Advertisement
ಹೌದು, ವಿದ್ಯುತ್‌ಚಾಲಿತ ಬಸ್‌ಗಳ ಕಾರ್ಯಾಚರಣೆ, ನಿರ್ವಹಣೆ, ನಿಲುಗಡೆಗಾಗಿ ಪ್ರತ್ಯೇಕ ನಿಲ್ದಾಣಗಳನ್ನು ಸ್ಥಾಪಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉದ್ದೇಶಿಸಿದೆ. ಹಾಗಂತ, ಇವುಗಳನ್ನು ಹೊಸದಾಗಿ ನಿರ್ಮಿಸುವುದಿಲ್ಲ; ಬದಲಿಗೆ ಇರುವ ಘಟಕಗಳಿಗೆ ಕತ್ತರಿ ಹಾಕಿ, ಅವುಗಳ ಜಾಗಕ್ಕೆ ಈ “ಪ್ರತ್ಯೇಕ ನಿಲ್ದಾಣ’ಗಳನ್ನು ಪರಿಚಯಿಸಲಾಗುತ್ತಿದೆ.
Related Articles
Advertisement
ಹಾಗಾಗಿ, ಈ ಪರಿವರ್ತನೆಯು ಹಲವು ಘಟಕಗಳ ನೌಕರರ ನಿದ್ದೆಗೆಡಿಸಿದೆ. ಘಟಕ ಅಥವಾ ನಿಲ್ದಾಣದ ಆಸುಪಾಸಿನಲ್ಲೇ ನೌಕರರು ಬಾಡಿಗೆ ಅಥವಾ ಸ್ವಂತ ಮನೆಗಳನ್ನು ಮಾಡಿಕೊಂಡಿದ್ದಾರೆ. ಮಕ್ಕಳ ಶಾಲೆ ಕೂಡ ಹತ್ತಿರದಲ್ಲೇ ಇರುತ್ತದೆ. ಒಂದು ವೇಳೆ ದೂರದಲ್ಲಿ ಎತ್ತಂಗಡಿ ಮಾಡಿದರೆ, ಏನು ಮಾಡುವುದು? ಈ ಪ್ರಕ್ರಿಯೆಯಲ್ಲಿ ಹೆಚ್ಚು ಸಂಚಾರದಟ್ಟಣೆ ಇರುವ ಮಾರ್ಗಗಳಿಗೆ ಹಾಕುತ್ತಾರೆಯೇ? ಅಥವಾ ಈಗಿರುವ ಮಾರ್ಗವನ್ನೇ ನೀಡುತ್ತಾರೆಯೇ? ಇಂತಹ ಹಲವು ಪ್ರಶ್ನೆಗಳು ಚಾಲಕರು ಮತ್ತು ವರ್ಕ್‌ಶಾಪ್‌ನಲ್ಲಿರುವ ತಾಂತ್ರಿಕ ಸಿಬ್ಬಂದಿಯನ್ನು ಕಾಡುತ್ತಿವೆ.
ಹೆಚ್ಚಲಿದೆಯೇ ಡೆಡ್ ಮೈಲೇಜ್?: ಅಷ್ಟೇ ಅಲ್ಲ ಬಸ್‌ಗಳ ಸ್ಥಳಾಂತರದ ಬೆನ್ನಲ್ಲೇ “ಡೆಡ್ ಮೈಲೇಜ್’ ಹೆಚ್ಚಾಗುವ ಸಾಧ್ಯತೆಯೂ ಇದ್ದು, ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆ ಅಧಿಕಾರಿಗಳಿಗೆ ಇದು ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಘಟಕಗಳಿಂದ ನಿಲ್ದಾಣಗಳು ಅತ್ಯಂತ ಹತ್ತಿರದಲ್ಲಿರುವ ಡಿಪೋಗಳನ್ನೇ ಗುರುತಿಸಿ, ಪರಿವರ್ತನೆಗೆ ಕೈಹಾಕಲಾಗುತ್ತಿದೆ. ಈ ಮೂಲಕ ಸಾಧ್ಯವಾದಷ್ಟು ನಷ್ಟದ ಹೊರೆಯನ್ನು ಕಡಿಮೆ ಮಾಡುವುದಾಗಿದೆ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು. ಸಾಮಾನ್ಯವಾಗಿ ಕಾರ್ಯಾಚರಣೆ ಮುಗಿದ ಮೇಲೆ
