ಮಡಿಕೇರಿ: ಪ್ರತ್ಯೇಕ ಕಾವೇರಿ ತಾಲ್ಲೂಕು ಹಾಗೂ ಪೊನ್ನಂಪೇಟೆ ತಾಲ್ಲೂಕು ರಚನೆಯ ಹೋರಾಟಕ್ಕೆ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಬೆಂಬಲ ಸೂಚಿಸಿದೆ. ಜಿಲ್ಲೆಗೆ ಐದು ತಾಲ್ಲೂಕುಗಳ ಅಗತ್ಯವಿದೆ ಎಂದು ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಎಂ.ಚಂಗಪ್ಪ ತಿಳಿಸಿದ್ದಾರೆ.
ಸಂಘದ ಕಾರ್ಯಕಾರಿ ಸಮಿತಿ ಸಭೆ ವಿರಾಜಪೇಟೆಯ ಹಾತೂರಿನ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೌಗೋಳಿಕವಾಗಿ ಮೂರು ತಾಲ್ಲೂಕು, ಮೂವರು ಶಾಸಕರುಗಳು ಹಾಗೂ ಸಂಸದರನ್ನು ಹೊಂದಿದ್ದ ಕೊಡಗು ಜಿಲ್ಲೆ ಈಗ ಇಬ್ಬರು ಶಾಸಕರನ್ನು ಹೊಂದುವಂತಾಗಿದೆ. ಸಂಸತ್ ಸ್ಥಾನ ಕೂಡ ಹಂಚಿ ಹೋಗಿದೆ. ಇವೆಲ್ಲವನ್ನು ಅವಲೋಕಿಸಿದಾಗ ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಪ್ರಸ್ತುತ ಇರುವ ಮೂರು ತಾಲೂಕನ್ನು 5 ತಾಲ್ಲೂಕಿಗೆ ವಿಸ್ತರಿಸುವ ಅಗತ್ಯವಿದೆ ಎಂದರು. ಪ್ರತ್ಯೇಕ ಕಾವೇರಿ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು ರಚನೆಯ ಹೋರಾಟದಲ್ಲಿ ಒಕ್ಕಲಿಗರ ಸಂಘ ಪಾಲ್ಗೊಳ್ಳಲಿದೆ ಎಂದು ಚಂಗಪ್ಪ ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಒಕ್ಕಲಿಗ ಜನಾಂಗದ ಕುಟುಂಬಗಳಿದ್ದು, ಸರ್ವರನ್ನು ಸಂಘದ ಸದಸ್ಯರನ್ನಾಗಿ ಮಾಡಲು ಸ್ವಯಂಪ್ರೇರೀತರಾಗಿ ಪ್ರಯತ್ನಿಸುವಂತೆ ಸಲಹೆ ನೀಡಿದರು. ಮಡಿಕೇರಿ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಸಂಘಕ್ಕೆ ಸುಮಾರು ಮೂರು ಎಕರೆ ಪೈಸಾರಿ ಜಾಗವನ್ನು ಗುರುತಿಸಿ ಅದನ್ನು ಸರಕಾರದ ಮಟ್ಟದಲ್ಲಿ ಮಂಜೂರು ಮಾಡಿಸಿಕೊಳ್ಳಲು ಪ್ರಯತ್ನಿಸ ಲಾಗುವುದು. ಅದು ಸಾಧ್ಯವಾಗದಿದ್ದಲ್ಲಿ ಜಿಲ್ಲೆಯ ಮೂರು ತಾಲ್ಲೂಕಿನ ಒಕ್ಕಲಿಗ ಕುಲಬಾಂಧವರಲ್ಲಿ ಆರ್ಥಿಕ ಸಹಕಾರ ಪಡೆದು ಪರ್ಯಾಯ ವ್ಯವಸ್ಥೆ ಮಾಡುವುದು ಸೂಕ್ತವೆಂದು ಚಂಗಪ್ಪ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಯಿಂದ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಪ್ರತಿನಿಧಿಸುತ್ತಿರುವವರು ಜಿಲ್ಲೆಯ ಹೊರಗಿನ ಒಕ್ಕಲಿಗರಾಗಿರುತ್ತಾರೆ. ಮುಂದಿನ ಬಾರಿ ಕೊಡಗಿನ ಒಕ್ಕಲಿಗ ಬಾಂಧವರಿಗೆ ಆದ್ಯತೆ ನೀಡುವ ಹಾಗೆ ಆಗಬೇಕು ಎಂದು ಸಭೆ ಒಮ್ಮತದ ಅಭಿಪ್ರಾಯ ತೆಗೆದುಕೊಂಡಿತು. ಕೊಡಗು ಜಿಲ್ಲೆಯಲ್ಲಿ ಒಕ್ಕಲಿಗ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಇದಕ್ಕೆ ಕಾರಣವಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.
ಸಂಘದ ಬೆಳವಣಿಗೆ ಕುರಿತು ಹಿರಿಯ ಕುಲಬಾಂಧವರಾದ ಡಿ.ಎಸ್. ಸುಬ್ರಮಣಿ, ವಿ.ಎಲ್. ಸುರೇಶ್, ಹಾತೂರಿನ ರಾಮಚಂದ್ರ, ದೊಡ್ಡ ಮಲೆ¤ಯ ಶ್ರೀಕೃಷ್ಣ, ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎ.ಆರ್.ಮುತ್ತಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಬಿ.ಇ. ಶಿವಯ್ಯ, ವಿ.ಪಿ. ಸುರೇಶ್, ಎನ್.ಕೆ. ಅಪ್ಪಸ್ವಾಮಿ, ಕೊಡ್ಲಿಪೇಟೆಯ ಜಯರಾಂ ಮೊದಲಾದವರು ದಾನಿಗಳಾದ ಡಿ.ಎ. ಸುಬ್ರಮಣಿ ಸಲಹೆ ನೀಡಿದರು.
ಸಂಘದ ಗೌರವ ಕಾರ್ಯದರ್ಶಿ ಪಿ. ಉಮೇಶ್ ಕುಮಾರ್ ಕಳೆದ ಮಹಾಸಭೆಯ ವರದಿಯನ್ನು ಕಾರ್ಯಕಾರಿ ಸಮಿತಿಯ ಮುಂದಿಟ್ಟರು. ವರದಿಗೆ ಸಭೆ ಅಂಗೀಕಾರ ನೀಡಿತು. ಸಂಘದ ಉಪಾಧ್ಯಕ್ಷರಾದ ವಿ.ಕೆ. ದೇವಲಿಂಗಯ್ಯ ಸ್ವಾಗತಿಸಿದರು.