Advertisement

ಡ್ರಗ್ಸ್‌, ಸೈಬರ್‌ಕ್ರೈಂ ಪ್ರಕರಣಗಳಿಗೆ ಪ್ರತ್ಯೇಕ ಪೊಲೀಸ್‌ ಠಾಣೆ

05:35 PM Jul 29, 2017 | Karthik A |

ಮಂಗಳೂರು: ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿ ಪಡಿಸಲು ಆಯ್ಕೆಯಾಗಿರುವ ಮಂಗಳೂರು ನಗರ ತ್ವರಿತ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದರೆ, ಇನ್ನೊಂದೆಡೆ ಇಲ್ಲಿನ ಯುವಜನರು ಗಾಂಜಾ, ಹೆರಾಯಿನ್‌ ಮುಂತಾದ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಈ ಬಗ್ಗೆ ಅನೇಕ ದೂರುಗಳು ಬರುತ್ತಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಅಧಿಕಾರಿಗಳು ಸಾಮಾಜಿಕ ಜಾಲ ತಾಣದ ಅಪರಾಧಗಳು ಮತ್ತು ಮಾದಕ ದ್ರವ್ಯದ ಅಕ್ರಮಮಟ್ಟ ಹಾಕಲು ಪ್ರತ್ಯೇಕ ಎರಡು ಠಾಣೆಗಳನ್ನು ಸ್ಥಾಪಿಸಿದ್ದಾರೆ. ಸಾಮಾಜಿಕ ಜಾಲತಾಣ, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಉಲ್ಲಂಘನೆ, ಗಾಂಜಾ, ಡ್ರಗ್ಸ್‌ ಅಕ್ರಮವನ್ನು ಮಟ್ಟಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಳೆದ ಜೂ.2ರಂದು ಅಧಿಸೂಚನೆಯೊಂದನ್ನು ಹೊರಡಿಸಿ ಇದಕ್ಕಾಗಿ ಪ್ರತ್ಯೇಕ ಠಾಣೆಗಳನ್ನು ತೆರೆಯುವಂತೆ ನಿರ್ದೇಶನ ನೀಡಿತ್ತು.

Advertisement

ಒಂದು ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ತಡೆ ಪೊಲೀಸ್‌ ಠಾಣೆ ಹಾಗೂ ಇನ್ನೊಂದು ಮಂಗಳೂರು ಪೊಲೀಸ್‌ ಸೈಬರ್‌ ಠಾಣೆ ಆರಂಭಿಸಲು ನಿರ್ಧರಿಸಲಾಗಿದ್ದು, ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮಂಗಳೂರು ಸೈಬರ್‌ ಪೊಲೀಸ್‌ ಠಾಣೆಗೆ ಸವಿತ್ರ ತೇಜ ಇನ್‌ಸ್ಪೆಕ್ಟರ್‌ ಆಗಿ ಹಾಗೂ ಆರ್ಥಿಕ ಅಪರಾಧ ಮತ್ತು ಮಾದಕದ್ರವ್ಯ ತಡೆ ಪೊಲೀಸ್‌ ಠಾಣೆಗೆ ಮಹಮ್ಮದ್‌ ಶರೀಫ್‌ ಇನ್‌ಸ್ಪೆಕ್ಟರ್‌ ಆಗಿ ನಿಯೋಜನೆಗೊಂಡಿದ್ದಾರೆ.

ಆರ್ಥಿಕ ಅಪರಾಧ, ಮಾದಕದ್ರವ್ಯ ತಡೆ ಪೊಲೀಸ್‌ ಠಾಣೆ
ಈ ಠಾಣೆಯಲ್ಲಿ ಗಾಂಜಾ, ಮಾದಕ ದ್ರವ್ಯ, 25 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ವಂಚನೆ, ಅಕ್ರಮ ಲಾಟರಿ, ಅಬಕಾರಿ, ಸಂಘಟಿತ ಅಪರಾಧ, ಖೋಟಾನೋಟು ಪ್ರಕರಣ, ಮಾನವ ಕಳ್ಳಸಾಗಾಣಿಕೆ, ಸಹಕಾರಿ ಸಂಘಗಳಿಂದ ವಂಚನೆ, ಆ್ಯಸಿಡ್‌ ದಾಳಿ ಪ್ರಕರಣಗಳು ದಾಖಲಾಗಲಿವೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿರುವ ಈ ರೀತಿಯ ವಿಶೇಷ ಪ್ರಕರಣಗಳನ್ನು ಈ ಠಾಣೆ ಜವಾಬ್ದಾರಿ ವಹಿಸಿಕೊಂಡು ನಿರ್ವಹಿಸಲಿದೆ.

ಸಿಟಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆ: ಸಿಟಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಫೇಸ್‌ ಬುಕ್‌, ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಸಂಬಂಧಿತ ಪ್ರಕರಣ, ಇಂಟರ್‌ನೆಟ್‌ ಮೂಲಕ ಹಣ ವಂಚನೆ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ಸಂಬಂಧಿತ ಪ್ರಕರಣಗಳು ದಾಖಲಾಗಿ ತನಿಖೆ ನಡೆಯಲಿದೆ. ಈ ಎರಡೂ ಠಾಣೆಗಳೂ 2000ರ ಕಾಯ್ದೆಯಡಿ (2002ರಲ್ಲಿ ತಿದ್ದುಪಡಿ) ನಗರದಲ್ಲಿ ನಡೆಯುವ ವಿಶೇಷ ಪ್ರಕರಣಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ತನಿಖೆ ನಡೆಸಲಿವೆ.

ಆರ್ಥಿಕ ಅಪರಾಧ ಮತ್ತು ಮಾದಕದ್ರವ್ಯ 
ತಡೆ ಪೊಲೀಸ್‌ ಠಾಣೆ (ನ್ಯಾರ್ಕೊಟಿಕ್‌ ಆ್ಯಂಡ್‌ ಇಕೋನಾಮಿಕ್ಸ್‌ ಒಫೆನ್ಸ್‌): ಇನ್‌ಸ್ಪೆಕ್ಟರ್‌- ಮಹಮ್ಮದ್‌ ಶರೀಫ್‌, ಸಿಬಂದಿ: 1 ಇನ್ಸ್‌ಪೆಕ್ಟರ್‌, 2 ಪಿಎಎಸ್‌ಐ, 6 ಎಚ್‌ಸಿ, 15 ಪಿಸಿ. ಸ್ಥಳ: ದಕ್ಷಿಣ (ಪಾಂಡೇಶ್ವರ) ಪೊಲೀಸ್‌ ಠಾಣೆಯ 2ನೇ ಮಹಡಿ. ದೂರುಗಳಿದ್ದರೆ 0824-2220594, 9620298444 ನೀಡಬಹುದು.

Advertisement

ಸಿಟಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆ 
ಇನ್‌ಸ್ಪೆಕ್ಟರ್‌: ಸವಿತ್ರ ತೇಜ, ಸಿಬಂದಿ: 1 ಇನ್‌ಸ್ಪೆಕ್ಟರ್‌, 2ಪಿಎಎಸ್‌ಐ, 6 ಎಚ್‌ಸಿ, 15 ಪಿಸಿ. ಸ್ಥಳ: ಹಳೆ ಸಂಚಾರಿ ಪಶ್ಚಿಮ ಠಾಣೆ, ಬಂದರ್‌. ದೂರುಗಳಿದ್ದರೆ 0824-2220844, 9449020335 ನೀಡಬಹುದು.

– ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next