ಗಂಗೊಳ್ಳಿ: ಇಲ್ಲಿನ ವಿನಾಯಕ ಸೋಮಿಲ್ ಸಮೀಪದ ಸಿಪಾಯಿಕೇರಿ ಎನ್ನುವಲ್ಲಿ ನದಿಯ ತಡೆಗೋಡೆ ಕುಸಿಯುತ್ತಿದ್ದು, ನದಿ ನೀರು ಸಮೀಪದ ಮನೆಗಳಿಗೆ ನುಗ್ಗುವ ಭೀತಿ ಆವರಿಸಿದೆ.
ಸಿಪಾಯಿಕೇರಿ ಪರಿಸರದ ನದಿ ತೀರಕ್ಕೆ ಸನಿಹದಲ್ಲಿದ್ದು, ಸುಮಾರು 50ಕ್ಕೂ ಅಧಿಕ ಮನೆಗಳಿವೆ. ಈ ಪ್ರದೇಶದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕೆಲವು ವರ್ಷಗಳಿಂದ ಶಿಥಿಲಗೊಂಡು ಕುಸಿಯುತ್ತಿದೆ. ಕುಸಿದ ತಡೆಗೋಡೆಯನ್ನು ಸ್ಥಳೀಯರ ನಿವಾಸಿಗಳೇ ಸಾಧ್ಯವಾದಷ್ಟು ಮಟ್ಟಿಗೆ ದುರಸ್ತಿ ಮಾಡಿದ್ದರೂ, ಈಗ ಸುಮಾರು 100-150 ಮೀಟರ್ ಉದ್ದದ ತಡೆಗೋಡೆಯ ಕಲ್ಲುಗಳು ಒಂದೊಂದಾಗಿ ಜಾರಿ ನದಿ ಸೇರುತ್ತಿದೆ.
ಒಂದೆಡೆ ನದಿಯಲ್ಲಿ ಹೂಳು ತುಂಬಿಕೊಂಡಿದ್ದು, ಬರತದ ಸಮಯದಲ್ಲಿ ನದಿ ನೀರು ಉಕ್ಕಿ ಸಮೀಪದ ಮನೆಗಳಿಗೆ ನುಗ್ಗುತ್ತಿದೆ. ಮಳೆಗಾಲದಲ್ಲಿ ನೀರಿನ ರಭಸ ಮತ್ತಷ್ಟು ಹೆಚ್ಚಿರುವುದರಿಂದ ನೀರು ದಡ ಮೇಲೆ ಉಕ್ಕಿ ಹರಿದು ಹಾನಿ ಮಾಡುತ್ತಿದೆ.
ನದಿ ದಂಡೆಯ ಎತ್ತರ ಹೆಚ್ಚಳಕ್ಕೆ ಆಗ್ರಹ
ಶಾಲಾ ಮಕ್ಕಳು ಈ ವಠಾರದಲ್ಲಿ ಸುತ್ತಾಡುತ್ತಿರುವುದರಿಂದ ಅನಾಹುತ ಸಂಭವಿಸುವ ಮುನ್ನ ಶಿಥಿಲಗೊಂಡ ನದಿಯ ದಂಡೆಯನ್ನು ಪುನರ್ ನಿರ್ಮಿಸಿ ದಂಡೆಯ ಎತ್ತರವನ್ನು ಹೆಚ್ಚಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.