ಮುಂಬಯಿ, ಆ. 27: ಬಂಟರ ಸಂಘ ಬಂಟವಾಳ ತಾಲೂಕು ಇದರ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯು ಮುಂಬಯಿಯ ಪ್ರತಿಷ್ಠಿತ ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ 2019ನೇ ಸಾಲಿನ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮವನ್ನು ಸೆ. 1ರಂದು ಅಪರಾಹ್ನ 2.30ರಿಂದ ತುಂಬೆ ವಳವೂರಿನ ಬೋಳಂತೂರುಗುತ್ತು ಗಂಗಾಧರ ರೈ ಕಾಂಪ್ಲೆಕ್ಸ್‌ನ ಬಂಟವಾಳದ ಬಂಟರ ಭವನದ ಬೆಳ್ಳೂರು ಪರಾರಿ ಪಿ. ವಿ. ಶೆಟ್ಟಿ ಸಭಾಗೃಹದ ಆಲ್ಕಾರ್ಗೊ ಸಂಸ್ಥೆಯ ಕಾರ್ಯಾಧಕ್ಷ ಶಶಿಕಿರಣ್ ಶೆಟ್ಟಿ ಅವರ ಮಾತೃಶ್ರೀ ಸುಶೀಲಾ ಜನಾದರ್ನ ಶೆಟ್ಟಿ ವೇದಿಕೆಯಲ್ಲಿ ಆಯೋಜಿಸಿದೆ.
ಮುಂಬಯಿಯ ಕೈಗಾರಿಕೋದ್ಯಮಿ, ಸಮಾಜ ಸೇವಕ, ಬಂಟರ ಸಂಘ ಬಂಟವಾಳ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪ್ರಧಾನ ಅತಿಥಿಯಾಗಿ ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಗೌರವ ಅತಿಥಿಗಳಾಗಿ ನಿವೃತ್ತ ಪೊಲೀಸ್ ಆಯುಕ್ತ, ಆಲ್ಕಾರ್ಗೊ ಸಂಸ್ಥೆಯ ಸಿಎಸ್‌ಆರ್ ಸಲಹೆಗಾರ ಕೆ. ಎಲ್. ಪ್ರಸಾದ್ ಹಾಗೂ ಆಲ್ಕಾರ್ಗೊ ಸಿಎಸ್‌ಆರ್ ಮುಖ್ಯಾಧಿಕಾರಿ ಡಾ| ನೀಲ್ರತನ್ ಆರ್. ಶೆಂಡೆ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಬಂಟವಾಳ ತಾಲೂಕು ವಲಯ ಬಂಟರ ಸಂಘಗಳ ಸಮ್ಮುಖದಲ್ಲಿ ಬಂಟರ ಸಂಘ ಬಂಟವಾಳ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸಂಸದರಾಗಿ, ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷರಾಗಿ ಆಯ್ಕೆಗೊಂಡ ನಳಿನ್ ಕುಮಾರ್ ಕಟೀಲ್ ಅವರನ್ನು ಸಮ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು, ಸಹ ಕಾರ್ಯದರ್ಶಿ ನವೀನ್‌ಚಂದ್ರ ಶೆಟ್ಟಿ ಮುಂಡಜೆಗುತ್ತು, ಶೈಕ್ಷಣಿಕ ಮತ್ತು ಸಾಮಾಜಿಕ ಕಲ್ಯಾಣ ಸಮಿತಿ ಸಂಚಾಲಕ ಎಚ್. ಸಂಕಪ್ಪ ಶೆಟ್ಟಿ ಬಿ. ಸಿ. ರೋಡು, ಮಹಿಳಾ ವಿಭಾಗಧ್ಯಕ್ಷೆ ಆಶಾ ಪಿ. ರೈ, ಬಂಟವಾಳ ತಾಲೂಕು ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ. ಎಲ್ಲಾ ಸಮುದಾಯ, ಜಾತಿಗಳ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು 35 ಲಕ್ಷಕ್ಕೂ ಅಧಿಕ ಮೊತ್ತದ ಶೈಕ್ಷಣಿಕ ನೆರವನ್ನು ವಿತರಿಸಲಾಗುವುದು.
ಬಂಟರ ಸಂಘ ಬಂಟವಾಳ:
ಬಂಟರ ಸಂಘ ಬಂಟವಾಳ ಸಂಸ್ಥೆಯು 2005ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕಿರಣ್ ಹೆಗ್ಡೆ ಅನಂತಾಡಿ ಸಂಘದ ಪ್ರಥಮ ಅಧ್ಯಕ್ಷರಾಗಿ ಸೇವೆಯನ್ನಾರಂಭಿಸಿದರು. ನಂತರ ಲ| ಲೋಕನಾಥ ಶೆಟ್ಟಿ ಮತ್ತು ಬೋಳಂತೂರುಗುತ್ತು ಗಂಗಾಧರ ರೈ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅಧ್ಯಕ್ಷರಾಗಿ ಸಂಘವನ್ನು ದಕ್ಷತೆ ಮತ್ತು ಸಾಧನಾಶೀಲತೆಯಿಂದ ಮುನ್ನಡೆಸಿದರು. ಸೃಜನಶೀಲ ಸಂಘಟಕ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು 2014 ರಲ್ಲಿ ಮೂರು ವರ್ಷಗಳ ಕಾಲಾವಧಿಗೆ ಆಯ್ಕೆಗೊಂಡು ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಾ ಭಾರೀ ಜನಮನ್ನಣೆಗೆ ಪಾತ್ರರಾದರು. ಅಂತೆಯೇ 2017-2020 ರ ಅವಧಿಗೂ ದ್ವಿತೀಯ ಬಾರಿ ಸರ್ವಾನುಮತದಿಂದ ವಿವೇಕ್ ಶೆಟ್ಟಿ ಅವರೇ ಅಧ್ಯಕ್ಷರಾಗಿ ಮುನ್ನಡೆಯುವಂತಾಯಿತು. ತನ್ನ ಸಾರಥ್ಯದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಸಹಯೋಗದಿಂದ 2016 ರಲ್ಲಿ ಕೇವಲ ಒಂದುವರೆ ವರ್ಷದ ಅಲ್ಪಾವಧಿಯಲ್ಲೇ ಅತ್ಯಾಧುನಿಕ ಮತ್ತು ಅತ್ಯಾಕರ್ಷಕ ಬಂಟ್ವಾಳದ ಬಂಟರ ಭವನ ನಿರ್ಮಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಶಿಕ್ಷಣಪ್ರೇಮಿಯಾಗಿರುವ ನಗ್ರಿಗುತ್ತು ಅವರು ಆಲ್ಕಾರ್ಗೊ ಸಂಸ್ಥೆಯ ಸಹಕಾರದಲ್ಲಿ 2017ರ ಸಾಲಿನಲ್ಲಿ 28 ಲಕ್ಷ ರೂ. ಮತ್ತು 2018ರ ಸಾಲಿನಲ್ಲಿ 30 ಲಕ್ಷ ರೂ. ಗಳನ್ನು ವಿದ್ಯಾರ್ಥಿ ವೇತನ ಹಾಗೂ ಸುಮಾರು 5 ಲಕ್ಷ ರೂ. ಅಂಗವಿಕಲರಿಗೆ ಸಹಾಯಧನ ವಿತರಿಸಿ ತಮ್ಮ ಸೇವಾ ನಿಷ್ಠೆ ಮೆರೆದಿದ್ದಾರೆ.