ಬಿಎಂಟಿಸಿ ಬಸ್‌ಗಳು ಸಂಬಂಧಪಟ್ಟ ಘಟಕಗಳಲ್ಲಿ ತಂಗುತ್ತವೆ. ಅಲ್ಲಿಂದ ನಿಲ್ದಾಣಕ್ಕೆ ಬಂದು, ನಂತರ ವಾಣಿಜ್ಯ ಸೇವೆ ಆರಂಭಿಸುತ್ತವೆ. ಈ ಘಟಕ ಮತ್ತು ನಿಲ್ದಾಣದ ನಡುವಿನ ಅಂತರವನ್ನು ಡೆಡ್ ಮೈಲೇಜ್ ಎನ್ನಲಾಗುತ್ತದೆ. ಇದರ ಪ್ರಮಾಣ ಬಿಎಂಟಿಸಿಯಲ್ಲಿ ಶೇ. 4ರಿಂದ 5ರಷ್ಟಿದ್ದು, ವಾರ್ಷಿಕ 8ರಿಂದ 10 ಕೋಟಿ ರೂ. ಇದಕ್ಕಾಗಿ ಖರ್ಚಾಗುತ್ತದೆ. ಒಂದು ವೇಳೆ ಬೇರೆ ಘಟಕಗಳಿಂದ ನಿಲ್ದಾಣಕ್ಕೆ ಬರುವುದಾದರೆ, ಆಗ ಸಹಜವಾಗಿ ಡೆಡ್ ಮೈಲೇಜ್ ಪ್ರಮಾಣ ಹೆಚ್ಚಲಿದೆ ಎನ್ನುತ್ತಾರೆ ಸಂಸ್ಥೆ ಅಧಿಕಾರಿಗಳು.
ನಿರೀಕ್ಷೆ ಮೀರಿ ಕನಿಷ್ಠ ದರ ನಿಗದಿ : ಈ ಮಧ್ಯೆ ವಿದ್ಯುತ್‌ಚಾಲಿತ ಬಸ್ ಗುತ್ತಿಗೆಗೆ ನಿರೀಕ್ಷೆ ಮೀರಿ ಕನಿಷ್ಠ ದರ ನಿಗದಿಯಾಗಿರುವುದರಿಂದ ಬಿಎಂಟಿಸಿಯು ಮರುಟೆಂಡರ್ ಕರೆದಿದೆ. 16 ದಿನಗಳಲ್ಲಿ ಮರುಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅದರಲ್ಲಿ ನಿಗದಿಯಾಗುವ ದರದಂತೆ ಇ-ಬಸ್‌ಗಳನ್ನು ಲೀಸ್ ರೂಪದಲ್ಲಿ ಪೆಡಯಲಾಗುವುದು. ನಂತರದಲ್ಲಿ ಆ ಬಸ್‌ಗಳ ಕಾರ್ಯಾಚರಣೆಗೆ ಪ್ರತ್ಯೇಕ ನಿಲ್ದಾಣಗಳನ್ನು ಮೀಸಲಿಡಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಸ್ಪಷ್ಟಪಡಿಸಿದರು. ಹವಾನಿಯಂತ್ರಿತ ಇ-ಬಸ್‌ಗೆ ಪ್ರತಿ ಕಿ.ಮೀ.ಗೆ 89.6 ರೂ. ಕನಿಷ್ಠ ದರ ನಿಗದಿಯಾಗಿತ್ತು.
ವಿದ್ಯುತ್‌ಚಾಲಿತ ಬಸ್‌ಗಳಿಗಾಗಿಯೇ ಪ್ರತ್ಯೇಕ ಘಟಕಗಳನ್ನು ಮೀಸಲಿಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸದ್ಯ ಮೂರು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದ್ದು, ಸಾಧಕ-ಬಾಧಕಗಳ ಅಧ್ಯಯನ ನಡೆದಿದೆ. ಡೆಡ್ ಮೈಲೇಜ್ ಹೆಚ್ಚಾಗದಿರುವ ಡಿಪೋಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. –ಸಿ.ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು
– ವಿಜಯಕುಮಾರ್ ಚಂದರಗಿ