Advertisement
ಒಂದು ವೇಳೆ ಈ ಬಾರಿಯ ಐಪಿಎಲ್ ಪಂದ್ಯಾವಳಿ ರದ್ದುಗೊಂಡರೆ ಬಿಸಿಸಿಐ 3,800 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಲಿದೆ. ಹಾಗೆಯೇ ಇದರ ಪ್ರಸಾರದ ಹೊಣೆ ಹೊತ್ತಿರುವ ಸ್ಟಾರ್ ಸ್ಪೋರ್ಟ್ಸ್ ಗೆ ಅಂದಾಜು 3,269 ಕೋಟಿ ರೂ. ಮೊತ್ತದ ಬರೆ ಬೀಳಲಿದೆ. ಅದು 2018ರಲ್ಲಿ ಒಟ್ಟು 6,138 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು.ಇದೇ ವೇಳೆ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ, ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದಲೂ ಬಿಸಿಸಿಐಗೆ ಅಪಾರ ನಷ್ಟ ಸಂಭವಿಸಿದೆ.
ಈ ಅಪಾರ ಪ್ರಮಾಣದ ನಷ್ಟವನ್ನು ಕಡಿಮೆ ಮಾಡಲು ಬಿಸಿಸಿಐ ಮುಂದಿರುವ ಒಂದು ಉಪಾಯವೆಂದರೆ, ಎರಡು ತಂಡಗಳನ್ನು ರಚಿಸಿ ಏಕಕಾಲದಲ್ಲಿ ವಿವಿಧ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಆಡಿಸುವುದು. ಉದಾಹರಣೆಗೆ, ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಪ್ರತ್ಯೇಕ ತಂಡಗಳನ್ನು ರಚಿಸಿ ಬೇರೆ ಬೇರೆ ಕಡೆ ಸರಣಿಗಳನ್ನು ನಡೆಸಿದರೆ ಆಗ ಕ್ರಿಕೆಟ್ ಮಂಡಳಿ ಆರ್ಥಿಕವಾಗಿ ಚೇತರಿಸಿಕೊಳ್ಳಲಿದೆ. ಹಾಗೆಯೇ ವೀಕ್ಷಕರಿಗೂ ಕ್ರಿಕೆಟ್ ಬರಗಾಲದ ಕೊರತೆಯನ್ನು ನೀಗಿಸಿ ದಂತಾಗುತ್ತದೆ. ಪ್ರಸಾರಕರಿಗೂ ದೊಡ್ಡ ಮೊತ್ತ ವಾಪಸಾಗಲಿದೆ. ಇಂಥ ದೊಂದು ಯೋಜನೆ ಕುರಿತು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮದ ವರೊಂದಿಗೆ ಹೇಳಿಕೊಂಡಿದ್ದಾರೆ. ಇದೇ ಮೊದಲೇನಲ್ಲ
ಹಿಂದೊಮ್ಮೆ ಆಸ್ಟ್ರೇಲಿಯ ಇಂಥದೇ ಪ್ರಯೋಗ ಮಾಡಿತ್ತು. 2017ರ ಫೆಬ್ರವರಿಯಲ್ಲಿ ಆಸೀಸ್ ಏಕಕಾಲದಲ್ಲಿ 2 ಪ್ರತ್ಯೇಕ ತಂಡಗಳನ್ನು ರಚಿಸಿ ಸರಣಿ ಏರ್ಪಡಿಸಿತ್ತು. ಕಾಂಗರೂ ನಾಡಿನ ಟಿ20 ತಂಡ ಫೆ. 22ರಂದು ಶ್ರೀಲಂಕಾ ವಿರುದ್ಧ ಅಡಿಲೇಡ್‌ನಲ್ಲಿ ಟಿ20 ಪಂದ್ಯ ಆಡಿದರೆ, ಮರುದಿನ ಮತ್ತೂಂದು ಆಸೀಸ್ ತಂಡ ಭಾರತದ ವಿರುದ್ಧ ಪುಣೆಯಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಲಿಳಿದಿತ್ತು! ಭಾರತವೀಗ ಇಂಥದೇ ಪ್ರಯೋಗಕ್ಕೆ ಮುಂದಾಗುವ ಎಲ್ಲ ಸಾಧ್ಯತೆಗಳಿವೆ.