Advertisement

ಜಿಲ್ಲೆಯ ಎಂಟು ವಲಯಗಳಲ್ಲಿ ಪ್ರತ್ಯೇಕ ತಂಡ ರಚನೆ

09:01 PM May 22, 2019 | Team Udayavani |

ವಿಶೇಷ ವರದಿ-ಮಹಾನಗರ: ಕರಾವಳಿ ಪ್ರದೇಶಕ್ಕೆ ಮುಂಗಾರು ಕಾಲಿಡಲು ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಇಲಾಖೆ ಈಗಾಗಲೇ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ಎಂಟು ವಲಯಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಂಡವೊಂದನ್ನು ರಚನೆ ಮಾಡಿದೆ.

Advertisement

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮಟ್ಟದಲ್ಲಿ ವಿಕೋಪ ನಿರ್ವಹಣ ಸಮಿತಿ ಇದ್ದು, ಈ ಮೂಲಕ ದ.ಕ. ಜಿಲ್ಲಾ ಅರಣ್ಯ ಇಲಾಖೆಯ ವಲಯಗಳಾದ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ಪಂಜ, ಸುಳ್ಯ, ಸುಬ್ರಹ್ಮಣ್ಯದಲ್ಲಿ ಆಯಾ ವಲಯಾಧಿಕಾರಿಗಳ ಮುಂದಾಳತ್ವದಲ್ಲಿ ಈಗಾಗಲೇ ತಂಡವೊಂದನ್ನು ಸಿದ್ಧಪಡಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ವಿಕೋಪ ನಿರ್ವಹಣ ಸಮಿತಿಯ ವಾಟ್ಸಪ್‌ ಗ್ರೂಪ್‌ ಇದ್ದು, ಇದರಲ್ಲಿ ಕಂದಾಯ, ಅರಣ್ಯ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಇರುತ್ತಾರೆ. ಈ ಗ್ರೂಫ್‌ಗೆ ಪ್ರತೀ ವಲಯದ ರೇಂಜ್‌ ಆಫೀಸರ್ಗಳ ದೂರವಾಣಿ ಸಂಖ್ಯೆಯನ್ನು ಸೇರಿಸಲಾಗಿದೆ. ಯಾವುದೇ ಪ್ರದೇಶಗಳಲ್ಲಿ ಮರ ಬಿದ್ದರೂ ಈ ಗ್ರೂಫ್‌ ಮುಖೇನ ವಿಷಯ ತಿಳಿಸಲಾಗುತ್ತದೆ.

ಆ ವೇಳೆ ಮೇಲಧಿಕಾರಿಗಳ ಅನುಮತಿಯೊಂದಿಗೆ ತಂಡವೊಂದು ಸ್ಥಳಕ್ಕೆ ತೆರಳಿ, ಕಾರ್ಯಾಚರಣೆ ನಡೆಸುತ್ತದೆ.

24 ಗಂಟೆಯೂ ನಿಗಾ
ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಮತ್ತು ಅಪಾಯಕಾರಿ ಮರಗಳನ್ನು ತೆರವು ಮಾಡುವಲ್ಲಿ ಈ ತಂಡ ಸನ್ನದ್ಧವಾಗಲಿದೆ. ರಸ್ತೆಯತ್ತ ಬಾಗಿ ನಿಂತ ಅಪಾಯಕಾರಿ ಮರಗಳನ್ನು ಈಗಾಗಲೇ ಪಟ್ಟಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ತೆರವು ಮಾಡಲಾಗುತ್ತದೆ. ಅರಣ್ಯ ಇಲಾಖೆಯ ಪ್ರತೀ ವಿಭಾಗಗಳ ತಂಡದಲ್ಲಿ ಓರ್ವ ಅರಣ್ಯ ಅಧಿಕಾರಿ, ಗಾರ್ಡ್‌, ಇಬ್ಬರು ವಾಚರ್‌ಗಳಿದ್ದ ನಾಲ್ಕು ಜನರ ತಂಡ ಇದ್ದು, ಈ ತಂಡ ದಿನದ 24 ಗಂಟೆಯೂ ನಿಗಾ ವಹಿಸುತ್ತಿದೆ.

