Advertisement

ಅತೃಪ್ತ ಶಾಸಕರಿಂದ ಹೈಕಮಾಂಡ್ ಗೆ ಸೆ.30 ಡೆಡ್ ಲೈನ್! ಯಾರು ಆ ಶಾಸಕರು

04:28 PM Sep 17, 2018 | Team Udayavani |

ಬೆಂಗಳೂರು/ಬೆಳಗಾವಿ: ನಿಗಮ ಮಂಡಳಿ, ಸಂಪುಟ ವಿಸ್ತರಣೆಯನ್ನು ಸೆಪ್ಟೆಂಬರ್ 30ರೊಳಗೆ ಮಾಡದಿದ್ದರೆ ಪಕ್ಷ ತೊರೆಯುವುದಾಗಿ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ಹೈಕಮಾಂಡ್ ಗೆ ಡೆಡ್ ಲೈನ್ ನೀಡಿರುವುದು ಇದೀಗ ಮೈತ್ರಿ ಸರ್ಕಾರಕ್ಕೆ ದೊಡ್ಡ ಕಗ್ಗಂಟಾಗತೊಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಸೋಮವಾರ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿಯೂ ಅತೃಪ್ತ ಶಾಸಕರು ಕೂಡಾ ತಮ್ಮ ಬೇಡಿಕೆ ಈಡೇರದಿದ್ದರೆ ಸೆ.30ರ ನಂತರ ಪಕ್ಷ ತೊರೆಯುವ ತೀರ್ಮಾನ ಕೈಗೊಂಡಿದ್ದಾರೆನ್ನಲಾಗಿದೆ.

ಯಾರೂ ಬಿಜೆಪಿಗೆ ಹೋಗಲ್ಲ, ಎಲ್ಲವೂ ಊಹಾಪೋಹ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವವರು ಸರ್ಕಾರಕ್ಕೆ ಡೆಡ್ ಲೈನ್ ನೀಡಿರುವುದು ರಾಜ್ಯ ರಾಜಕೀಯದ ಮಹತ್ವದ ಬೆಳವಣಿಗೆಯಾಗಿದೆ.

ಯಾರು ಆ ಶಾಸಕರು?

ಶಾಸಕರಾದ ಬಿ.ಸಿ ಪಾಟೀಲ್, ಭೀಮಾ ನಾಯಕ್, ಪಕ್ಷೇತರ ಶಾಸಕ ನಾಗೇಶ್, ಎಂಟಿಬಿ ನಾಗರಾಜ್, ವಿ.ನಾಗೇಂದ್ರ, ಸಂಗಮೇಶ್ವರ್, ಶಿವರಾಮ್ ಹೆಬ್ಬಾರ್, ಸುಧಾಕರ್ ಸೇರಿದಂತೆ ಹಲವು ಶಾಸಕರು ಸಚಿವಕಾಂಕ್ಷಿಗಳಾಗಿದ್ದಾರೆ.

Advertisement

ಸೆ.30ರವರೆಗೆ ಕಾಯಿರಿ; ಅತೃಪ್ತರಿಗೆ ಸಿದ್ದರಾಮಯ್ಯ ಭರವಸೆ

ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ಸಿಗದಿದ್ದರೆ ಮೈತ್ರಿ ಸರ್ಕಾರದಿಂದ ಹೊರ ನಡೆಯುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೇಳಿಕೊಳ್ಳಲು ಅತೃಪ್ತ ಶಾಸಕರ ಗುಂಪು ನಿರ್ಧರಿಸಿದೆ. ಏತನ್ಮಧ್ಯೆ ನಿಗಮ ಮಂಡಳಿ, ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಸೆಪ್ಟೆಂಬರ್ 30ರವರೆಗೆ ಕಾಯಿರಿ ಎಂದು ಸಿದ್ದರಾಮಯ್ಯನವರು ಸಂದೇಶ ರವಾನಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

5ಗಂಟೆಗೆ ಸಿದ್ದರಾಮಯ್ಯನವರು ಅತೃಪ್ತ ಶಾಸಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಜೊತೆ ತಮ್ಮ ಅಳಲು ತೋಡಿಕೊಳ್ಳಲಿದ್ದಾರೆ. ಏತನ್ಮಧ್ಯೆ ಬಹಿರಂಗ ಹೇಳಿಕೆ ಕೊಡದಂತೆ ಅತೃಪ್ತ ಶಾಸಕರಿಗೆ ಹೈಕಮಾಂಡ್ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next