ಬೆಳಗಾವಿ: ಭವಿಷ್ಯದ ದೃಷ್ಟಿಯಿಂದ ಬ್ಯಾಟರಿ ತ್ಯಾಜ್ಯ ವಿಲೇವಾ ರಿಗೆ ಸಂಬಂಧಿಸಿ ಶೀಘ್ರ ರಾಜ್ಯ ದಲ್ಲಿ ಪ್ರತ್ಯೇಕ ಕಾನೂನು ಜಾರಿಗೊಳಿ ಸಲಾಗುವುದು ಎಂದು ಪರಿಸರ ಸಚಿವ ಆನಂದ್ ಸಿಂಗ್ ತಿಳಿಸಿದರು.
ಪರಿಷತ್‌ನಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಮತ್ತು ಬಿಜೆಪಿಯ ಡಿ.ಎಸ್.ಅರುಣ್ ಜಂಟಿಯಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿದ್ಯುತ್‌ಚಾಲಿತ ವಾಹನಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ಬ್ಯಾಟರಿಗಳು ಮತ್ತೂಂದು ರೀತಿಯ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬ್ಯಾಟರಿ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಕಾನೂನು ತರಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಪೌರಾಡಳಿತ ನಿರ್ದೇಶನಾಲಯ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿರುವ ಮಾಹಿತಿ ಪ್ರಕಾರ ಪ್ರಸ್ತುತ ವಾರ್ಷಿಕ 43ರಿಂದ 42 ಲಕ್ಷ ಟನ್ ಘನತ್ಯಾಜ್ಯ ಉತ್ಪಾದನೆ ಯಾಗುತ್ತಿದೆ. ಇದರಲ್ಲಿ ಸಂಸ್ಕರಣೆ ಮತ್ತು ಮರುಬಳಕೆ ಘಟಕಗಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಿರುವ ಮಾಹಿತಿಯಂತೆ ಸರಾಸರಿ 50 ಸಾವಿರ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದೆ ಎಂದರು.
ರಾಜ್ಯದಲ್ಲಿ ಇದುವರೆಗೆ 180 ಇ-ತ್ಯಾಜ್ಯ ಸಂಸ್ಕರಣೆ ಮತ್ತು ಮರು ಬಳಕೆ ಘಟಕಗಳು ಸ್ಥಾಪನೆಗೆ ಅನುಮತಿ ಪತ್ರಗಳನ್ನು ಪಡೆದಿದ್ದು, ಇದರಲ್ಲಿ 93 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 47 ಸ್ಥಾಪನಾ ಹಂತದಲ್ಲಿವೆ. 40 ಘಟಕಗಳು ಮುಚ್ಚಲ್ಪಟ್ಟಿವೆ ಎಂದರು.
ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ, ಒಂದು ಟನ್ ಚಿನ್ನದ ಅದಿರಿನಿಂದ ಕೇವಲ 6 ಗ್ರಾಂ ಚಿನ್ನ ದೊರೆಯುತ್ತದೆ. ಅದೇ ಒಂದು ಟನ್ ಇ-ತ್ಯಾಜ್ಯದಲ್ಲಿ 24 ಗ್ರಾಂ ಚಿನ್ನ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಇ-ತ್ಯಾಜ್ಯ ತುಂಬಾ ಮಹತ್ವ ಪಡೆದುಕೊಂಡಿದೆ. ಆದರೆ, ನಮ್ಮಲ್ಲಿ ಇದರ ಸಂಸ್ಕರಣೆ ಸರಿಯಾಗಿ ಆಗುತ್ತಿಲ್ಲ. ಪರಿಸರದ ದೃಷ್ಟಿಯಿಂದ ಇದರ ವ್ಯವಸ್ಥಿತ ಸಂಸ್ಕರಣೆ ಅಗತ್ಯ ವಾಗಿದೆ ಎಂದು ಪ್ರತಿಪಾದಿಸಿದರು.