Advertisement

ಅಗತ್ಯ ಪರಿಕರ ಒದಗಿಸಲಾಗಿದೆ
ಇಲಾಖೆಯ ವತಿಯಿಂದ ಮರದ ಗೆಲ್ಲು ಕಡಿಯಲು, ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಉದ್ದೇಶದಿಂದ ಪ್ರತೀ ತಂಡಕ್ಕೆ ವ್ಯಾನ್‌, ಕಟ್ಟಿಂಗ್‌ ಮೆಷಿನ್‌, ಗರಗಸ, ಟಾರ್ಚ್‌ ಸಹಿತ ಮತ್ತಿತರ ಪರಿಕರಗಳನ್ನು
ಒದಗಿಸಿಕೊಡಲಾಗಿದೆ. ಮಳೆ ಬಂದ ವೇಳೆ ಅಥವಾ ಯಾವುದೇ ಸಮಯದಲ್ಲಿ ಸಾರ್ವಜನಿಕರಿಂದ ದೂರು ಬಂದರೆ, ಈ ನಾಲ್ಕು ಜನರ ತಂಡ ತ್ವರಿತವಾಗಿ ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ.

ನಗರದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಪಾಲಿಕೆ ಸೂಚಿಸಿದ ಕೊಟ್ಟಾರ, ಪೊಲೀಸ್‌ ಲೇನ್‌, ಕೊಟ್ಟಾರ, ಉರ್ವ ಸ್ಟೋರ್‌, ಅತ್ತಾವರ, ಪಾಂಡೇಶ್ವರ ಸಹಿತ ಇನ್ನಿತರ ಪ್ರದೇಶಗಳಲ್ಲಿದ್ದ ಅಪಾಯಕಾರಿ ಮರದ ಗೆಲ್ಲುಗಳನ್ನು ಈಗಾಗಲೇ ಕಡಿಯಲಾಗುತ್ತಿದೆ.

ಸಾರ್ವಜನಿಕ ಪ್ರದೇಶದಲ್ಲಿ ಅಪಾಯಕಾರಿ ಮರಗಳಿದ್ದಲ್ಲಿ ಅಥವಾ ಮರ ಬಿದ್ದು ವಿದ್ಯುತ್‌ ಕಂಬ, ತಂತಿಗಳು ಹಾನಿಯಾಗುವ ಸಂಭವವಿದ್ದಲ್ಲಿ ಆಯಾ ಸ್ಥಳೀಯಾಡಳಿತದ ಸಂಬಂಧಿತ ಅಧಿಕಾರಿಗಳು ಅರಣ್ಯ ಇಲಾಖೆಯನ್ನು ಸಂಪರ್ಕಿಸಬೇಕು.

ಅನುಮತಿ ಪಡೆಯುವುದು ಅಗತ್ಯ
ಒಂದು ವೇಳೆ ಇಂತಹ ಮರಗಳು ತಮ್ಮ ಖಾಸಗಿ ಜಾಗದಲ್ಲಿ ಇದ್ದಲ್ಲಿ, ಆ ಜಾಗದ ಸಂಬಂಧಿತ ವ್ಯಕ್ತಿಗಳೇ ಕಡಿಸಬೇಕು. ಆದರೆ, ಹೀಗೆ ಕಡಿಯುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳವುದು ಅತ್ಯಗತ್ಯ.

 ಅರಣ್ಯ ಇಲಾಖೆ ಸಜ್ಜು
ಮುಂಬರುವ ಮಾನ್ಸೂನ್‌ನಲ್ಲಿ ಅಪಾಯಗಳನ್ನು ತಡೆಯುವ ಉದ್ದೇಶದಿಂದ ಅರಣ್ಯ ಇಲಾಖೆ ಸಜ್ಜಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಇಲಾಖೆ ಈಗಾಗಲೇ ಕೆಲವೊಂದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲಾ ವಲಯಗಳಲ್ಲಿ ತಂಡವೊಂದನ್ನು ರಚಿಸಲಾಗಿದೆ. ಈ ತಂಡ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.
– ಕರಿಕಾಳನ್‌,
ದ.ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next