Advertisement

ಪ್ರತ್ಯೇಕ ಧರ್ಮ: ಸಂಪುಟ ಒಪ್ಪಿಗೆಗೆ ಕಸರತ್ತು

06:55 AM Mar 18, 2018 | Team Udayavani |

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಕುರಿತು ಮಾರ್ಚ್‌ 19 ರಂದು ನಡೆಯುವ ಸಂಪುಟ ಸಭೆಯಲ್ಲಿ ಯಾವುದೇ ವಿರೋಧ ವ್ಯಕ್ತಪಡಿಸದಂತೆ ಲಿಂಗಾಯತ ಮಠಾಧೀಶರ ಮೂಲಕ ಸಚಿವರುಗಳ ಮನವೊಲಿಸುವ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ.

Advertisement

ವೀರಶೈವ ಪರವಾಗಿರುವ  ಈಶ್ವರ್‌ಖಂಡ್ರೆ ಹಾಗೂ ಎಸ್‌.ಎಸ್‌.ಮಲ್ಲಿಕಾರ್ಜುನ ಅವರನ್ನು ಭಾಲ್ಕಿ ಪಟ್ಟದ ದೇವರು ಮತ್ತು ಸಿರಿಗೆರೆ ಸ್ವಾಮೀಜಿಗಳ ಮೂಲಕ ಮನವೊಲಿಸುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.

ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಲಿಂಗಾಯತರಿಗೆ ಅಲ್ಪ ಸಂಖ್ಯಾತ ಮಾನ್ಯತೆ ನೀಡುವ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೆಚ್ಚಾಗಿದ್ದು,  ಆ ರೀತಿಯ ತೀರ್ಮಾನ ಕೈಗೊಂಡರೆ ರಾಜ್ಯಾದ್ಯಂತ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ವೀರಶೈವ ಮಠಾಧೀಶರು ನೀಡಿರುವುದರಿಂದ ಸರ್ಕಾರ ಸಂದಿಗತೆಯಲ್ಲಿ ಸಿಲುಕಿಕೊಂಡಿದೆ. ಹೀಗಾಗಿ, ಮಠಾಧೀಶರ ಮೂಲಕ ಮನವೊಲಿಕೆ ಮಾಡಿಸುವ ಪ್ರಯತ್ನ ನಡೆದಿದೆ.

ಸರ್ಕಾರಕ್ಕಿರುವ ಆಯ್ಕೆ
ವೀರಶೈವ ಲಿಂಗಾಯತ ಎರಡೂ ಬಣಗಳು ತಮ್ಮ ವಾದ ಪಟ್ಟು ಹಿಡಿದಿರುವುದರಿಂದ ನ್ಯಾ. ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿಯ ವರದಿಯನ್ನು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಲು ಸಂಪುಟ ಉಪ ಸಮಿತಿ ರಚನೆ ಮಾಡಬಹುದು. ಆದರೆ, ಅದಕ್ಕೆ ಲಿಂಗಾಯತ ಬಣದ ಸಚಿವರು ಒಪ್ಪುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ವೀರಶೈವ ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತರ ಮಾನ್ಯತೆ ನೀಡಲು ರಾಜ್ಯಸರ್ಕಾರಕ್ಕೆ ಅಧಿಕಾರ ಇದೆ ಎಂದು ಸಮಿತಿ ಶಿಫಾರಸ್ಸು ಮಾಡಿರುವುದರಿಂದ ರಾಜ್ಯ ಸರ್ಕಾರವೇ ಎರಡೂ ಬಣಗಳನ್ನು ಸೇರಿಸಿ ಅಲ್ಪ ಸಂಖ್ಯಾತರ ಮಾನ್ಯತೆ ನೀಡಬಹುದು.

Advertisement

ಸರ್ಕಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ವೀರಶೈವ ಲಿಂಗಾಯತ ಎರಡೂ ಬಣಗಳ ಹೆಸರು ಸೇರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಹುದು. ಆದರೆ, ಇದನ್ನು ಲಿಂಗಾಯತ ಬಣದ ಸಚಿವರು ವಿರೋಧಿಸುವ ಸಾಧ್ಯತೆ ಇದೆ.

ಇಂದು ವಿರಕ್ತ ಮಠಾಧೀಶರಿಂದ ಸಿಎಂ ಭೇಟಿ:
ಈ ಮಧ್ಯೆ, ನ್ಯಾ. ನಾಗಮೋಹನ್‌ ದಾಸ್‌ ಸಮಿತಿ ನೀಡಿರುವ ವರದಿ ಒಪ್ಪಿಕೊಳ್ಳದಂತೆ ವೀರಶೈವ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ ಬೆನ್ನಲ್ಲೇ ಭಾನುವಾರ ಸಂಜೆ ಲಿಂಗಾಯತ ಪ್ರತ್ಯೇಕ ಧರ್ಮದ ಪರ ಹೋರಾಡುತ್ತಿರುವ ವಿರಕ್ತ ಮಠಾಧೀಶರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಲಿಂಗಾಯತ ಪ್ರತ್ಯೇಕ ಧರ್ಮ ಘೋಷಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವಂತೆ ಒತ್ತಡ ಹೇರಲು ಭೇಟಿಗೆ ತೀರ್ಮಾನಿಸಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭೆಯ ನೇತೃತ್ವದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಗದಗಿನ ತೋಂಟದಾರ್ಯ ಸ್ವಾಮೀಜಿ ಸೇರಿದಂತೆ ನೂರೈವತ್ತಕ್ಕೂ ಹೆಚ್ಚು ವಿರಕ್ತ ಮಠಾಧೀಶರು ನಿಯೋಗದಲ್ಲಿ ಇರಲಿದ್ದಾರೆ.

ವೀರಶೈವ ಮುಖಂಡರ ಸಭೆ
ಇದಕ್ಕೆ ಪರ್ಯಾಯವಾಗಿ ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಏನು ಮಾಡಬೇಕೆಂಬ ಕುರಿತಂತೆ ವೀರಶೈವ ಮಹಾಸಭೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಭಾನುವಾರ ವೀರಶೈವ ಮುಖಂಡರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಸಂಪುಟದಲ್ಲಿ ಸಚಿವರಾದ ಈಶ್ವರ ಖಂಡ್ರೆ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರಿಗೆ ವೀರಶೈವದ ಪರವಾಗಿ ಪಟ್ಟು ಹಿಡಿಯಲು ಪೂರಕ ಮಾಹಿತಿ ನೀಡಲು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next