ಹಾವೇರಿ: ರೂಪಾಂತರಗೊಂಡಿರುವ ಕೊರೊನಾ ವೈರಸ್‌ನ ಎರಡನೇ ಅಲೆ ಸಂದರ್ಭದಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿರುವ ಬ್ಲ್ಯಾಕ್ ಫಂಗಸ್ ಸೋಂಕಿಗೆ ತುತ್ತಾಗಿರುವವರ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತು ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇತ್ತೀಚೆಗೆ ಬ್ಲಾಕ್ ಫಂಗಸ್ ಸೋಂಕು ಹೆಚ್ಚಾಗಿ ಕಾಣಿಸುತ್ತಿದೆ. ಈ ಸೋಂಕು ತಗುಲಿದ ವ್ಯಕ್ತಿಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ನಿರ್ಮಾಣ ಮಾಡಬೇಕು. ಈ ಸೋಂಕಿಗೆ ಚಿಕಿತ್ಸೆ ನೀಡಲು ಬೇಕಾದ ಔಷಧಗಳನ್ನು ಸಮರ್ಪಕವಾಗಿ ಸಂಗ್ರಹ ಮಾಡಿಟ್ಟುಕೊಳ್ಳಬೇಕೆಂದು ಸೂಚನೆ ನೀಡಿದರು. ಮೂರನೇ ಅಲೆಯಲ್ಲಿ ಮಕ್ಕಳನ್ನು ರಕ್ಷಿಸಲು ವೈದ್ಯರು ಸನ್ನದ್ಧರಾಗಬೇಕು. ಮುಂದಿನ ದಿನಗಳಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ, ಮೂರನೇ ಅಲೆ ಎದುರಿಸಲು ಜಿಲ್ಲೆಯ ಆರೋಗ್ಯ ಇಲಾಖೆ ಸಿದ್ಧವಾಗಬೇಕು. ಮಕ್ಕಳ ವಾರ್ಡ್‌ಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಬೇಕೆಂದರು.
ಮಕ್ಕಳ ವಾರ್ಡ್‌ನಲ್ಲಿ ಐಸಿಯು ಚಿಕಿತ್ಸಾ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಆ ಮೂಲಕ ಮಕ್ಕಳ ಚಿಕಿತ್ಸೆಗಾಗಿ ಸಕಲ ರೀತಿಯಲ್ಲಿ ಸಜ್ಜಾಗಿರಬೇಕು. ಜಿಲ್ಲೆಗೆ ಈಗಾಗಲೇ 1000 ಐಸಿಯು ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಮಂಜೂರಾಗಿದೆ. ಕಾಮಗಾರಿಯನ್ನು ಬೇಗ ಮುಗಿಸುವಂತೆ ಸೂಚಿಸಲಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಇನ್ನೊಂದು 1000 ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಅನ್ನು ಜಿಲ್ಲೆಗೆ ತರಲು ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಬೊಮ್ಮಾಯಿ ಹೇಳಿದರು.
ಸೋಂಕಿತರು ಗುಣಮುಖರಾದ ನಂತರ ಅವರ ಆರೋಗ್ಯದ ಮೇಲೆ ಸದಾ ನಿಗಾ ಇರಿಸಬೇಕು. ಅವರನ್ನು ಕಾಲಕಾಲಕ್ಕೆ ತಪಾಸಣೆ ಮಾಡುವ ವ್ಯವಸ್ಥೆ ಮಾಡಿ. ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡುವ ಸಂದರ್ಭದಲ್ಲಿಯೇ ಆ ವ್ಯಕ್ತಿಯ ಆರೋಗ್ಯದ ತೀವ್ರತೆ ಗುರುತಿಸಿ ಸೋಂಕಿತರನ್ನು ಯೋಜನಾಬದ್ಧವಾಗಿ ವಿಂಗಡಣೆ ಮಾಡಬೇಕು. ಆಕ್ಸಿಜನ್ ಅನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಎಲ್ಲಿಯೂ ಆಕ್ಸಿಜನ್ ವ್ಯಯ ಆಗದಂತೆ ನಿಗಾ ವಹಿಸಬೇಕೆಂದು ವೈದ್ಯರಿಗೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿ ಕಾರಿ ಮಹಮ್ಮದ್ ರೋಷನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪಿ.ಆರ್.ಹಾವನೂರ ಮತ್ತಿತರರು ಇದ್ದರು.