ತಿಪರವಾಗಿಯೂ ಇರಲಿಲ್ಲ, ಅತ್ತ ಸಾಂಪ್ರದಾಯಿಕ ಟೆನಿಸ್ ಉಡುಗೆಯ ರೂಪದಲ್ಲಿಯೂ ಇರಲಿಲ್ಲ ಎಂಬುದನ್ನು ಹಲವರು ಹೇಳುತ್ತಾರೆ. ಸೆರೆನಾ ಎದುರು ಮೊದಲ ಸುತ್ತಿನ ಸಿಂಗಲ್ಸ್‌ನಲ್ಲಿ ಪರಾಜಿತರಾದ ಕ್ರಿಸ್ಟಿಯಾನಾ ಪ್ಲಿಸ್ಕೋವಾ ಹೇಳುತ್ತಾರೆ, ಎಲ್ಲರೂ ನಿಯಮಗಳಿಗೆ ಅನ್ವಯವಾಗುವ ಉಡುಗೆ ತೊಡಬೇಕು. ಇಲ್ಲದಿದ್ದರೆ ಸೆರೆನಾ ತರದವರು ಬೆತ್ತಲಾಗಿಯೇ ಪಂದ್ಯ ಆಡಲು ಬರಲಿ!
ವಿಂಬಲ್ಡನ್ ಭಿನ್ನ!: ಡ್ರೆಸ್ ಕೋಡ್ ವಿಚಾರದಲ್ಲಿ ವಿಂಬಲ್ಡನ್ ಹೆಚ್ಚು ಕಟ್ಟುನಿಟ್ಟು. ಶೂಗಳಿಗೆ ಕಟ್ಟುವ ದಾರ ಬಿಳಿಯದ್ದಾಗಿರಲಿಲ್ಲ ಎಂಬ ಕಾರಣಕ್ಕೆ ಖುದ್ದು ರೋಜರ ಫೆಡರರ್‌ರ ಪಂದ್ಯಕ್ಕೆ ಬ್ರೇಕ್ ಹಾಕಿ ಲೇಸ್ ಬದಲಿಸಿದ ಉದಾಹರಣೆಯಿದೆ. ಅ—ಕೃತ ವಿಂಬಲ್ಡನ್ ಲೋಗೋ ಹಾಕಿದ ಹೆಡ್‌ಬ್ಯಾಂಡ್‌ನ್ನು ನಿಕ್ ಕರ್ಗೋಯಿಸ್‌ರಿಂದ ತೆಗೆಸಿದ ದೃಷ್ಟಾಂತ ಇದೆ. ಗಿನ್ನಿ ಬೋಚಾರ್ಡ್ ತೊಟ್ಟ ಬ್ರಾಗೆ ಕಪ್ಪು ಎಂಬ್ರಾಯಡರಿಯ ಲೇಸ್ ಇರುವುದರಿಂದ ಅದನ್ನು ಬದಲಿಸಲು ಸೂಚಿಸಿದ್ದನ್ನು ನಾವು ಕಂಡಿದ್ದೇವೆ. ಇನ್ನು ಬಣ್ಣಬಣ್ಣದ ಅಂಡರ್ ವೇರ್ ಧರಿಸಿದವರನ್ನು ನೇರವಾಗಿ ಆಟಗಾರರ ಲಾಂಜ್‌ಗೆ ಕಳುಹಿಸಿದ ಉದಾಹರಣೆಗಳು ಹಲವು. ಅನ್ನೆ ವೈಟ್ ಎಂಬಾಕೆ ಬಿಳಿಯ ಬಣ್ಣದ ಕ್ಯಾಟ್ ಸೂಟ್ ಹಾಕಿ ವಿಂಬಲ್ಡನ್ ಆಡಲು ಬಂದಿದ್ದರೂ ಅಂಕಣಕ್ಕಿಳಿಯಲು ಅವಕಾಶ ಕಲ್ಪಿಸಿರಲಾಗಿರಲಿಲ್ಲ. ಹಾಗಾಗಿಯೇ ಆಟಗಾರರು ವಿಂಬಲ್ಡನ್‌ನಲ್ಲಿ ತಮ್ಮ ವಸ್ತ್ರ ಪ್ರಾಯೋಜಕರ ಜೊತೆ ಸೇರಿ ಸಂಘಟಕರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುವುದಿಲ್ಲ. ನೈಕ್ ಕಂಪನಿ ಅಂತಹ ನಿಯಮಗಳ ಅಡಿಯಲ್ಲಿಯೇ ಫ್ಯಾಶನ್ ಪ್ರಸ್ತುತಪಡಿಸುವ ಕೆಲಸ ಮಾಡುವುದಕ್ಕಂತೂ ಪ್ರಯತ್ನಿಸುತ್ತಿದೆ. ಬಹುಷ: ಯುಎಸ್ ಓಪನ್ ಫ್ಯಾಶನ್ ಡಿಸೈನರ್‌ಗಳು ಆಟಗಾರರ ಕೋರ್ಟ್‌ಗಳನ್ನೇ ಫ್ಯಾಶನ್ ಷೋ ಪೋಡಿಯಂ ಮಾಡಿಕೊಂಡಿರುವ ಜಾಗ. ನೈಕ್ ಜೊತೆ ಒಪ್ಪಂದ ಮಾಡಿಕೊಂಡ ಸೆರೆನಾ ವಿಲಿಯಮ್ಸ್ ಇಲ್ಲಿ ಆಡಿದ ಪ್ರತಿ ಸೀಸನ್‌ನಲ್ಲಿ ಹೊಸದೊಂದು ಬಗೆಯ ಔಟ್ ಫಿಟ್ ಪ್ರದರ್ಶಿಸಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ನೈಕ್ ಜೊತೆ ಕೈಜೋಡಿಸಿ ಡೆನಿಮ್ ಸ್ಕರ್ಟ್, ಲೆದರ್ ಮೋಟಾರ್ ಸೈಕಲ್ ಜಾಕೆಟ್, ಬೆತ್ತಲೆ ಹೊಟ್ಟೆ ಭಾಗದಿಂದ ಮಿಂಚಿದರೆ 2015ರ ವೇಳೆಗೆ ಸೆರೆನಾ ಗ್ರೇಟೆ°ಸ್ ಲೈನ್ ಎಂಬ ಪ್ರತ್ಯೇಕ ಬ್ರಾಂಡಿಂಗ್ ಶುರು ಮಾಡಿದ್ದರು. ಆಸ್ಟ್ರೇಲಿಯನ್ ಓಪನ್ ಕೂಡ ಹಲವು ಬಾರಿ ಫ್ಯಾಶನ್ ಔಟ್‌ಫಿಟ್‌ಗಳ ಅನಾವರಣಕ್ಕೆ ವೇದಿಕೆಯಾಗಿದೆ. ಆ್ಯಡ್ರಿ ಅಗಾಸ್ಸಿ, ಜೇಮ್ಸ್ ಡೇನ್, ಅನ್ನಾ ಕುರ್ನಿಕೋವಾ ಮೊದಲಾದ ಹಲವು ಆಟಗಾರರು ಆಟದಷ್ಟೇ ಅವರ ವಿಭಿನ್ನ ವಸ್ತ್ರ ವಿನ್ಯಾಸದಿಂದಲೂ ಪ್ರಚಾರ ಪಡೆದಿದ್ದರು. 2002ರಲ್ಲಿ ಅನ್ನಾ ಕುರ್ನಿಕೋವಾರ ಶರ್ಟ್, ಸ್ಕರ್ಟ್‌ಗಳ ನಡುವೆ ದೇಹ ಸೌಂದರ್ಯ ಇಣುಕುವ ಮಿನಿ ಮಿನಿ ಸ್ಕರ್ಟ್ ಅಭಿಮಾನಿಗಳನ್ನು ಆಟದಿಂದ ಕಣ್ಣು ಕೀಲಿಸಿದಂತೆ ನೋಡಿಕೊಂಡಿತ್ತು. ಟಾಮಿ ಹ್ಯಾಸ್ ತೋಳಿಲ್ಲದ ಶರ್ಟ್ ತೊಟ್ಟಾಗ ವಿವಾದ ಎದ್ದು ತೋಳಿರುವ ಶರ್ಟ್ ಧರಿಸುವಂತಾದರೆ ರಫೆಲ್ ನಡಾಲ್‌ರಂತಹ ತಾರೆ ಮಿನುಗುವಾಗ ಈ ಉಡುಪು ಓಕೆ ಎಂದಂತಹ ಉದಾಹರಣೆಗಳೂ ಇವೆ! ಕುತೂಹಲ ಕ್ಷಣಿಕ, ಸಾಧನೆ ಶಾಶ್ವತ!
ಟೆನಿಸ್‌ನ ಜನಪ್ರಿಯತೆಯನ್ನು ಉಡುಪುಗಳ ಮೂಲಕ ಅಳೆದ ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಕೂಡ ಡ್ರೆಸ್ ಕೋಡ್‌ನ್ನು ಗ್ಲಾಮರ್‌ಗಾಗಿ ಜಾರಿಗೆ ತರಲು ಪ್ರಯತ್ನಿಸಿದ್ದನ್ನೂ ನಾವು ನೋಡಿದ್ದೇವೆ. ಕೊನೆಗೂ ಹೆಚ್ಚು ಪ್ರತಿಭೆಯುಳ್ಳ ಆಟಗಾರರೇ ವಿನೂತನ ಉಡುಗೆ ಪ್ರದರ್ಶಿಸಿದರೆ ಅದು ಆಕರ್ಷಣೆಯನ್ನು ಪಡೆಯುತ್ತದೆಯೇ ವಿನಃ ಮೊದಲ ಸುತ್ತುಗಳಿಂದ ಮಾಯವಾಗುವ ಆಟಗಾರರ ಸಾಹಸಗಳು ವ್ಯರ್ಥವಾಗುತ್ತವೆ. ಈ ಹಿನ್ನೆಲೆಯಲ್ಲಿ ನಾವು ಹೊಸ ಗಾದೆ ಹುಟ್ಟಿಸಬಹುದು, ಕುತೂಹಲ ಕ್ಷಣಿಕ, ಸಾಧನೆ ಶಾಶ್ವತ! ಮಾ.ವೆಂ.ಸ.ಪ್ರಸಾದ್